ಗುರುವಾರ , ಡಿಸೆಂಬರ್ 1, 2022
20 °C
ಉತ್ತಮ ಇಳುವರಿ, ಹೆಚ್ಚಿನ ಎಣ್ಣೆ ಅಂಶ ಇದ್ದರೂ ಆಸಕ್ತಿ ತೋರದ ಖರೀದಿದಾರರು

ಹೊಸದುರ್ಗ: ಮಾರಾಟವಾಗದೇ ಉಳಿದ ‘ಕದರಿ ಲೇಪಾಕ್ಷಿ’ ಶೇಂಗಾ

ಶ್ವೇತಾ ಜಿ. Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಹೊಸದಾಗಿ ಪರಿಚಯಿಸಿದ್ದ ಕದರಿ ಲೇಪಾಕ್ಷಿ ತಳಿಯ ಶೇಂಗಾ ಖರೀದಿಗಾಗಿ ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ರೈತರಲ್ಲಿ ಆತಂಕ ಮನೆಮಾಡಿದೆ.

ಸೀಮಾಂಧ್ರದ ಕದರಿ ಕೃಷಿ ಸಂಶೋಧನಾ ಕೇಂದ್ರ ಸಿದ್ಧಪಡಿಸಿದ್ದ ಕದರಿ ಲೇಪಾಕ್ಷಿ ಶೇಂಗಾ ತಳಿಯನ್ನು ಈ ಬಾರಿ ತಾಲ್ಲೂಕಿನಾದ್ಯಂತ ಪರಿಚಯಿಸಲಾಗಿತ್ತು.

ಉತ್ತಮ ಫಸಲು ಬಂದಿದೆ. ಈ ಬೆಳೆಗೆ ಕೀಟ, ರೋಗ ಬಾಧೆಯೂ ಕಡಿಮೆ. ಹೆಚ್ಚಿನ ಆದಾಯದ ನಿರೀಕ್ಷೆಯಿತ್ತು. ಆದರೆ ವರ್ತಕರು ಈ ತಳಿಯ ಕಾಳು ದಪ್ಪ ಹಾಗೂ ಎಣ್ಣೆ ಅಂಶ ಜಾಸ್ತಿ ಎಂಬ ಕಾರಣ ನೀಡಿ ಖರೀದಿಸಲು ಮುಂದೆ ಬರುತ್ತಿಲ್ಲ ಎಂದು ರೈತ ಸಾ.ಚ. ಮಂಜು ಹೇಳಿದರು.

ಈ ಭಾಗದಲ್ಲಿ ಶೇಂಗಾವನ್ನು ಎಣ್ಣೆ ಮಾಡಲು ಬಳಸುವುದಿಲ್ಲ. ಹೆಚ್ಚಿನವರು ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ. ಹೀಗಾಗಿ ಖರೀದಿದಾರರು ಮುಂದೆ ಬರುತ್ತಿಲ್ಲ. ಚಳ್ಳಕೆರೆ ಭಾಗದಲ್ಲಿ ಎಣ್ಣೆ ಮಿಲ್‌ಗಳಿವೆ. ಆದರೆ, ಅಲ್ಲಿ ಕಡಿಮೆ ದರಕ್ಕೆ ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.

‘ಕದರಿ ಲೇಪಾಕ್ಷಿ ತಳಿಯ ಶೇಂಗಾವನ್ನು ಎಪಿಎಂಸಿಗೆ ಮಾರಾಟಕ್ಕೆ ತಂದಿದ್ದೆವು. ಖರೀದಿಸಲು ವರ್ತಕರು ಮುಂದೆ ಬರಲಿಲ್ಲ. ಚಳ್ಳಕೆರೆಗೆ ಹೋಗಿ ಮಾರಾಟ ಮಾಡುವಂತೆ ಹಲವರು ಸೂಚಿಸಿದ್ದಾರೆ. ಟಿಎಂಸಿ– 2 ತಳಿಯ ಶೇಂಗಾ ದರ ₹ 6,500ರಿಂದ ₹ 6, 800 ಇದೆ. ಆದರೆ ಕದರಿ ಲೇಪಾಕ್ಷಿ ತಳಿ ₹ 4000 ಇದೆ. ಹೀಗಾಗಿ ಮನೆಯಲ್ಲೇ ಇಟ್ಟುಕೊಂಡಿದ್ದೇವೆ’ ಎನ್ನುತ್ತಾರೆ ರೈತ ಡಿ.ಸಿ. ಪ್ರವೀಣ್.

‘ಕದ್ರಿ ಲೇಪಾಕ್ಷಿ ಶೇಂಗಾ ತಳಿ ಖರೀದಿಗೆ ವರ್ತಕರು ಮುಂದೆ ಬರುತ್ತಿಲ್ಲ. ಅವರಿಗೆ ನಿರ್ದೇಶನ ನೀಡಿದರೂ ಪ್ರಯೋಜನವಾಗಿಲ್ಲ. ಕೆಲ ರೈತರು ವಾಪಸ್‌ ತೆಗೆದುಕೊಂಡು ಹೋಗಿದ್ದಾರೆ’ ಎಂದು ಎಪಿಎಂಸಿ ಮಾರುಕಟ್ಟೆ ಅಧಿಕಾರಿ ಗೌತಮ್ ತಿಳಿಸಿದರು.

‘ಕದರಿ ಲೇಪಾಕ್ಷಿ ಶೇಂಗಾ ತಳಿ ಇತರೆ ಶೇಂಗಾಕ್ಕಿಂತ ಶೇ 25-30 ರಷ್ಟು ಅಧಿಕ ಇಳುವರಿ ನೀಡುತ್ತದೆ. ಎಣ್ಣೆ ಅಂಶ ಶೇ 51ರಷ್ಟು ಹೆಚ್ಚಿರುತ್ತದೆ. ಶೇಂಗಾಕ್ಕೆ ಬೀಳುವ ತುಕ್ಕು ರೋಗ ಇದಕ್ಕೆ ತಗುಲುವುದಿಲ್ಲ‌’ ಎಂದು ಸಹಾಯಕ ಕೃಷಿ ನಿರ್ದೇಶಕ ಈಶ ತಿಳಿಸಿದರು.

ಕದರಿ ಲೇಪಾಕ್ಷಿ ತಳಿಯ ಶೇಂಗಾ ಬಗ್ಗೆ ರೈತರಿಗೆ ಒಳ್ಳೆಯ ಅಭಿಪ್ರಾಯವಿದೆ. ಇದನ್ನು ಖರೀದಿಸುವಂತೆ ಸೂಚಿಸಲು ವರ್ತಕರಿಗೆ ನಿರ್ದೇಶನ ನೀಡಲಾಗುವುದು.

–ಈಶ, ಸಹಾಯಕ ಕೃಷಿ ನಿರ್ದೇಶಕ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು