ನಾಯಕನಹಟ್ಟಿ (ತುರುವನೂರು): ತುರುವನೂರು ಗ್ರಾಮದ ಆರಾಧ್ಯ ದೇವತೆ ಮಾರಿಕಾಂಬದೇವಿಯ ಜಾತ್ರೆಯು 9 ವರ್ಷಗಳ ಬಳಿಕ ನಡೆಯಲಿದ್ದು, ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಜಾತ್ರೆಗೆ ಚಾಲನೆ ದೊರೆಯಲಿದೆ.

ಗ್ರಾಮದ ಎಲ್ಲ ಸಮುದಾಯದವರ ಸಹಭಾಗಿತ್ವದಲ್ಲಿ ಮಾರಿಕಾಂಬದೇವಿ ಜಾತ್ರೆಯು ಸಂಪ್ರದಾಯದಂತೆ ನಡೆಯಲಿದ್ದು, ಜಾತ್ರೆಗಾಗಿ ತುರುವನೂರು ಗ್ರಾಮವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ದೇವಾಲಯಕ್ಕೆ ತಳಿರು ತೋರಣಗಳು, ಬಾಳೆಕಂದುಗಳು ವಿಶೇಷ ಮೆರುಗು ನೀಡಿವೆ.

ಕಾರ್ಯಕ್ರಮ ವಿವರ: ಮಂಗಳವಾರ ಬೆಳಿಗ್ಗೆ ಗ್ರಾಮಸ್ಥರು, ದೈವಸ್ಥರು ಜಾನಪದ ವಾದ್ಯಗಳೊಂದಿಗೆ ದೇವಿ ಉತ್ಸವಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ತುರುವನೂರು ಗ್ರಾಮದಿಂದ 8 ಕಿ.ಮೀ ದೂರದಲ್ಲಿರುವ ಆಕನೂರು ಗ್ರಾಮದ ಬಳಿ ಇರುವ ತಿರುವಿನ ಮಡುವಿಗೆ ಗಂಗಾಪೂಜೆಗೆ ಕೊಂಡೊಯ್ಯುವರು. ಅರ್ಚಕರು ಮತ್ತು ವಿಶ್ವಕರ್ಮ ಸಮಾಜದ ಶಿಲ್ಪಿಗಳು ಶಾಸ್ತ್ರೋಕ್ತವಾಗಿ ಹೋಮ– ಹವನಗಳ ಮೂಲಕ ದೇವಿಗೆ ಜೀವಕಳೆ ತುಂಬಿದಾಗ ಹೆಂಗಳೆಯರು ಪೂರ್ಣಕುಂಭಗಳೊಂದಿಗೆ ದೇವಿಗೆ ಗಂಗಾಪೂಜೆ ನೆರವೇರಿಸುವರು.

ನಂತರ ಬೊಗಳೆರಹಟ್ಟಿ ಗ್ರಾಮಕ್ಕೆ ಬಂದು ದುರುಗಮ್ಮ ದೇವಿಗೆ ನಮಿಸಿ ಮಾರ್ಗಮಧ್ಯದಲ್ಲಿ ಹವಳೆನಹಳ್ಳಿ ಗ್ರಾಮದ ಜನತೆ ಸಂಪ್ರದಾಯಂತೆ ದೇವಿಯನ್ನು ಪೂಜಿಸಿ ಬೀಳ್ಕೊಡುತ್ತಾರೆ. ತುರುವನೂರಿಗೆ ಸಂಜೆ ಬಂದು ವಿಶ್ವಕರ್ಮ ಸಮಾಜದ ಸಿದ್ದಣ್ಣಚಾರಿಯವರ ಮನೆಗೆ ತೆರಳಿ ಮಾಂಗಲ್ಯಧಾರಣೆ, ಹುಡಿ ಅಕ್ಕಿ ಶಾಸ್ತ್ರ ಮುಗಿಸಿಕೊಂಡು ಮೆರವಣಿಗೆಯ ಮೂಲಕ ರಾತ್ರಿ 8 ಗಂಟೆಗೆ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಗ್ರಾಮದ ಹಾಲುಮತ ಸಮುದಾಯದ ಕಜ್ಜಿಗೌಡ್ರು ಮನೆಯಿಂದ ಹೂವಿನ ತೊಟ್ಟುಲು ತಂದು ದೇವಿಗೆ ಅರ್ಪಿಸುತ್ತಾರೆ. ರೆಡ್ಡಿ ಸಮುದಾಯ ಪುಟ್ಲೂರು ವಂಶಸ್ಥರು ಮತ್ತು ಲಿಂಗಾಯತ ಸಮುದಾಯದ ತಿಮ್ಮನಗೌಡ್ರು ವಂಶಸ್ಥರ ಮನೆಯಿಂದ ಎಡೆಬಾನ ಸೋರೆ ತಂದು ರಾಯಚೂರು ಮಾರಮ್ಮ ಮತ್ತು ಗ್ರಾಮದೇವತೆ ಮಾರಿಕಾಂಬ ದೇವಿಗೆ ಎಡೆ ಹಾಕಲಾಗುತ್ತದೆ. ರಾಯನಹಳ್ಳಿ ಯಾದವ ಸಮುದಾಯದ ದೈವಸ್ಥರು ತಮ್ಮ ಭಾಗದ ಹರಕೆಯನ್ನು ಅರ್ಪಿಸುತ್ತಾರೆ.

ಬುಧವಾರ ಬೆಳಗಿನಜಾವ ತುರುವನೂರು ಗ್ರಾಮದ ಗಡಿಭಾಗದಲ್ಲಿ ನಿರ್ಮಿಸಿರುವ ಚೌಕಿಮನೆಗೆ ದೇವಿಯನ್ನು ಹೊತ್ತುತಂದು ಪ್ರತಿಷ್ಠಾಪಿಸಲಾಗುತ್ತದೆ. ನಂತರ ತುರುವನೂರು ಪರಿಶಿಷ್ಟ ಜಾತಿ ಸಮುದಾಯದಿಂದ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ಪಾಪೇನಹಳ್ಳಿ ಗ್ರಾಮದ ಅಸಾಧಿಗಳು ದೇವಿಗೆ ಹಾಡು ಹೇಳುವ ಮೂಲಕ ಕೊಂಡಾಡುತ್ತಾರೆ.

ಗುರುವಾರ ಸಂಜೆ 4 ಗಂಟೆಗೆ ವೀರಪೋತುರಾಜರಿಂದ ಸಂಭ್ರಮದ ಕಾರ್ಯಕ್ರಮ ನೆರವೇರಿಸುತ್ತಾರೆ. ಶುಕ್ರವಾರ ದೇವಿಯ ಉತ್ಸವಮೂರ್ತಿಯನ್ನು ಚೌಕಿಮನೆಯಿಂದ ವಾಪಸ್ ಗ್ರಾಮಕ್ಕೆ ಕುಂಭ ಕಳಸಗಳಿಂದ ಅದ್ದೂರಿ ಮೆರವಣಿಗೆಯ ಮೂಲಕ ಕರೆ ತರಲಾಗುತ್ತದೆ. ಅಂತಿಮವಾಗಿ ಶುಕ್ರವಾರ ಸಂಜೆ ದೇವಿಯನ್ನು ಶಾಸ್ತ್ರೋಕ್ತವಾಗಿ ಗುಡಿದುಂಬಿಸಲಾಗುತ್ತದೆ.

9 ವರ್ಷಗಳ ನಂತರ ಹಮ್ಮಿಕೊಂಡಿರುವ ಮೂರು ದಿನಗಳ ಅದ್ದೂರಿ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಗ್ರಾಮಸ್ಥರು ಕಾತರದಿಂದ ಎದುರು ನೋಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.