ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಪಿಲಿ ಪರ್ಬದಲ್ಲಿ ಹುಲಿ ಘರ್ಜನೆ

ಹುಲಿವೇಷ ಸ್ಪರ್ಧೆಯಲ್ಲಿ 15 ತಂಡಗಳು ಭಾಗಿ
Published 21 ಅಕ್ಟೋಬರ್ 2023, 15:17 IST
Last Updated 21 ಅಕ್ಟೋಬರ್ 2023, 15:17 IST
ಅಕ್ಷರ ಗಾತ್ರ

ಮಂಗಳೂರು: ಕಣ್ಣರೆಪ್ಪೆ ಮಿಟುಕಿಸದೆ ಕಾತರದ ಕ್ಷಣಗಳಿಗೆ ಕಾಯುತ್ತಿದ್ದ ಪುಟ್ಟ ಮಕ್ಕಳು ತಾಸೆ, ಡೋಲಿನ ಸದ್ದು ಕಿವಿಗೆ ಬೀಳುತ್ತಿದ್ದಂತೆ ಕುಪ್ಪಳಿಸುತ್ತಿದ್ದರು. ಎದುರಿನಿಂದ ಬಂದ ಸಾಲು ಸಾಲು ಪಟ್ಟೆಹುಲಿಗಳು ವೇದಿಕೆಯೇರಿ ನರ್ತಿಸುತ್ತಿದ್ದರೆ, ಪುಟಾಣಿಗಳೊಂದಿಗೆ ಅವರ ಅಪ್ಪ–ಅಮ್ಮಂದಿರ ಪಾದವೂ ಹೆಜ್ಜೆ ಮೀಟುತ್ತಿತ್ತು.

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಗರ ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ‘ಕುಡ್ಲದ ಪಿಲಿಪರ್ಬ’ದಲ್ಲಿ ಕಂಡು ಬಂದ ದೃಶ್ಯವಿದು. ಹುಲಿ ವೇಷಧಾರಿಗಳ ಕಸರತ್ತಿಗೆ ಕರತಾಡನದ ಮೂಲಕ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದರೆ, ಗ್ಯಾಲರಿಯಲ್ಲಿ ಕುಳಿತ ಮಕ್ಕಳು ಕೇಕೆ ಹಾಕುತ್ತ ನರ್ತಕರನ್ನು ಹುರಿದುಂಬಿಸುತ್ತಿದ್ದರು.

ಗಡಿಭಾಗದ ಮಂಜೇಶ್ವರ, ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳ 15 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರತಿ ತಂಡಕ್ಕೆ 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.

‘ಕುಡ್ಲದ ಪಿಲಿ ಪರ್ಬ’ ಹುಲಿವೇಷ ಸ್ಪರ್ಧೆಯನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಉದ್ಘಾಟಿಸಿದರು. ಕರಾವಳಿಯ ಕಲೆ, ಜಾನಪದ ಆಚರಣೆಗಳ ಹಿಂದೆ ದೈವತ್ವದ ಕಲ್ಪನೆ ಇದೆ. ತುಳುನಾಡಿನ ಆಚರಣೆಗಳು ಭಕ್ತಿ, ನಂಬಿಕೆ ಸಮ್ಮಿಳಿತವಾಗಿವೆ. ಹುಲಿವೇಷಕ್ಕೆ ಅದರದೇ ಆದ ಪರಂಪರೆಯಿದೆ. ಸಂಕಷ್ಟ ಬಂದಾಗ ಹರಕೆ ಹೊತ್ತು ಹುಲಿವೇಷ ಹಾಕುವವರು ಇದ್ದಾರೆ. ದೈವತ್ವದ ಕಲ್ಪನೆಯ ಹುಲಿವೇಷಕ್ಕೆ ಸ್ಪರ್ಧೆಯ ಸ್ವರೂಪ ನೀಡಿದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ. ಕಂಬಳ ಕ್ರೀಡೆ ಸೀಮೋಲ್ಲಂಘನ ಮಾಡಿದಂತೆ ಹುಲಿವೇಷವೂ ಹೊರಜಿಲ್ಲೆ, ಹೊರರಾಜ್ಯಗಳಲ್ಲಿ ಮನ್ನಣೆ ಪಡೆಯಬೇಕು, ಹೊಸ ತಂಡಗಳು ರೂಪುಗೊಂಡು, ಸಂಪ್ರದಾಯ ಮುಂದುವರಿಯಬೇಕು’ ಎಂದು ಅವರು ಹೇಳಿದರು.

ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ‘ಸಾಂಪ್ರದಾಯಿಕ ಹುಲಿ ಕುಣಿತವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪಿಲಿಪರ್ಬ ನಡೆಸಲಾಗುತ್ತಿದೆ. ಕಳೆದ ವರ್ಷ ಆರಂಭಗೊಂಡ ಸ್ಪರ್ಧೆಯನ್ನು ಈ ಬಾರಿ ಇನ್ನಷ್ಟು ಹೆಚ್ಚು ಅಚ್ಚುಕಟ್ಟಾಗಿ ರೂಪಿಸಲಾಗಿದೆ’ ಎಂದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನೀತಾ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಪ್ರಮುಖರಾದ ನಿತಿನ್‌ಕುಮಾರ್, ಹರಿಕೃಷ್ಣ ಬಂಟ್ವಾಳ, ಪ್ರೇಮಾನಂದ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಕಾರ್ಯದರ್ಶಿ ಉದಯ ಪೂಜಾರಿ, ನರೇಶ್ ಶೆಣೈ, ಪತ್ರಕರ್ತ ಮನೋಹರ ಪ್ರಸಾದ್ ಇದ್ದರು.

ಕಮಲಾಕ್ಷ ಬಜಿಲಕೇರಿ, ಕದ್ರಿ ನವನೀತ ಶೆಟ್ಟಿ , ಕೆ.ಕೆ. ಪೇಜಾವರ, ಪಿ.ಎಸ್. ವೆಂಕಟೇಶ್ ಭಟ್, ರೋಹನ್ ತೊಕ್ಕೊಟ್ಟು, ನವೀನ್ ಕುಮಾರ್ ಬಿ. ತೀರ್ಪುಗಾರರಾಗಿದ್ದರು. ನಿತೇಶ್ ಶೆಟ್ಟಿ ಎಕ್ಕಾರು ಮತ್ತು ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

ಕುಡ್ಲ ಸಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ‘ಪಿಲಿ ಪರ್ಬ’ದಲ್ಲಿ ಕೋಡಿಕಲ್‌ನ ವಿಶಾಲ್ ಕ್ರಿಕೆಟರ್ಸ್ ತಂಡ

ಕುಡ್ಲ ಸಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ‘ಪಿಲಿ ಪರ್ಬ’ದಲ್ಲಿ ಕೋಡಿಕಲ್‌ನ ವಿಶಾಲ್ ಕ್ರಿಕೆಟರ್ಸ್ ತಂಡ

– ಪ್ರಜಾವಾಣಿ ಚಿತ್ರ / ಫಕ್ರುದ್ದೀನ‌್ ಎಚ್

ಕುಡ್ಲ ಸಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ‘ಪಿಲಿ ಪರ್ಬ’ದಲ್ಲಿ ಕೋಡಿಕಲ್‌ನ ವಿಶಾಲ್ ಕ್ರಿಕೆಟರ್ಸ್ ತಂಡ

ಕುಡ್ಲ ಸಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ‘ಪಿಲಿ ಪರ್ಬ’ದಲ್ಲಿ ಕೋಡಿಕಲ್‌ನ ವಿಶಾಲ್ ಕ್ರಿಕೆಟರ್ಸ್ ತಂಡ

– ಪ್ರಜಾವಾಣಿ ಚಿತ್ರ / ಫಕ್ರುದ್ದೀನ‌್ ಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT