ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಲಸಿಕೆ: ಕುಗ್ಗದ ಬೇಡಿಕೆ ತಗ್ಗಿದ ಪೂರೈಕೆ

Last Updated 14 ಜೂನ್ 2021, 4:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ತಡೆಗಟ್ಟಲು ಜನರಿಗೆ ಲಸಿಕೆ ನೀಡುವ ಅಭಿಯಾನ ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಲಸಿಕೆ ವಿತರಣೆಯಲ್ಲಿ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದರೂ ಬೇಡಿಕೆಗೆ ತಕ್ಕಷ್ಟು ಲಸಿಕೆ ಜಿಲ್ಲೆಗೆ ಬಾರದಿರುವುದೂ ಹಿನ್ನಡೆಗೆ ಕಾರಣವಾಗಿದೆ.

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಹದೊಳಗೆ ಪ್ರತಿಕಾಯ ರೂಪಿಸುವ ಲಸಿಕೆಗೆ ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಬೇಡಿಕೆ ಸೃಷ್ಟಿಯಾಗಿತ್ತು. ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹಾಗೂ ಕೋವಿಡ್‌ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಆದ್ಯತೆ ನೀಡಲಾಗಿತ್ತು.

60 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟವರು ಹಾಗೂ 18 ವರ್ಷದ ಮೇಲ್ಪಟ್ಟವರಿಗೆ ಹಂತಹಂತವಾಗಿ ಲಸಿಕೆ ನೀಡುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿತು. ಫ್ರೆಂಟ್‌ಲೈನ್‌ ವಾರಿಯರ್ಸ್‌ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆಯಲ್ಲಿ ಜಿಲ್ಲೆ ಮೊದಲಿನಿಂದಲೂ ಮುಂದಿದೆ. ಆದರೆ, ಲಸಿಕೆ ಲಭ್ಯತೆ ಕಡಿಮೆಯಾದ ಬಳಿಕ ಅಭಿಯಾನದ ವೇಗ ಕೊಂಚ ಕಡಿಮೆಯಾಗಿತ್ತು.

ಜಿಲ್ಲೆಯಲ್ಲಿ ಪ್ರಾದೇಶಿಕ ಲಸಿಕಾ ಕೇಂದ್ರ ಇರುವ ಕಾರಣಕ್ಕೆ ಲಸಿಕೆಯ ಕೊರತೆ ಅಷ್ಟಾಗಿ ಕಂಡುಬಂದಿಲ್ಲ. ಖಾಲಿ ಆಗುತ್ತಿದ್ದಂತೆ ಲಸಿಕೆ ಪೂರೈಕೆ ಆಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 26 ಸಾವಿರ ಲಸಿಕೆಗಳು ದಾಸ್ತಾನು ಇವೆ. ಇದರಲ್ಲಿ 8 ಸಾವಿರದಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಇದೆ. ಎರಡನೇ ಡೋಸ್‌ ನೀಡಲು ಮಾತ್ರ ಇದನ್ನು ಮೀಸಲಿಡಲಾಗಿದೆ. ಇನ್ನು 18 ಸಾವಿರ ಕೋವಿಶೀಲ್ಡ್‌ ಲಸಿಕೆ ವಿತರಣೆ ಭರದಿಂದ ನಡೆಯುತ್ತಿದೆ. ನಿತ್ಯ ಸರಾಸರಿ ಐದು ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ.

‘ಆರಂಭದ ಕೆಲ ದಿನ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರಲಿಲ್ಲ. ಸೋಂಕು ಉಲ್ಬಣ ಆದಾಗ ಲಸಿಕೆಯ ಮಹತ್ವ ಗೊತ್ತಾಯಿತು. ನಗರ ಪ್ರದೇಶದ ಬಹುತೇಕ ಎಲ್ಲ ಕೇಂದ್ರಗಳಲ್ಲಿಯೂ ಲಸಿಕೆಗೆ ಜನರು ಸರತಿ ಸಾಲಿನಲ್ಲಿ ಕಾಯುತ್ತಾರೆ. ನಿತ್ಯವೂ ನಿಗದಿತ ಸಮಯದಲ್ಲಿ ಲಸಿಕೆ ನೀಡಲಾಗುತ್ತಿದೆ’ ಎನ್ನುತ್ತಾರೆ ಆರ್‌ಸಿಎಚ್‌ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ.

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿ 107 ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗುತ್ತಿದೆ. ಕೆಲ ಉಪಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 173 ಸ್ಥಳಗಳಲ್ಲಿ ಲಸಿಕೆ ಲಭ್ಯವಾಗುತ್ತಿದೆ. ಹೆಚ್ಚಿನ ಪ್ರಮಾಣದ ಲಸಿಕೆ ಬಂದರೆ ಇನ್ನಷ್ಟು ಕೇಂದ್ರಗಳನ್ನು ಸ್ಥಾಪಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ 343 ಕೇಂದ್ರಗಳನ್ನು ಗುರುತಿಸಿದೆ.

ಲಾಕ್‌ಡೌನ್‌ ಘೋಷಣೆಯಾದ ಆರಂಭದಲ್ಲಿ ಕೋವಿಡ್‌ ಲಸಿಕೆಗೆ ಬೇಡಿಕೆ ಹೆಚ್ಚಾಯಿತು. ಲಸಿಕೆ ಪಡೆದ ಅನೇಕರಿಗೆ ಕರೊನಾ ಸೋಂಕು ತಗುಲಿದ್ದು ಅಪರೂಪ. ಸೋಂಕು ಕಂಡುಬಂದರೂ ಜೀವನಕ್ಕೆ ಅಪಾಯ ಇಲ್ಲ ಎಂಬುದು ಬಹುತೇಕರಿಗೆ ಮನವರಿಕೆ ಆಗಿತ್ತು. ಹೀಗಾಗಿ, ಲಸಿಕಾ ಕೇಂದ್ರಗಳ ಎದುರು ಸರತಿ ಸಾಲಿನಲ್ಲಿ ಕಾಯುವವರ ಸಂಖ್ಯೆ ಹೆಚ್ಚಾಗಿತ್ತು. ಜಿಲ್ಲಾ ಆಸ್ಪತ್ರೆಯ ಆವರಣ, ಬುದ್ಧ ನಗರದ ಲಸಿಕಾ ಕೇಂದ್ರಗಳಲ್ಲಿ ಬೆಳಿಗ್ಗೆ 8ಕ್ಕೆ ಜನರ ಸರತಿ ಸಾಲುಗಳು ಕಂಡುಬರುತ್ತಿದ್ದವು.

ದಿನ ಕಳೆದಂತೆ ಪರಿಸ್ಥಿತಿ ಬದಲಾಗಿದೆ. ಮೇ ತಿಂಗಳಲ್ಲಿ ಲಸಿಕೆ ಪಡೆಯಲು ಇದ್ದ ಒತ್ತಡ ಈಗ ಕಂಡುಬರುತ್ತಿಲ್ಲ. ನಿತ್ಯ ಸರಾಸರಿ 12 ಸಾವಿರ ಲಸಿಕೆ ನೀಡುವಂತೆ ಸರ್ಕಾರ ಗುರಿ ನಿಗದಿಪಡಿಸಿದೆ. ಈ ಗುರಿಯ ಅರ್ಧದಷ್ಟು ಜನರಿಗೆ ಮಾತ್ರ ನಿತ್ಯ ಲಸಿಕೆ ನೀಡಲಾಗುತ್ತಿದೆ. ಆದ್ಯತಾ ವಲಯಗಳನ್ನು ಗುರುತಿಸಿ ಲಸಿಕೆ ಹಾಕಲಾಗುತ್ತಿದೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವವರು, ಸಂಘಟಿತ ವಲಯದಲ್ಲಿರುವ ಕಾರ್ಮಿಕರು, ವಿವಿಧ ಇಲಾಖೆಯ ನೌಕರರು, ಅಂಗವಿಕಲರು ಹಾಗೂ ವ್ಯಾಪಾರಸ್ಥರಿಗೆ ಲಸಿಕೆ ನೀಡಲು ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನಿತ್ಯ ಇಂತಹ 20 ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಪ್ರತಿ ಶಿಬಿರದಲ್ಲಿ ಸರಾಸರಿ 200 ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಸಂಘ–ಸಂಸ್ಥೆಗಳು ಕೂಡ ಶಿಬಿರಕ್ಕೆ ಅರ್ಜಿ ಸಲ್ಲಿಸಿ ಲಸಿಕೆ ವ್ಯವಸ್ಥೆ ಮಾಡುತ್ತಿವೆ.

‘18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕಿದೆ. ಹೆಚ್ಚಿನ ಪ್ರಮಾಣದ ಡೋಸ್‌ ಜಿಲ್ಲೆಗೆ ಬರುವ ಸಾಧ್ಯತೆ ಇದೆ. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಅರ್ಹರಿಗೂ ನಿಗದಿತ ಅವಧಿಯಲ್ಲಿ ಲಸಿಕೆ ನೀಡಲಾಗುತ್ತದೆ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಲಸಿಕೆಗೆ ದೇವರು ಪ್ರಸಾದ ಕೊಟ್ಟಿಲ್ಲ!
ಚಳ್ಳಕೆರೆ: ‘
ಲಸಿಕೆ ಹಾಕಿಸಿಕೊಳ್ಳಲು ದೇವರು ಇನ್ನೂ ಹೇಳಿಕೆ ನೀಡಿಲ್ಲ. ಮುಂದಿನ ಅಮಾವಾಸ್ಯೆಗೆ ಬರುವಂತೆ ಪೂಜಾರಿ ಸೂಚಿಸಿದ್ದಾರೆ. ದೇವರು ಬಲಗಡೆ ಹೂ ನೀಡಿದರಷ್ಟೇ ಲಸಿಕೆ ಹಾಕಿಸಿಕೊಳ್ಳುತ್ತೇವೆ...’

ಇದು ಖಂಡನೇಹಳ್ಳಿ ಗೊಲ್ಲರಹಟ್ಟಿ ಶಾಂತಮ್ಮ ಅವರ ನಿರ್ಧಾರದ ಮಾತು. ದೇವರ ಪ್ರಸಾದಕ್ಕಾಗಿ ಇಡೀ ಕುಟುಂಬ ಕಾಯುತ್ತಿದೆ. ನಿರೀಕ್ಷೆಯಂತೆ ವರ ಸಿಕ್ಕರಷ್ಟೇ ಲಸಿಕೆ ಹಾಕಿಕೊಳ್ಳಲಿದ್ದಾರೆ.

ಸಾಣಿಕೆರೆಯ ಕೆರೆ ಅಂಗಳದಲ್ಲಿ ಪ್ರತಿ ಸೋಮವಾರ ದೇವರ ಪೂಜೆ ನಡೆಯುತ್ತದೆ. ಹರಿಕೆ ತೀರಿಸುವವರು, ದೇವರ ಅಪ್ಪಣೆ ಪಡೆಯುವ ಭಕ್ತರು ಇಲ್ಲಿಗೆ ಬರುತ್ತಾರೆ. ಶಾಂತಮ್ಮ ಕೂಡ ಕಳೆದ ವಾರ ಅಲ್ಲಿಗೆ ಹೋಗಿದ್ದರು. ಮನಸ್ಸಿನಲ್ಲೇ ವರ ಕೇಳಿಕೊಂಡು ಪ್ರಸಾದಕ್ಕೆ ಕಾಯುತ್ತಿದ್ದರು.

‘ದೇವರು ಬಲಗಡೆ ಹೂವು ಕೊಟ್ಟಿಲ್ಲ. ಮುಂದಿನ ಅಮಾವಾಸ್ಯೆಗೆ ಬಂದರೆ ಲಸಿಕೆ ಬಗ್ಗೆ ದೇವರಿಗೆ ಕೇಳಿ ಪ್ರಸಾದ ಕೊಡುತ್ತೇನೆಂದು ಪೂಜಾರಿ ಹೇಳಿದ್ದಾರೆ. ಅಲ್ಲಿಯವರೆಗೆ ಕಾಯುತ್ತೇನೆ’ ಎನ್ನುತ್ತಾರೆ ಶಾಂತಮ್ಮ.

ಡಿ.ಉಪ್ಪಾರಹಟ್ಟಿಯ ಜನರು ಲಸಿಕೆ ಬಗೆಗೆ ಭಯಪಡಲು ಕಾರಣವೊಂದನ್ನು ಮುಂದಿಡುತ್ತಾರೆ. ಲಸಿಕೆ ಹಾಕಿಸಿಕೊಂಡ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು ಗ್ರಾಮಸ್ಥರನ್ನು ಕಂಗೆಡಿಸಿದೆ. ಅಂದಿನಿಂದ ಇಲ್ಲಿ ಲಸಿಕೆ ಹಾಕಿಸಿಕೊಳ್ಳಲು ಯಾರೊಬ್ಬರು ಮುಂದೆ ಬರುತ್ತಿಲ್ಲ.

‘ಗ್ರಾಮದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕೇ ಇರಲಿಲ್ಲ. ಅವರ ಆರೋಗ್ಯವೂ ಚೆನ್ನಾಗಿತ್ತು. ಲಸಿಕೆ ಹಾಕಿಸಿಕೊಂಡ ತಕ್ಷಣ ಜ್ವರ, ನೆಗಡಿ ಹಾಗೂ ಕೆಮ್ಮು ಕಾಣಿಸಿಕೊಂಡಿತು. 15 ದಿನದಲ್ಲಿ ಅವರು ಮೃತಪಟ್ಟರು. ಲಸಿಕೆ ಹಾಕಿಸಿಕೊಂಡರೆ ಸಾವನ್ನಪ್ಪುತ್ತಾರೆ ಎಂಬ ಭೀತಿ ಸೃಷ್ಟಿಯಾಗಿದೆ’ ಎನ್ನುತ್ತಾರೆ ಡಿ.ಉಪ್ಪಾರಹಟ್ಟಿಯ ಕ್ಯಾತಮ್ಮ.

ಇದನ್ನು ಅರಿತ ಆಶಾ ಕಾರ್ಯಕರ್ತೆಯರು ಗ್ರಾಮಕ್ಕೆ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಆರಂಭದಲ್ಲಿ ತೋರುತ್ತಿದ್ದ ಉತ್ಸಾಹ ಈಗ ಕಾಣುತ್ತಿಲ್ಲ. ಬೆರಳೆಣಿಕೆಯ ಪ್ರಜ್ಞಾವಂತರು ಮಾತ್ರ ಲಸಿಕೆ ಪಡೆಯುತ್ತಿದ್ದಾರೆ.

ತಾಲ್ಲೂಕಿನ ಹಿರೇಹಳ್ಳಿ ಹಾಗೂ ಬಂಜಗೆರೆ ಗ್ರಾಮದಲ್ಲಿಯೂ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜಾತಿಗಳಲ್ಲಿ ಲಸಿಕೆಯ ಬಗ್ಗೆ ತಪ್ಪು ಕಲ್ಪನೆಗಳು ಮೂಡಿವೆ. ತಾಲ್ಲೂಕು ಆಡಳಿತ ಹಲವು ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಇದಕ್ಕೆ ಜನರು ಸ್ಪಂದಿಸುತ್ತಿರುವಂತೆ ಕಾಣುತ್ತಿಲ್ಲ.

ಸಂಸದ ಎ.ನಾರಾಯಣಸ್ವಾಮಿ ಎರಡೂ ಗ್ರಾಮಗಳಿಗೆ ಭೇಟಿ ನೀಡಿ ಜನರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೂ, ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿರುವವರ ಸಂಖ್ಯೆ ತೀರಾ ಕಡಿಮೆ ಇದೆ.

ಲಸಿಕೆ ಬಗ್ಗೆ ತಪ್ಪು ಕಲ್ಪನೆ
ಮೊಳಕಾಲ್ಮುರು
: ಕೋವಿಡ್‌ ಲಸಿಕೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಜನರಲ್ಲಿ ಹಲವು ರೀತಿಯ ತಪ್ಪು ಕಲ್ಪನೆಗಳಿವೆ. ಇವುಗಳ ಪರಿಹಾರಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಶ್ರಮಪಡುತ್ತಿದ್ದಾರೆ. ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ಹಿಂದಿರುಗುತ್ತಿದ್ದಾರೆ.

ಜಿಲ್ಲೆಯ ಮಟ್ಟಿಗೆ ಮೊಳಕಾಲ್ಮುರು ತಾಲ್ಲೂಕು ಲಸಿಕೆ ಪ್ರಗತಿಯಲ್ಲಿ ಕೊನೆ ಸ್ಥಾನದಲ್ಲಿದೆ. ಇದಕ್ಕೆ ಜನರಲ್ಲಿ ಮನೆ ಮಾಡಿರುವ ಹಲವು ಮೂಢನಂಬಿಕೆ ಮತ್ತು ಲಸಿಕೆ ವಿಷಯದಲ್ಲಿ ಉಂಟಾಗಿರುವ ತಪ್ಪು ಕಲ್ಪನೆಗಳೇ ಮುಖ್ಯ ಕಾರಣ.

ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮವೊಂದರ ವೃದ್ಧದರೊಬ್ಬರಗೆ ಲಸಿಕೆ ಹಾಕಿಸಿಕೊಳ್ಳಿ ಎಂದು ಆಶಾ ಕಾರ್ಯಕರ್ತೆಯರು ಮನವಿ ಮಾಡಿದ್ದಾರೆ. ‘ನನ್ನ ಪ್ರಾಣಕ್ಕೆ ತೊಂದೆರೆಯಾಗುತ್ತದೆ. ಆರೋಗ್ಯ ಏರುಪೇರಾದಲ್ಲಿ ಸರ್ಕಾರ ಹೊಣೆ ಹೊರಬೇಕು. ಪರಿಹಾರದ ರೂಪದಲ್ಲಿ ₹ 25 ಲಕ್ಷ ಕೊಡುತ್ತೇವೆಂದು ಮಾತುಕೊಡಿ’ ಎಂದು ಆಗ್ರಹಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ ಏಕೆ?’ ಎಂದು ಮೊಗಲಹಳ್ಳಿಯ ಕೆಲವರನ್ನು ಪ್ರಶ್ನಿಸದರೆ ಅವರಿಂದ ಬರುವ ಉತ್ತರ ಅಚ್ಚರಿ ಮೂಡಿಸುತ್ತದೆ. ‘ಲಸಿಕೆಯ ಎರಡು ಡೋಸ್ ಮುಗಿಯುವವರೆಗೆ ತಾಳ್ಮೆಯಿಂದ ಕಾಯಬೇಕು. ಅಲ್ಲಿಯವರೆಗೆ ಮದ್ಯಪಾನ ಮಾಡುವಂತಿಲ್ಲವಂತೆ. ಎರಡು ಡೋಸ್‌ ಲಸಿಕೆ ಪಡೆಯಲು ಮೂರು ತಿಂಗಳಾಗುತ್ತದೆ. ಅಲ್ಲಿಯವರೆಗೆ ಮದ್ಯ ಬಿಟ್ಟಿರಲು ಆಗುವುದಿಲ್ಲ’ ಎನ್ನುತ್ತಾರೆ.

ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಎಂಬ ತಪ್ಪು ಕಲ್ಪನೆಯೂ ಗ್ರಾಮೀಣ ಮಹಿಳೆಯರಲ್ಲಿ ಬಲವಾಗಿದೆ. ‘ನಾನು ಲಸಿಕೆ ಹಾಕಿಸಿಕೊಂಡಿಲ್ಲ, ಹಾಕಿಸಿಕೊಳ್ಳುವುದೂ ಇಲ್ಲ. ಏನಾದರೂ ಇದೇ ರೀತಿ ಆದಲ್ಲಿ ನನ್ನ ಕಷ್ಟ ಯಾರ ಹತ್ತಿರ ಹೇಳಿಕೊಳ್ಳುವುದು’ ಎಂದು ಪ್ರಶ್ನಿಸುತ್ತಾರೆ ರಾಂಪುರದ ಮಹಿಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT