ಶನಿವಾರ, ಜುಲೈ 24, 2021
28 °C

ಚಿಕ್ಕಮ್ಮನಹಳ್ಳಿ: ಕೋಲಾರ ಮಾದರಿಯ ಟೊಮೆಟೊ ಮಾರುಕಟ್ಟೆ ಆರಂಭ

ಶಿವಗಂಗಾ ಚಿತ್ತಯ್ಯ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮ್ಮನಹಳ್ಳಿ (ಚಳ್ಳಕೆರೆ): ದೊಡ್ಡ ಉಳ್ಳಾರ್ತಿ ಗ್ರಾಮದ ವೆಂಕಟೇಶ ರೆಡ್ಡಿ ಹಾಗೂ ಆಂಧ್ರಪ್ರದೇಶ ಮೂಲದ ಗುರುಮೂರ್ತಿ ಇಬ್ಬರೂ ಜೊತೆಗೂಡಿ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ಸಮೀಪದ ಬಳ್ಳಾರಿ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಬಳಿ ಕೋಲಾರ ಮಾದರಿಯ ಟೊಮೆಟೊ ಮಾರುಕಟ್ಟೆ ಕೇಂದ್ರ ಆರಂಭಿಸಿದ್ದಾರೆ. ಜಿಲ್ಲಾ ಕೇಂದ್ರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಮಾರುಕಟ್ಟೆ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಆಸಕ್ತಿ ತೋರದ ಕಾರಣ ಹಾಗೂ ಸ್ಥಳೀಯ ಬೆಳೆಗಾರರ ಸಂಕಷ್ಟ ಮನಗಂಡು ಈ ಕೇಂದ್ರ ಸ್ಥಾಪಿಸಿದ್ದಾರೆ.

ಮೊದಲ ದಿನವೇ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಅನಂತಪುರ, ಕಲ್ಯಾಣದುರ್ಗ, ರಾಯದುರ್ಗ ಮುಂತಾದ ಭಾಗಗಳಿಂದ 12 ಕೆ.ಜಿ. ಟೊಮೆಟೊ ಇರುವ 5,000ಕ್ಕೂ ಹೆಚ್ಚು ಬಾಕ್ಸ್‌ಗಳು ಪ್ರತಿ ಬಾಕ್ಸ್‌ಗೆ ಕನಿಷ್ಠ ₹ 50ರಿಂದ ₹ 200ರವರೆಗೆ ಉತ್ತಮ ಬೆಲೆಗೆ ಮಾರಾಟವಾಗಿವೆ ಎಂದು ತಿಳಿದುಬಂದಿದೆ. ಸ್ಥಳೀಯವಾಗಿ ಟೊಮೆಟೊ ಮಾರುಕಟ್ಟೆ ಕೇಂದ್ರ ಆರಂಭವಾಗಿರುವುದು ತಾಲ್ಲೂಕಿನ ಟೊಮೆಟೊ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಈರುಳ್ಳಿ ಬದಲು ಟೊಮೆಟೊ ಬೆಳೆಯಲು ಉತ್ಸಾಹ ತೋರಿಸುತ್ತಿದ್ದಾರೆ.

ಕೋವಿಡ್ ಹಾಗೂ ಲಾಕ್‍ಡೌನ್ ಸಂದರ್ಭದಲ್ಲಿ ಹೊಲದಲ್ಲಿ ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಬೆಳೆಗಾರರಿಗೆ ತೀವ್ರ ತೊಂದರೆ ಉಂಟಾಗಿತ್ತು. ಬೆಳೆದ ಬೆಳೆಗೆ ಬೆಂಬಲ ಬೆಲೆ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಬೆಳೆಗಳನ್ನು ಹೊಲದಲ್ಲಿಯೇ ಕೊಳೆಯಲು ಬಿಟ್ಟು ಕೆಲ ಬೆಳೆಗಾರರು ಭಾರಿ ನಷ್ಟ ಅನುಭವಿಸಿದ್ದರು. ಈ ಭಾಗದಲ್ಲಿ ಬೆಳೆದ ಟೊಮೆಟೊವನ್ನು ಕೋಲಾರ ಹಾಗೂ ಅನಂತಪುರಕ್ಕೆ ಸಾಗಿಸಲು ಬೆಳೆಗಾರರಿಗೆ ದುಬಾರಿ ಆಗುತ್ತಿತ್ತು. 340 ಕಿ.ಮೀ ತಲುಪಲು ಹಗಲು–ರಾತ್ರಿ ಪ್ರಯಾಣ ಬೆಳೆಸಬೇಕಿತ್ತು. ಆ ದಿನ ಟೆಂಡರ್ ಅಗದೇ ಇದ್ದರೆ ಮಾರುಕಟ್ಟೆಯಲ್ಲೇ ಉಳಿಯಬೇಕಿತ್ತು. ಊಟ, ವಸತಿ, ಬೆಳೆ ಸಾಗಣೆ ವೆಚ್ಚ ಸೇರಿ ಸಾಕಷ್ಟು ಪ್ರಮಾಣದಲ್ಲಿ ವೆಚ್ಚವಾಗುತ್ತಿತ್ತು ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.

ಬಹಿರಂಗ ಹರಾಜು: ‘ಸ್ಥಳೀಯ ಟೊಮೆಟೊ ಮಾರುಕಟ್ಟೆಯಲ್ಲಿ ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ವ್ಯಾಪಾರ ವಹಿವಾಟು ನಡೆಯುತ್ತದೆ. ಬಹಿರಂಗ ಹರಾಜಿನ ಅವಕಾಶ ಕಲ್ಪಿಸಲಾಗಿದೆ. ಹಣ್ಣಿನ ಗಾತ್ರ, ಗುಣಮಟ್ಟ, ಬಣ್ಣ ಹಾಗೂ ಗ್ರೇಡ್ ಆಧರಿಸಿ ಬೆಲೆ ನೀಡಲಾಗುತ್ತದೆ. 12 ಕೆ.ಜಿ. ತೂಕದ ಬಾಕ್ಸ್ ಟೊಮೆಟೊಗೆ ಕನಿಷ್ಠ ₹ 120ರಿಂದ ₹ 220 ಬೆಲೆ ನೀಡಲಾಗುವುದು. ಮೊದಲ ದಿನವೇ 5 ಸಾವಿರ, ಎರಡನೇ ದಿನ 10 ಸಾವಿರ, ನಾಳೆ 15 ಸಾವಿರ ಟೊಮೆಟೊ ಬಾಕ್ಸ್ ಬರುವ ನಿರೀಕ್ಷೆ ಇದೆ’ ಎಂದು ಮಾರುಕಟ್ಟೆ ಮಾಲೀಕ ವೆಂಕಟೇಶ ರೆಡ್ಡಿ ಹೇಳಿದರು.

ಬೆಳೆಗಾರರಿಗೆ ಅನುಕೂಲ

ಬೆಳೆದ ಟೊಮೊಟೊಗಳನ್ನು ವರ್ತಕರ ಮೂಲಕ ಕೋಲಾರಕ್ಕೆ ಸಾಗಿಸಬೇಕಿತ್ತು. ಇದರಿಂದ ರೈತರಿಗೆ ನೈಜ ಬೆಲೆ ತಿಳಿಯುತ್ತಿರಲಿಲ್ಲ. ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ರೈತರೇ ನೇರವಾಗಿ ಮಾರಾಟ ಮಾಡಲು ಅವಕಾಶವಿದೆ. ಸಾಗಣೆ ವೆಚ್ಚ ಉಳಿಯುತ್ತದೆ. ಮಾರುಕಟ್ಟೆ ಕೇಂದ್ರದಿಂದ ಬೆಳೆಗಾರರಿಗೆ ತುಂಬಾ ಅನುಕೂಲವಾಗಿದೆ.

- ಡಾ.ವಿರೂಪಾಕ್ಷಪ್ಪ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು