ಗುರುವಾರ , ಆಗಸ್ಟ್ 11, 2022
23 °C

PV Web Exclusive | ಚಿತ್ರದುರ್ಗ ಬೆಟ್ಟ ಚಾರಣಿಗರ ಸ್ವರ್ಗ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸೂರ್ಯ ಆಗಷ್ಟೇ ಆಗಸದಲ್ಲಿ ಉದಯಿಸುತ್ತಿದ್ದ. ಕತ್ತಲು ಸರಿಯುವ ಮುನ್ನವೇ ಚಂದ್ರವಳ್ಳಿ ಅಂಗಳಕ್ಕೆ ಕಾಲಿಟ್ಟವರಿಗೆ ನಿಧಾನವಾಗಿ ಎಲ್ಲವೂ ಗೋಚರವಾಗತೊಡಗಿತು. ಧವಳಪ್ಪನಗಿರಿ ಬೆಟ್ಟದ ಬಂಡೆಗಳು ಬಣ್ಣ ಪಡೆದಂತೆ ಭಾಸವಾಗುತ್ತಿದ್ದವು. ಹಸಿರು ಹೊದ್ದು ಮಲಗಿದ್ದ ಬೆಟ್ಟದ ಸೌಂದರ್ಯ ಮನಸಿಗೆ ಮುದ ನೀಡುತ್ತಿತ್ತು. ಟ್ರ್ಯಾಕ್‌ ಪ್ಯಾಂಟ್‌, ಶೂ, ಬೆನ್ನಿಗೆ ಬ್ಯಾಗ್‌ ಹಾಕಿಕೊಂಡು ಸಜ್ಜಾಗಿದ್ದವರು ಚಾರಣಕ್ಕೆ ಮುಂದಡಿ ಇಟ್ಟರು.

ಚಾರಣ ಎಂದಾಕ್ಷಣ ಪಶ್ಚಿಮಘಟ್ಟದ ಕಾಡು ನೆನಪಾಗುತ್ತದೆ. ದಟ್ಟ ಕಾನನದ ಹಲವು ತಾಣಗಳು ಮನಸಿನಲ್ಲಿ ಹಾದು ಹೋಗುತ್ತವೆ. ಆದರೆ, ಚಿತ್ರದುರ್ಗ ಚಾರಣದ ತಾಣಗಳು ಭಿನ್ನ. ಕುರುಚಲು ಕಾಡಿನ ನಡುವೆ ಮೇಲೆದ್ದ ಬಂಡೆಗಳಲ್ಲಿ ನಡೆದಾಡುವ ಅನುಭವ ಅಪರೂಪದ್ದು. ಚಿತ್ರದುರ್ಗ ಸಮೀಪದ ಜೋಗಿಮಟ್ಟಿ, ಧವಳಪ್ಪನಗಿರಿ, ಅಹೋಬಲ ನರಸಿಂಹಸ್ವಾಮಿ ಬೆಟ್ಟ, ವಿ.ವಿ.ಸಾಗರದ ಹಿನ್ನೀರು, ಮೊಳಕಾಲ್ಮುರು ತಾಲ್ಲೂಕಿನ ನುಂಕಿಮಲೆ ಸಿದ್ಧೇಶ್ವರ ಬೆಟ್ಟ ಚಾರಣಿಗರನ್ನು ಕೈಬೀಸಿ ಕರೆಯುತ್ತಿವೆ.

ಪ್ರವಾಸೋದ್ಯಮದ ಮತ್ತೊಂದು ಆಯಾಮದಂತೆ ಚಾರಣ ಬೆಳೆಯುತ್ತಿದೆ. ಐತಿಹಾಸಿಕ ಕೋಟೆ, ವಿ.ವಿ.ಸಾಗರ ಜಲಾಶಯ ಕಣ್ತುಂಬಿಕೊಳ್ಳಲು ಬರುವವರನ್ನು ಚಾರಣಕ್ಕೆ ಕರೆದೊಯ್ಯುವ ಹಲವು ತಂಡಗಳು ಕೋಟೆನಾಡಲ್ಲಿ ಸಕ್ರಿಯವಾಗಿವೆ. ಮೈಸೂರು ಮತ್ತು ಬೆಂಗಳೂರು ಯೂತ್‌ ಹಾಸ್ಟೆಲ್‌ ಆಯೋಜಿಸುವ ಚಾರಣದಲ್ಲಿ ಚಿತ್ರದುರ್ಗದ ಬೆಟ್ಟಗಳು ಸ್ಥಾನ ಪಡೆಯುತ್ತಿವೆ. ಚಾರಣದ ಭಿನ್ನ ಅನುಭವಕ್ಕೆ ಚಿತ್ರದುರ್ಗದ ಬೆಟ್ಟಗಳನ್ನು ಹತ್ತಿಳಿಯಬೇಕು ಎಂಬುದು ಪ್ರವಾಸಿಗರ ಅಭಿಮತ.

ಸುಮಾರು ಹತ್ತು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿರುವ ಜೋಗಿಮಟ್ಟಿ ಚಾರಣಕ್ಕೆ ಅತ್ಯುತ್ತಮ ತಾಣ. ಚಂದ್ರವಳ್ಳಿ ಕೆರೆ, ತಿಮ್ಮಣ್ಣನಾಯಕನ ಕೆರೆ, ಎಂಗಮ್ಮನಕಟ್ಟೆ ಹಾಗೂ ಇಂಗಳದಾಳ್‌ ಗ್ರಾಮದ ಮೂಲಕ ಜೋಗಿಮಟ್ಟಿಗೆ ಚಾರಣಕ್ಕೆ ತೆರಳಲು ಮಾರ್ಗಗಳಿವೆ. ಚಂದ್ರವಳ್ಳಿ ಕೆರೆಯಿಂದ ತೆರಳುವ ಮಾರ್ಗವನ್ನೇ ಬಹುತೇಕರು ಇಷ್ಟಪಡುತ್ತಾರೆ. ಜೋಗಿಮಟ್ಟಿ ಅತಿಥಿಗೃಹ ಚಂದ್ರವಳ್ಳಿಯಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಬೆಳಿಗ್ಗೆ 6ಕ್ಕೆ ಚಾರಣ ಹೊರಟರೆ ಮಧ್ಯಾಹ್ನದ ಹೊತ್ತಿಗೆ ಅತಿಥಿಗೃಹ ತಲುಪಬಹುದು. ಇದೇ ಮಾರ್ಗದಲ್ಲಿ ಮರಳಿದರೆ ಸಂಜೆ 5ಕ್ಕೆ ಚಂದ್ರವಳ್ಳಿ ಅಂಗಳಕ್ಕೆ ಇಳಿಯಬಹುದು.

ವ್ಯಕ್ತಿಯಷ್ಟೇ ಎತ್ತರದಲ್ಲಿ ಬೆಳೆದ ಕುರುಚಲು ಕಾಡು ಬೆಟ್ಟವನ್ನು ಆವರಿಸಿದೆ. ಮುಳ್ಳು ಪೊದೆಗಳೇ ಹೆಚ್ಚಾಗಿರುವ ಬೆಟ್ಟವನ್ನು ಮೇಲೇರಿದಂತೆ ಹಸಿರು ಕಂಗೊಳಿಸುತ್ತದೆ. ಪಶ್ಚಿಮ ಘಟ್ಟದ ಶೋಲಾ ಅರಣ್ಯದಲ್ಲಿ ಬೆಳೆದ ಹುಲ್ಲು ಈ ಬೆಟ್ಟಗಳನ್ನೂ ಆವರಿಸಿದೆ. ಜೋಗಿಮಟ್ಟಿ ವನ್ಯಧಾಮ ಮಾತ್ರ ಕಾಡಿನ ಅನುಭವ ನೀಡುತ್ತದೆ. ಬಯಲು ಸೀಮೆಯ ಕಾಡು ಪ್ರಾಣಿ ಹಾಗೂ ಪಕ್ಷಿಗಳು ಕಣ್ಣಿಗೆ ಬೀಳುತ್ತವೆ.

‘ಅಕ್ಟೋಬರ್‌, ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳು ಚಾರಣಕ್ಕೆ ಸೂಕ್ತ. ಚಳಿಗಾಲದ ಅವಧಿಯಲ್ಲಿ ಬಿಸಿಲು ಅಡ್ಡಿಯಾಗದು. ಹಿಂಗಾರು ಮಳೆಗೆ ಝರಿಗಳು ಮೈದುಂಬಿ ಹರಿಯುತ್ತವೆ. ಕೆಲವೆಡೆ ಸೃಷ್ಟಿಯಾದ ಜಲಪಾತಗಳು ಕಣ್ಮನ ಸೆಳೆಯುತ್ತವೆ. ಅರ್ಧ ದಿನ, ಒಂದು ದಿನ ಹಾಗೂ ಎರಡು ದಿನ ಚಾರಣ ಮಾಡುವಂತಹ ಸ್ಥಳಗಳು ಚಿತ್ರದುರ್ಗ ಆಸುಪಾಸಿನಲ್ಲಿವೆ’ ಎನ್ನುತ್ತಾರೆ ಚಾರಣ ದ ಮಾರ್ಗದರ್ಶಕ ಮಿಠಾಯಿ ಮುರುಗೇಶ್‌.

ಚಾರಣಕ್ಕೆ ಟ್ರ್ಯಾಕ್‌ ಪ್ಯಾಂಟ್‌, ಟೀ ಶರ್ಟ್‌, ಶೂ ಹಾಗೂ ತಲೆಗೆ ಟೋಪಿ ಕಡ್ಡಾಯ. ಟಾರ್ಚ್‌ ಹಾಗೂ ಪ್ರಥಮ ಚಿಕಿತ್ಸಾ ಕಿಟ್‌ ಇದ್ದರೆ ಅನುಕೂಲ. ಬೆಟ್ಟದಲ್ಲಿ ಕುಡಿಯುವ ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಬಾಟಲಿ ತೆಗೆದುಕೊಂಡು ಹೋಗುವುದು ಸೂಕ್ತ. ಬೆಳಗಿನ ಉಪಾಹಾರ ಸೇವಿಸಿ ಚಾರಣ ಆರಂಭಿಸುವುದು ಒಳಿತು. ಬೆಟ್ಟದ ಮೇಲೆ ಮತ್ತೊಮ್ಮೆ ಲಘು ಉಪಾಹಾರಕ್ಕೆ ವ್ಯವಸ್ಥೆ ಮಾಡಿಕೊಂಡರೆ ಮಧ್ಯಾಹ್ನದ ಹೊತ್ತಿಗೆ ಜೋಗಿಮಟ್ಟಿ ಅತಿಥಿ ಗೃಹದಲ್ಲಿ ಊಟ ಸೇವಿಸಬಹುದು. ಅತ್ಯಂತ ಹೆಚ್ಚು ಗಾಳಿ ಬೀಸುವ ಸ್ಥಳದಲ್ಲಿರುವ ಅತಿಥಿ ಗೃಹದ ವಾತಾವರಣ ಊಟಿಯಷ್ಟೇ ಹಿತಕರ.

ಕೊಂಡುಕುರಿ, ಮೊಲ, ನವಿಲು ಹಾಗೂ ಜಿಂಕೆ ದರ್ಶನ ನೀಡುತ್ತವೆ. ಅಪರೂಪಕ್ಕೆ ಚಿರತೆ, ಕಾಡುಹಂದಿ ಹಾಗೂ ಕರಡಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬೇರೆ ಊರಿನಿಂದ ಬರುವ ಪ್ರವಾಸಿಗರು ಏಕಾಂಗಿಯಾಗಿ ಚಾರಣ ಕೈಗೊಳ್ಳುವುದು ಕೊಂಚ ಅಪಾಯ. ಕೊಳಕುಮಂಡಲ ಸೇರಿದಂತೆ ಕೆಲವು ಅಪಾಯಕಾರಿ ಹಾವುಗಳು ಇಲ್ಲಿವೆ. ಹೀಗಾಗಿ, ಸ್ಥಳೀಯರ ಮಾರ್ಗದರ್ಶನದಲ್ಲಿ ಹೆಜ್ಜೆ ಹಾಕುವುದು ಒಳಿತು. ಜೋಗಿಮಟ್ಟಿ ವನ್ಯಧಾಮವಾಗಿ ಪರಿವರ್ತನೆಯಾದ ಬಳಿಕ ಚಾರಣಕ್ಕೆ ಅರಣ್ಯ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ.

ಧವಳಪ್ಪನಗಿರಿ ಮಕ್ಕಳ ಚಾರಣಕ್ಕೆ ಸೂಕ್ತವಾದ ತಾಣ. ನಾಲ್ಕೈದು ಕಿ.ಮೀ ವ್ಯಾಪ್ತಿಯಲ್ಲಿ ಚಾರಣ ಮಾಡಬಹುದು. ಅಂಕಲಿಮಠದ ಬಳಿ ಶತಮಾನಗಳ ಹಿಂದೆ ನಿರ್ಮಾಣವಾದ ಗುಹೆ ಮೂಕವಿಸ್ಮಿತಗೊಳಿಸುತ್ತದೆ. ನಿಸರ್ಗದತ್ತವಾಗಿ ಸೃಷ್ಟಿಯಾಗಿರುವ ಕಲ್ಲಿನ ಗುಹೆಗಳು ಕುತೂಹಲ ಕೆರಳಿಸುತ್ತವೆ. ಬೆಟ್ಟದ ತಪ್ಪಲಿನ ಹಸಿರು, ಕೆರೆಯ ನೀರು ಮನಸನ್ನು ಮುದಗೊಳಿಸುತ್ತವೆ. ಅಹೋಬಲ ನರಸಿಂಹಸ್ವಾಮಿ ಬೆಟ್ಟ ಮಲೆನಾಡ ಅನುಭವ ನೀಡುತ್ತದೆ.

‘ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹಲವರು ಚಾರಣಕ್ಕೆ ಬರುತ್ತಿದ್ದರು. ಇಡೀ ದಿನ ಚಿತ್ರದುರ್ಗದಲ್ಲಿ ಕಳೆಯಲು ಇಷ್ಟಪಡುತ್ತಿದ್ದರು. ಇತ್ತೀಚೆಗೆ ಈ ಟ್ರೆಂಡ್‌ ಬದಲಾದಂತೆ ಕಾಣುತ್ತಿದೆ. ಅರ್ಧ ದಿನದ ಚಾರಣಕ್ಕೆ ಹೆಚ್ಚು ಜನರು ಒಲವು ತೋರುತ್ತಿದ್ದಾರೆ’ ಎಂಬುದು ಮುರುಗೇಶ್‌ ಅವರ ಅನುಭವ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು