ಬುಧವಾರ, ಜನವರಿ 22, 2020
23 °C

ಸಾಹಿತ್ಯ ಸಮ್ಮೇಳನ ವಿವಾದ: ಕಲ್ಕುಳಿ ವಿಠಲ ಹೆಗ್ಡೆ ಪರ ಚಿಂತಕರ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಚಿಕ್ಕಮಗಳೂರಿನಲ್ಲಿ ಜ.10 ಮತ್ತು 11ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಲೇಖಕ, ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಆಯ್ಕೆ ಮಾಡಿದ್ದು ಸೂಕ್ತ ಮತ್ತು ಸಮಂಜಸ. ಆಯ್ಕೆ ಮಾಡಿದ ಅಧ್ಯಕ್ಷರನ್ನು ರಾಜಕೀಯ ಒತ್ತಡಗಳಿಗೆ ಮಣಿದು ಕೈ ಬಿಡುವುದು, ಬದಲಾಯಿಸುವುದು ಸರಿಯಲ್ಲ ಎಂದು ಪ್ರಗತಿಪರ ಚಿಂತಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ ಪರಿಷತ್ತು ಸ್ವಾಯತ್ತ ಸಂಸ್ಥೆ. ಜಿಲ್ಲಾ ಮತ್ತು ತಾಲ್ಲೂಕು ಸಾಹಿತ್ಯ ಸಮ್ಮೇಳನಗಳಿಗೆ ಸೂಕ್ತ ಅಧ್ಯಕ್ಷರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಆಯಾ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಇರುತ್ತದೆ.

ಕೇಂದ್ರ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರ ಮೇಲೆ ಒತ್ತಡ ತರುತ್ತಿರುವುದು ಹಾಗೂ ಅನುದಾನ ನೀಡದೇ ಇರುವ ಧೋರಣೆ ತಪ್ಪು. ಆ ಮೂಲಕ ಕೇಂದ್ರ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್ ಅವರು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಆಯ್ಕೆಯ ಸ್ವಾತಂತ್ರ್ಯ ಮೊಟಕುಗೊಳಿಸುವ, ಸ್ವಾಯತ್ತತೆಗೆ ಭಂಗ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ಕಡಿದಾಳು ಶಾಮಣ್ಣ, ಸಾಹಿತಿಗಳಾದ ನಾ.ಡಿಸೋಜಾ, ಡಾ.ರಾಜೇಂದ್ರ ಚೆನ್ನಿ, ಡಾ.ಶ್ರೀಕಂಠ ಕೂಡಿಗೆ, ಪುರುಷೋತ್ತಮ ಬಿಳಿಮಲೆ, ಡಾ.ವಿಜಯಾ, ರಾಘವೇಂದ್ರ ಪಾಟೀಲ ಖಂಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಭೌತಿಕ ಮತ್ತು ಬೌದ್ಧಿಕ ಪರಿಸರ ಆರೋಗ್ಯಕರವಾಗಿಡುವಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಅವರು ಶ್ರಮಿಸುತ್ತಾ ಬಂದಿದ್ದಾರೆ. ಕುದುರೆಮುಖ ಅಭಯಾರಣ್ಯ ಉಳಿಯಲು ಕಾರಣಕರ್ತರಾಗಿದ್ದಾರೆ. ಜತೆಗೆ ಅವರು ಬರೆದ ‘ಮಂಗನ ಬ್ಯಾಟೆ’ ಕೃತಿ ಇಡೀ ಮಲೆನಾಡಿನ ಚಿತ್ರಣವನ್ನು ಸಶಕ್ತವಾಗಿ ಬಿಂಬಿಸುತ್ತದೆ. ಅದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಂದಿದೆ ಎಂದು ವಿವರಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಅಧ್ಯಕ್ಷರ ಆಯ್ಕೆ ಎಲ್ಲರೂ ಒಪ್ಪಿತವಾದ ಆಯ್ಕೆಯಲ್ಲ. ಹಾಗಾಗಿ, ಅವರನ್ನು ಕೈ ಬಿಡಿ ಎಂದಿದ್ದಾರೆ ಎಂದು ಕೇಂದ್ರ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ. ಆದರೆ, ಕನ್ನಡ ಸಾಹಿತ್ಯ ಪರಂಪರೆಯು ಪ್ರಭುತ್ವದ ಕುರುಡುತನ ಮತ್ತು ಅಧಿಕಾರಸ್ಥರ ಜನ ವಿರೋಧಿ ನಿಲುವುಗಳನ್ನು ಧಿಕ್ಕರಿಸುವ ಆ ಮೂಲಕ ಪ್ರಭುತ್ವ ಮತ್ತು ಸಮುದಾಯದ ವಿವೇಕವನ್ನು ಎಚ್ಚರಿಸುವ ಮತ್ತು ಕಾಪಾಡುವ ಕಾರ್ಯವನ್ನು ನಿರಂತರವಾಗಿ ಪಾಲಿಸುತ್ತಲೇ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಚಿವರಿಗೆ ಕನ್ನಡ ಸಾಹಿತ್ಯ ಪರಂಪರೆ ನಡೆದು ಬಂದ ದಾರಿಯನ್ನು ಮನಗಾಣಿಸಿ ಕೊಡಬೇಕು. ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಜನತಾಂತ್ರಿಕ ಆಯ್ಕೆಯ ಪರ ವಹಿಸಬೇಕು. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡುವ ಮೂಲಕ ತಮ್ಮ ನಿಜವಾದ ಕರ್ತವ್ಯಪ್ರಜ್ಞೆ ಮೆರೆಯಬೇಕು. ಸಾಹಿತ್ಯ ಪರಿಷತ್ತಿನ ಗೌರವ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದಲೇ ಅಡ್ಡಿ: ಪ್ರಸನ್ನ ಖಂಡನೆ

ಶೃಂಗೇರಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯದಂತೆ ಮಾಡಲು ಯತ್ನಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಖಂಡಿಸಿದ್ದಾರೆ.

‘ಇದು ಸಾಂಸ್ಕ್ರತಿಕ ಸ್ವಾಯತ್ತತೆಯ ಮೇಲೆ ಸರ್ಕಾರ ನಡೆಸಿರುವ ನೇರ ಹಲ್ಲೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಈ ನಡೆಯನ್ನು ಪ್ರತಿಭಟಿಸಬೇಕು ಹಾಗೂ ಸಂಸ್ಥೆಯ ಸ್ವಾಯತ್ತತೆಯನ್ನು ಗೌರವಿಸುವ ತನಕ ಸರ್ಕಾರದ ಸಹಾಯಧನ ತಿರಸ್ಕರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕನ್ನಡ ಜನತೆಯೇ ಮುಂದೆ ನಿಂತು ಸಮ್ಮೇಳನವನ್ನು ಯಶಸ್ವಿಯಾಗಿಸಲು ಹೊರಟಿರುವುದು ಉತ್ತಮ ಬೆಳವಣಿಗೆ. ಇದರಲ್ಲಿ ನಾನೂ ಕೈಜೋಡಿಸಲಿದ್ದೇನೆ’ ಎಂದು ತಿಳಿಸಿದ್ದಾರೆ.

ಸಮ್ಮೇಳನ: ಕಸಾಪ ನಡೆಗೆ ವಿರೋಧ

‘ಚಿಕ್ಕಮಗಳೂರಿನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ನಡೆ ಖಂಡನೀಯ’ ಎಂದು ಸಮುದಾಯ ಕರ್ನಾಟಕದ ಅಧ್ಯಕ್ಷ ದೇವೇಂದ್ರ ಗೌಡ ಅಚ್ಯುತ ಬೇಸರ ವ್ಯಕ್ತಪಡಿಸಿದ್ದಾರೆ.

‘ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಲೇಖಕ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತ. ಅವರು ಸಾಹಿತ್ಯದ ಜತೆಗೆ ಸಾಕಷ್ಟು ಜನಪರ ಹೋರಾಟದಲ್ಲಿಯೂ ಪಾಲ್ಗೊಂಡಿದ್ದಾರೆ. ಅವರ ‘ಮಂಗನ ಬ್ಯಾಟೆ’ ಕೃತಿಯು ಇಡೀ ಮಲೆನಾಡಿನ ಚಿತ್ರಣವನ್ನು ಕಟ್ಟಿಕೊಡುತ್ತದೆ. ಅದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ಕೋಮುವಾದಿ ರಾಜಕಾರಣವನ್ನು ಕಲೆ-ಸಾಹಿತ್ಯ ಕ್ಷೇತ್ರದಲ್ಲೂ ತರುತ್ತಿರುವುದು ನಾಡಿನ ಬಹುಮುಖಿ ಸಾಂಸ್ಕೃತಿಕ ಪರಂಪರೆಗೆ ಮಾಡಿದ ಅವಮಾನ’ ಎಂದು ಅವರು ಹೇಳಿದ್ದಾರೆ.

‘ಸಾಹಿತ್ಯ ಪರಿಷತ್ತು ಸ್ವಾಯತ್ತ ಸಂಸ್ಥೆಯಾಗಿದ್ದು, ಜಿಲ್ಲಾ ಮತ್ತು ತಾಲ್ಲೂಕು ಸಾಹಿತ್ಯ ಸಮ್ಮೇಳನಗಳಿಗೆ ಸೂಕ್ತ ಅಧ್ಯಕ್ಷರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಆಯಾ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಇದೆ. ಹೀಗೆ ಆಯ್ಕೆ ಮಾಡಿದ ಅಧ್ಯಕ್ಷರನ್ನು ರಾಜಕೀಯ ಒತ್ತಡಗಳಿಗೆ ಮಣಿದು, ಬದಲಾಯಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ್ ಕುಂದೂರು ನಿಲುವು ಸೂಕ್ತವಾಗಿದ್ದು, ಅವರನ್ನು ಬೆಂಬಲಿಸಲಾಗುವುದು’ ಎಂದು ತಿಳಿಸಿದ್ದಾರೆ. 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು