ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಯೋಜನೆ: 13 ವರ್ಷದಲ್ಲಿ ಶೇ 40ರಷ್ಟು ಕಾಮಗಾರಿ

ಪ್ರಗತಿ ಪರಿಶೀಲಿಸಿದ ಸಂಸದ ಎ.ನಾರಾಯಣಸ್ವಾಮಿ
Last Updated 9 ಮಾರ್ಚ್ 2021, 11:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಂಡು 13 ವರ್ಷ ಕಳೆದಿದ್ದು, ಶೇ 40ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಘೋಷಣೆಯಾಗುವುದರಿಂದ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಭದ್ರಾ ಮೇಲ್ದಂಡೆ ಯೋಜನೆಯ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಿಲ್ಲದೇ ಇದ್ದರೆ ಯೋಜನೆಯಿಂದ ಹೊರ ಹೋಗಿ’ ಎಂಬ ತಾಕೀತು ಮಾಡಿದರು.

‘ಭದ್ರಾ ಮೇಲ್ದಂಡೆಯ ಯೋಜನಾ ವೆಚ್ಚವನ್ನು ಸರ್ಕಾರ 21ಸಾವಿರ ಕೋಟಿಗೆ ಹೆಚ್ಚಿಸಿದೆ. ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಘೋಷಿಸುವ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಅನುಗುಣವಾದ ಪ್ರಗತಿ ಅನುಷ್ಠಾನದಲ್ಲಿ ಕಾಣುತ್ತಿಲ್ಲ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಯೋಜನೆಯ ಹಿನ್ನಡೆಗೆ ಕಾರಣವಾಗಿದೆ. ಭೂಸ್ವಾಧೀನ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು’ ಎಂದು ಸೂಚನೆ ನೀಡಿದರು.

90 ಕಿ.ಮೀ ಪೂರ್ಣ:ತುಂಗಾ ಜಲಾಶಯದ ಮುತ್ತಿನಕೊಪ್ಪದಿಂದ ಹೊಸದುರ್ಗ ತಾಲ್ಲೂಕಿನವರೆಗೆ ಸುಮಾರು 90 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಭೂ ಸ್ವಾಧೀನದಲ್ಲಿ ಆಗಿರುವ ಸಮಸ್ಯೆಯಿಂದ ಅಲ್ಲಲ್ಲಿ ತೊಡಕು ಉಂಟಾಗಿದೆ. ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅರಣ್ಯ ಇಲಾಖೆಯ ಅನುಮತಿ ಹಾಗೂ ನಾಲೆಯಲ್ಲಾದ ಬದಲಾವಣೆಯಿಂದ ಸಮಸ್ಯೆ ಆಗಿದೆ. ಜೂನ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಮುಖ್ಯ ಎಂಜಿನಿಯರ್‌ ರಾಘವನ್‌ ಭರವಸೆ ನೀಡಿದರು.

‘ಯೋಜನೆಗೆ ನಿಗದಿಯಾದ ನೀರನ್ನು ಜಲಾಶಯದಿಂದ ಹೊರಗೆ ತರಲು 13 ವರ್ಷಗಳಿಂದ ಹೆಣಗಾಡುತ್ತಿರುವ ರೀತಿ ಬೇಸರ ಮೂಡಿಸುತ್ತಿದೆ. ನೀರು ಹರಿಸುತ್ತೇವೆ ಎಂದು ಜನರಿಗೆ ನೀಡಿದ ಆಶ್ವಾಸನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರಿಗೆ ಸುಳ್ಳು ಹೇಳಲು ಆಗುವುದಿಲ್ಲ. ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ’ ಎಂದು ಕಿಡಿಕಾರಿದರು.

ಭೂಸ್ವಾಧೀನ ಅಧಿಕಾರಿಗೆ ಎಚ್ಚರಿಕೆ
ತರೀಕೆರೆ, ಕಡೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ವಿಳಂಬದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ನಾಲೆಯ 90 ಕಿ.ಮೀ ನಿಂದ 130 ಕಿ.ಮೀ ವ್ಯಾಪ್ತಿಯಲ್ಲಿ 780 ಎಕರೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿರುವುದು ಸಂಸದರ ಅಸಮಾಧಾನಕ್ಕೆ ಕಾರಣವಾಯಿತು. ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ ಎಂದು ಭೂಸ್ವಾಧೀನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ತುಮಕೂರು ಶಾಖಾ ನಾಲೆಯ ಕಾಮಗಾರಿ ವಿಳಂಬವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಸ್ವಾಧೀನ ತಡವಾಗುತ್ತಿದೆ. ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸ್ಪಂದಿಸುತ್ತಿಲ್ಲ. ಇದರಿಂದ ವಿ.ವಿ.ಸಾಗರಕ್ಕೆ ನಾಲೆ ಮೂಲಕ ನೀರು ತರಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಫೋಟ: ಅನುಮತಿಗೆ ಮನವಿ
ನೀರಾವರಿ ಯೋಜನೆಯ ಉದ್ದೇಶಕ್ಕೆ ನಿರ್ಮಿಸುವ ನಾಲೆಯ ಕಾಮಗಾರಿಗೆ ಪೂರಕವಾಗಿ ನಡೆಸುವ ಸ್ಫೋಟಕ್ಕೆ ವಿಶೇಷ ಅನುಮತಿ ಪಡೆಯಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಸಂಸದ ಎ.ನಾರಾಯಣಸ್ವಾಮಿ ಸೂಚನೆ ನೀಡಿದರು.

ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲುಗಣಿ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಿಂದ ಎಚ್ಚೆತ್ತ ಸರ್ಕಾರ ಹಲವು ನಿರ್ಬಂಧಗಳನ್ನು ವಿಧಿಸಿದೆ. ಸುಮಾರು ಮೂರು ಕಿ.ಮೀ ಕಾಮಗಾರಿಗೆ ಇದರಿಂದ ತೊಂದರೆ ಉಂಟಾಗಿದೆ. ಯಂತ್ರ ಬಳಸಿ ಸುರಂಗ ನಿರ್ಮಿಸಲು ಹೆಚ್ಚು ಸಮಯ ಹಿಡಿಯುತ್ತದೆ. ಸ್ಫೋಟಕ್ಕೆ ಅವಕಾಶ ಕಲ್ಪಿಸಿದರೆ ಅನುಕೂಲ ಎಂದು ಅಧಿಕಾರಿಗಳು ಗಮನ ಸೆಳೆದರು.

ತರೀಕೆರೆ ಹನಿ ನೀರಾವರಿಗೆ ಸಿದ್ಧತೆ
ನಿರೀಕ್ಷೆಯಂತೆ ಕಾಮಗಾರಿ ಪೂರ್ಣಗೊಂಡರೆ ವರ್ಷದ ಅಂತ್ಯಕ್ಕೆ ತರೀಕೆರೆ ಹಾಗೂ ಅಜ್ಜಂಪುರ ತಾಲ್ಲೂಕಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‌ ರಾಘವನ್‌ ತಿಳಿಸಿದರು.

ಭದ್ರಾ ಜಲಾಶಯದಿಂದ ಅಜ್ಜಂಪುರ ಸಮೀಪದ ಸುರಂಗದವರೆಗಿನ 40 ಕಿ.ಮೀ ನಾಲೆಯಲ್ಲಿ ನೀರು ಹರಿಯುತ್ತಿದ್ದು, ಪಂಪ್‌ಹೌಸ್‌ ಕೂಡ ಕಾರ್ಯನಿರ್ವಹಿಸುತ್ತಿವೆ. ಹನಿ ನೀರಾವರಿ ಸೌಲಭ್ಯ ಹಾಗೂ 79 ಕೆರೆ ತುಂಬಿಸಲು ಇತರ 11 ಪಂಪ್‌ಹೌಸ್‌ ನಿರ್ಮಿಸಬೇಕಿದೆ. ಇದರಲ್ಲಿ 8 ಪಂಪ್‌ಹೌಸ್‌ ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ ಎಂದು ಮಾಹಿತಿ ನೀಡಿದರು.

‘ಖಾಸಗಿ ಸಹಭಾಗಿತ್ವ ಇಲ್ಲ’
ವೈದ್ಯಕೀಯ ಕಾಲೇಜಿನಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶವಿಲ್ಲ. ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಖಾಸಗಿ ವೈದ್ಯಕೀಯ ಕಾಲೇಜು ಇರುವ ಸ್ಥಳದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅವಕಾಶವಿಲ್ಲ. ಈ ತಾಂತ್ರಿಕ ಸಮಸ್ಯೆಯಿಂದ ಖಾಸಗಿ ಸಹಭಾಗಿತ್ವಕ್ಕೆ ಸರ್ಕಾರ ಒಲವು ತೋರಿದೆ. ತಾಂತ್ರಿಕ ಸಮಸ್ಯೆ ಪರಿಹರಿಸಿ ಸಂಪೂರ್ಣ ಸರ್ಕಾರಿ ಕಾಲೇಜು ಸ್ಥಾಪಿಸಲಾಗುವುದು. ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ (ಡಿಎಂಎಫ್‌) ಅಗತ್ಯ ಹಣವಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ, ಭೂಸ್ವಾಧೀನಾಧಿಕಾರಿ ರೇಣುಕಾಪ್ರಸಾದ್‌, ಅಧೀಕ್ಷಕ ಎಂಜಿನಿಯರ್‌ಗಳಾದ ಶಿವಪ್ರಕಾಶ್‌, ಎಂ.ಎಚ್‌.ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT