ಭಾನುವಾರ, ಅಕ್ಟೋಬರ್ 2, 2022
19 °C

ಹೊಸದುರ್ಗ: ಜಮೀನಿಗೆ ಹೋಗಬೇಕೆಂದರೆ ಕುತ್ತಿಗೆ ತನಕ ನೀರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ‘ಜಾಸ್ತಿ ಮಳೆಯಾಗಿ ಹಳ್ಳದಾಗೆ ಕುತ್ತಿಗೆ ಮತ್ತೆ ಸೊಂಟದ ತಂಕ ನೀರು ಬಂದಿದೆ. ಈ ನೀರಲ್ಲಿ ಹೊಲಕ್ಕೆ ಕೆಲಸಕ್ಕೆ ಹೋಗೋದು, ಊಟ ಒಯ್ಯೋದಾದರೂ ಹೇಗೆ?’ ಎಂದು ತಾಲ್ಲೂಕಿನ ಮಳಲಿ ಗ್ರಾಮದ ಜನತೆ ತಮ್ಮ ಅಳಲು ತೋಡಿಕೊಂಡರು.

ಕೆಲವು ದಿನಗಳಿಂದ ತಾಲ್ಲೂಕಿನಾದ್ಯಂತ ಎಡೆಬಿಡದೇ ಸುರಿದ ಮಳೆಗೆ ಬಾಗೂರು, ನೀರಗುಂದ ಹಾಗೂ ಅರಳಿಹಳ್ಳಿ ಕೆರೆಗಳಿಗೆ ನೀರು ಹೆಚ್ಚಾಗಿ ಬಂದ ಪರಿಣಾಮವಾಗಿ ಮಳಲಿ ಹಳ್ಳ ರಭಸವಾಗಿ ಹರಿಯುತ್ತಿದೆ. 350 ಮನೆಗಳಿರುವ ಈ ಗ್ರಾಮದಲ್ಲಿ ಎಲ್ಲ ಜನರು ತಮ್ಮ ಜಮೀನಿಗೆ ಹೋಗಲು ಹಾಗೂ ಎಂ.ಜಿ ದಿಬ್ಬಕ್ಕೆ ಹೋಗಲು ಇರುವುದು ಇದೊಂದೇ ದಾರಿ. ಚುನಾವಣೆ ಸಮಯದಲ್ಲಿ ಬಂದು ಜನಪ್ರತಿನಿಧಿಗಳು ಇಲ್ಲಿ ಸೇತುವೆ ಮಾಡುವುದಾಗಿ ಆಶ್ವಾಸನೆ ನೀಡುತ್ತಾರೆ. ಇದುವರೆಗೂ ಸೇತುವೆ ಆಗಿಲ್ಲ. ಪ್ರತಿ ವರ್ಷ ಮಳೆ ಬಂದಾಗಲೂ ಇದೇ ತೊಂದರೆ ಅನುಭವಿಸಬೇಕಿದೆ’ ಎಂದು ಗ್ರಾಮದ ಹರೀಶ್ ಬೇಸರ ವ್ಯಕ್ತಪಡಿಸಿದರು.

‘ಸುಮಾರು15-20 ವರ್ಷಗಳಿಂದ ಇಲ್ಲಿ ಕಷ್ಟ ಪಡುತ್ತಿದ್ದೇವೆ. ಕೂಲಿ ಕಾರ್ಮಿಕರನ್ನು ಕರೆದೊಯ್ದು ಜಮೀನು ಸೇರಲು 1 ಗಂಟೆ ಬೇಕಾಗುತ್ತದೆ. ಓಡಾಡಲು ಹೆಚ್ಚು ಸಮಯ ನಷ್ಟವಾಗುವ ಕಾರಣ ಜಮೀನಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಊಟ ನೀರು ಸೇರಿದಂತೆ ಇತರ ಸಾಮಾನು ತೆಗೆದುಕೊಂಡು ಹೋಗುವವರು, ಒಬ್ಬರ ಕೈ ಮತ್ತುಬ್ಬರು ಹಿಡಿದುಕೊಂಡು, ಜೀವ ಬಿಗಿ ಹಿಡಿದುಕೊಂಡು ಓಡಾಡುವಂಥ ದುಃಸ್ಥಿತಿ ಬಂದಿದೆ. ಇನ್ನಾದರೂ ಒಂದು ಸೇತುವೆ ನಿರ್ಮಿಸಿ ಓಡಾಡಲು ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು ಮಳಲಿಯ ತೀರ್ಥಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು