ಶುಕ್ರವಾರ, ಸೆಪ್ಟೆಂಬರ್ 24, 2021
21 °C
ತೋಟದ ಮಾಲೀಕರು ನೀರು ಕೊಡಲೊಲ್ಲರು, ಗ್ರಾಮಸ್ಥರು ಬಿಡಲೊಲ್ಲರು

ದಿಂಡಾವರ: ಮೂರು ಸಾವಿರ ಮಂದಿಯಿರುವ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಸುವರ್ಣಾ ಬಸವರಾಜ್‌ Updated:

ಅಕ್ಷರ ಗಾತ್ರ : | |

Prajavani

ದಿಂಡಾವರ (ಹಿರಿಯೂರು): ಸುಮಾರು ಮೂರು ಸಾವಿರ ಜನಸಂಖ್ಯೆ ಹೊಂದಿರುವ, ಗ್ರಾಮ ಪಂಚಾಯಿತಿಯ ಮುಖ್ಯ ಕೇಂದ್ರವಾಗಿರುವ ತಾಲ್ಲೂಕಿನ ದಿಂಡಾವರ ಗ್ರಾಮದ ಜನರು ಕುಡಿಯುವ ನೀರೂ ಒಳಗೊಂಡಂತೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

‘ನೂರು ವರ್ಷಕ್ಕೂ ಹಳೆಯದಾದ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆ ಕಳೆ ಕೂಡ ಬೆಳೆಯದಷ್ಟು ಒಣಗಿಹೋಗಿದೆ. ಹತ್ತು ವರ್ಷದ ಹಿಂದೆ ಒಮ್ಮೆ ತುಂಬುವ ಮಟ್ಟಕ್ಕೆ ಹೋಗಿದ್ದು ಬಿಟ್ಟರೆ ಕೆರೆಗೆ ನೀರೇ ಬರುತ್ತಿಲ್ಲ. ಹೀಗಾಗಿ 700–800 ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗೆ ಗ್ರಾಮಸ್ಥರು ಅನುಭವಿಸುತ್ತಿರುವ ಯಾತನೆ ಹೇಳತೀರದು’ ಎನ್ನುತ್ತಾರೆ ಗ್ರಾಮದ ಯುವ ರೈತ
ಚಂದ್ರಗಿರಿ.

‘ಒಂದು ವಾರದಿಂದ ನೀರು ಕೊಡಿ ಎಂದು ಪಂಚಾಯಿತಿಯವರನ್ನು ಕೇಳಿದ್ದೇವೆ. ಟ್ಯಾಂಕರ್‌ನಲ್ಲಿ ಕೊಡುತ್ತೇವೆ ಎನ್ನುತ್ತಾರೆ. ಯಾವ ಬೀದಿಗೆ ಟ್ಯಾಂಕರ್ ಹೋಗಿದೆ ಎಂಬುದೇ ತಿಳಿಯುತ್ತಿಲ್ಲ. ಸೈಕಲ್, ಬೈಕುಗಳಿಗೆ ಪ್ಲಾಸ್ಟಿಕ್ ಕೊಡಗಳನ್ನು ನೇತುಹಾಕಿಕೊಂಡು ಗ್ರಾಮದ ಹತ್ತಿರ ಇರುವ ತೋಟಗಳಿಗೆ ಹೋದರೆ, ‘ಅವರು ನೀರು ಕೊಡಲೊಲ್ಲರು, ಗ್ರಾಮಸ್ಥರು ಬಿಡಲೊಲ್ಲರು’ ಎಂಬಂತಹ ಪರಿಸ್ಥಿತಿ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ಒಂದಿಂಚು, ಅರ್ಧ ಇಂಚು ನೀರು ಬರುತ್ತದೆ. ಬೆಸ್ಕಾಂ ಕೊಡುವ ಕರೆಂಟಿನಲ್ಲಿ ತೋಟ ಉಳಿಸಿಕೊಳ್ಳಬೇಕೊ, ಜನರ ದಾಹ ನೀಗಿಸಬೇಕೊ ಎಂದು ತೋಟದ ಮಾಲೀಕರು ಪ್ರಶ್ನಿಸುತ್ತಾರೆ. ಅವರ ಕಷ್ಟ ಅವರಿಗೆ. ನೀರಿಲ್ಲದೆ ನಾಗಪ್ಪನ ಹಬ್ಬ ಮಾಡೋದಕ್ಕೂ ಕಷ್ಟ ಆಗಿದೆ' ಎನ್ನುತ್ತಾರೆ ಗ್ರಾಮದ ಹಿರಿಯ ಮಹಿಳೆ ಶಕುಂತಲಮ್ಮ.

‘ಸುಮಾರು ₹ 20 ಕೋಟಿ ವೆಚ್ಚದಲ್ಲಿ ಜವನಗೊಂಡನಹಳ್ಳಿ ಹೋಬಳಿಯ 39 ಹಳ್ಳಿಗಳಿಗೆ ಗಾಯತ್ರಿ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಪ್ರಗತಿಯಲ್ಲಿದೆ. ಈ ಯೋಜನೆಯ ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸುವ ಕಾರ್ಯ ಆದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಪಿಲ್ಲಾಲಿ, ಮಾವಿನಮಡು, ಗೌಡ್ನಹಳ್ಳಿ ಕೆರೆಗಳನ್ನೂ ಇದರಲ್ಲಿ ಸೇರಿಸಬೇಕು’ ಎಂಬುದು ಗ್ರಾಮಸ್ಥರ ಒತ್ತಾಯ.

‘ಶಾಶ್ವತ ಪರಿಹಾರ ಬೇಕು’

ಮಳೆಗಾಲದಲ್ಲಿಯೇ ನೀರಿಗೆ ಇಷ್ಟು ಕಷ್ಟ ಪಡುತ್ತಿದ್ದೇವೆ. ಬೇಸಿಗೆ ಬಂದರೆ ಹೇಗೆ ಎಂಬ ಭಯ ಕಾಡುತ್ತದೆ. ಗ್ರಾಮಸ್ಥರು ತುಂಬಾ ಒತ್ತಾಯ ಮಾಡಿದರೆ ಕೊಳವೆಬಾವಿ ಕೊರೆಸುತ್ತಾರೆ. ನೀರು ಬಂದರೆ ಬಂತು, ಇಲ್ಲಾಂದ್ರೆ ಇಲ್ಲ. ನಮಗೆ ಶಾಶ್ವತ ಪರಿಹಾರ ಬೇಕು. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು’

– ಚಂದ್ರಗಿರಿ, ಯುವ ರೈತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು