ಮಂಗಳವಾರ, ಫೆಬ್ರವರಿ 18, 2020
16 °C
ಬಾಂಬ್‌ ಇದ್ದ ಬ್ಯಾಗ್‌ ಸ್ಫೋಟಿಸಿ ನಿಟ್ಟುಸಿರು ಬಿಟ್ಟ ಪೊಲೀಸರು

ಮಂಗಳೂರು | ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ: ಇಡೀ ದಿನ ಭಯ, ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾದ ಬಾಂಬ್‌ ಇಡೀ ದಿನ ಭಯ, ಆತಂಕಕ್ಕೆ ಕಾರಣವಾಯಿತು. ಹರಸಾಹಸ ಪಟ್ಟು ಅದನ್ನು ಕೆಂಜಾರು ಮೈದಾನಕ್ಕೆ ಸಾಗಿಸಿದ ಪೊಲೀಸರು, ಬಾಂಬ್‌ ಇದ್ದ ಬ್ಯಾಗ್‌ ಅನ್ನೇ ಸ್ಫೋಟಿಸಿ ನಿಟ್ಟುಸಿರು ಬಿಟ್ಟರು.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಬಾಂಬ್‌ ಪತ್ತೆಯಾಗುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ಭೀತಿಯ ವಾತಾರಣ ಸೃಷ್ಟಿಯಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ವಿಮಾನ ನಿಲ್ದಾಣದ ಎದುರಿನ ಪ್ರದೇಶವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಬಾಂಬ್‌ ಇದ್ದ ಬ್ಯಾಗ್‌ ಅನ್ನು ‘ಥ್ರೆಟ್‌ ಕಂಟೇನ್ಮೆಂಟ್‌’ ವಾಹನಕ್ಕೆ ಸ್ಥಳಾಂತರಿಸಿದ ಬಳಿಕ ಪರಿಸ್ಥಿತಿ ತುಸು ತಿಳಿಯಾಯಿತು.

ಆದರೆ, ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸುವುದು ಎಲ್ಲಿ ಮತ್ತು ಹೇಗೆ ಎಂಬ ಪ್ರಶ್ನೆಗಳು ಮಧ್ಯಾಹ್ನದ ವೇಳೆಗೆ ಪೊಲೀಸರನ್ನು ಕಾಡಲಾರಂಭಿಸಿದವು. ಕೆಂಜಾರು ಮೈದಾನ, ಪಣಂಬೂರು ಕಡಲ ತೀರ ಹೀಗೆ ಹಲವು ಸ್ಥಳಗಳಲ್ಲಿ ಬಾಂಬ್‌ ನಿಷ್ಕ್ರಿಯ ಕಾರ್ಯಾಚರಣೆ ನಡೆಸುವ ಸಾಧ್ಯತೆ ಕುರಿತು ಪರಿಶೀಲನೆ ನಡೆಸಿದರು. ಅದಕ್ಕೆ ಪೂರ್ವ ತಯಾರಿಯನ್ನೂ ನಡೆಸಲಾರಂಭಿಸಿದರು.

ಇದನ್ನೂ ಓದಿ: ಜನನಿಬಿಡ ಸ್ಥಳದಲ್ಲೇ ಸ್ಫೋಟಕ್ಕೆ ವಿಫಲ ಯತ್ನ ನಡೆಸಿದ ದುಷ್ಕರ್ಮಿಗಳು

ಮಂಗಳೂರು ಕೆಂಜಾರು ಮೈದಾನದಲ್ಲಿ ಸ್ಫೋಟದ ಬಳಿಕ ಕಂಡುಬಂದ ಹೊಗೆ.

ಟೈಮರ್‌ ತಂದ ಆತಂಕ: ಬ್ಯಾಗ್‌ನೊಳಗಿರುವ ‘ಬಾಕ್ಸ್‌ ಬಾಂಬ್‌’ನಲ್ಲಿ ಅಳವಡಿಸಿದ್ದ ಟೈಮರ್‌ ಸ್ಥಗಿತವಾಗಿದೆ ಎಂಬುದನ್ನು ಪತ್ತೆಹಚ್ಚಿದ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ, ಹೆಚ್ಚು ದೂರ ಕೊಂಡೊಯ್ಯುವುದು ಅಪಾಯಕರ ಎಂಬ ಅಭಿಪ್ರಾಯವನ್ನು ನಗರ ಪೊಲೀಸ್‌ ಕಮಿಷನರ್‌ ಮುಂದಿಟ್ಟರು. ಬಾಂಬ್‌ ಅನ್ನು ಸಾಮಾನ್ಯ ವಿಧಾನದಲ್ಲಿ ನಿಷ್ಕ್ರಿಯಗೊಳಿಸಲು ಯತ್ನಿಸಿದರೆ ಅಪಾಯ ಎದುರಾಗಬಹುದು ಎಂಬ ಆತಂಕವನ್ನೂ ತೋಡಿಕೊಂಡರು.

ಇದೆಲ್ಲವನ್ನೂ ಪರಿಶೀಲಿಸಿದ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ಬಾಂಬ್‌ ಇದ್ದ ಚೀಲವನ್ನು ಕೆಂಜಾರು ಮೈದಾನಕ್ಕೆ ಕೊಂಡೊಯ್ದು ಸ್ಫೋಟಿಸಿ ನಾಶಗೊಳಿಸುವಂತೆ ನಿರ್ದೇಶನ ನೀಡಿದರು. ಬಳಿಕ ಬಾಂಬ್‌ ಇದ್ದ ಬ್ಯಾಗ್‌ ಹೊತ್ತ ವಾಹನವನ್ನು ಕೆಂಜಾರು ಮೈದಾನಕ್ಕೆ ಕೊಂಡೊಯ್ಯುವ ಕಾರ್ಯಾಚರಣೆ ಆರಂಭವಾಯಿತು.

ಕೆಳಕ್ಕಿಳಿಯದ ಟ್ರ್ಯಾಕ್ಟರ್‌: ಥ್ರೆಟ್‌ ಕಂಟೇನ್ಮೆಂಟ್‌ ವಾಹನವನ್ನು ಇರಿಸಿದ್ದ ಟ್ರ್ಯಾಕ್ಟರ್‌ ನಿಧಾನವಾಗಿ ವಿಮಾನ ನಿಲ್ದಾಣದಿಂದ ಇಳಿಜಾರಿನಲ್ಲಿ ಸಾಗಿತು. ಕೆಲವೇ ಕಿಲೋಮೀಟರ್‌ ದೂರದಲ್ಲಿರುವ ಶ್ರೀದೇವಿ ಎಂಜಿನಿಯರಿಂಗ್‌ ಕಾಲೇಜಿನ ಎದುರಿಗೆ ತಲುಪಲು ಅರ್ಧ ಗಂಟೆಗೂ ಹೆಚ್ಚು ಸಮಯ ಬೇಕಾಯಿತು.

ಮುಖ್ಯ ರಸ್ತೆಯಿಂದ ಕೆಂಜಾರು ಮೈದಾನಕ್ಕೆ ತಲುಪಲು 100 ಅಡಿಗೂ ಹೆಚ್ಚು ಇಳಿಜಾರಿನಲ್ಲಿ ಸಾಗಬೇಕಿದೆ. ಆದರೆ, ಥ್ರೆಟ್‌ ಕಂಟೇನ್ಮೆಂಟ್‌ ವಾಹನವನ್ನು ಹೊತ್ತ ಟ್ರ್ಯಾಕ್ಟರ್‌ ಅನ್ನು ಕೆಳಕ್ಕೆ ಇಳಿಸಲು ಚಾಲಕನಿಗೆ ಸಾಧ್ಯವಾಗಲಿಲ್ಲ. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಯಿತು. ಬಳಿಕ ಥ್ರೆಟ್‌ ಕಂಟೇನ್ಮೆಂಟ್‌ ವಾಹನವನ್ನು ಕೆಳಕ್ಕಿಳಿಸಿ ಕ್ರೇನ್‌ ಮೂಲಕ ಎಳೆದು ಹಿಡಿದುಕೊಳ್ಳಲಾಯಿತು. ಸ್ವಯಂಚಾಲಿತ ಯಂತ್ರ ನಿಧಾನವಾಗಿ ಕೆಳಕ್ಕಿಳಿದು ಮೈದಾನ ತಲುಪಿದಾಗ ಪೊಲೀಸರು, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ನಿರಾಳರಾದರು.

ಇದನ್ನೂ ಓದಿ: ಆಟೊ ರಿಕ್ಷಾ, ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಶ್ವಾನದಳದಿಂದ ಶೋಧ.

ಕೈಕೊಟ್ಟ ವೈರ್‌: ಮಧ್ಯಾಹ್ನ 3.30ರಿಂದ ಬಾಂಬ್‌ ಇದ್ದ ಬ್ಯಾಗ್‌ ಅನ್ನು ಸ್ಫೋಟಿಸುವ ಕಾರ್ಯಾಚರಣೆ ಆರಂಭವಾಯಿತು. ಕೆಂಜಾರು ಮೈದಾನದ ಮಧ್ಯ ಭಾಗದಲ್ಲಿ ಮರಳು ತುಂಬಿದ್ದ ಚೀಲಗಳನ್ನು ಪೇರಿಸಿ ಸ್ಫೋಟಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಕಾರ್ಯಾಚರಣೆಗೆ ತಂದಿದ್ದ ವೈರ್‌ ಸರಿಯಾಗಿ ಕೆಲಸ ಮಾಡದ ಕಾರಣದಿಂದ ಮತ್ತಷ್ಟು ವಿಳಂಬವಾಯಿತು.

ಹೊಸ ವೈರ್‌ ತರಿಸಿ ಮತ್ತೊಮ್ಮೆ ಸ್ಫೋಟದ ಸ್ಥಳಕ್ಕೆ ಸಂಪರ್ಕ ಕಲ್ಪಿಸಿದ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ, ಅದನ್ನು ಬ್ಯಾಟರಿ ಸಂಪರ್ಕದ ಮೂಲಕ ಸಂಜೆ 5.37ಕ್ಕೆ ಸ್ಫೋಟಿಸದರು. ಆ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟರು.

ಕಾರ್ಯಾಚರಣೆ ರೂವಾರಿ ಗಂಗಯ್ಯ: ಪೊಲೀಸ್‌ ಇಲಾಖೆಯ ಪಶ್ಚಿಮ ವಲಯ ಮಟ್ಟದ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳದ ತಂಡವನ್ನು ಬಾಂಬ್‌ ನಿಷ್ಕ್ರಿಯ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ತಂಡದ ಹಲವು ಸಿಬ್ಬಂದಿ ಸ್ಫೋಟದ ಸಿದ್ಧತೆಯಲ್ಲಿ ಭಾಗಿಯಾಗಿದ್ದರು.

ಗಂಗಯ್ಯ ಎಂಬ ಸಿಬ್ಬಂದಿ ಸ್ಫೋಟ ನಡೆಸುವ ಕಾರ್ಯಾಚರಣೆಯ ರೂವಾರಿಯಾಗಿದ್ದರು. ಇಡೀ ದೇಹವನ್ನು ಮುಚ್ಚುವ ಅತಿ ಭದ್ರತಾ ರಕ್ಷಾ ಕವಚ ಧರಿಸಿದ ಅವರು, ಥ್ರೆಟ್‌ ಕಂಟೇನ್ಮೆಂಟ್‌ ವಾಹನದಿಂದ ಬಾಂಬ್‌ ಇದ್ದ ಬ್ಯಾಗ್‌ ಅನ್ನು ಸ್ಫೋಟದ ಸ್ಥಳಕ್ಕೆ ಸಾಗಿಸುವಾಗ ನೋಡುಗರ ಎದೆ ಬಡಿತ ತಾನಾಗಿಯೇ ಹೆಚ್ಚುತ್ತಿತ್ತು.

ತಾಂತ್ರಿಕ ತೊಡಕಿನಿಂದಾಗಿ ಮೂರು ಬಾರಿ ಅವರು ರಕ್ಷಾ ಕವಚ ಧರಿಸಿ ಸ್ಫೋಟದ ಸ್ಥಳಕ್ಕೆ ಹೋಗಿ ಬರಬೇಕಾಯಿತು.

ಇದನ್ನೂ ಓದಿ: ಬಾಂಬ್‌ ಸ್ಫೋಟಿಸಿ ಪ್ರಾಣಹಾನಿ ತಪ್ಪಿಸಿದ ಭದ್ರತಾ ಸಿಬ್ಬಂದಿ

ಬಾಂಬ್ ಪತ್ತೆ ನಂತರ ಮಂಗಳೂರು ವಿಮಾನ ನಿಲ್ದಾಣದ ಪ್ರವೇಶ ದ್ವಾರವನ್ನು ಬಂದ್ ಮಾಡಲಾಗಿತ್ತು.

ವೀಕ್ಷಣೆಗೆ ನೂಕುನುಗ್ಗಲು: ಬಾಂಬ್‌ ನಿಷ್ಕ್ರಿಯ ಕಾರ್ಯಾಚರಣೆ ಸುದ್ದಿ ತಿಳಿದ ನೂರಾರು ಮಂದಿ ಕೆಂಜಾರು ಮೈದಾನದತ್ತ ಬರಲಾರಂಭಿಸಿದರು. ಎರಡೂ ಕಡೆಯ ಮಾರ್ಗದಲ್ಲಿ ಪೊಲೀಸರು ನಿಯಂತ್ರಿಸಿದರೂ, ಜನ ಬರುತ್ತಲೇ ಇದ್ದರು.

ಅಂತಿಮ ಹಂತದ ಕಾರ್ಯಾಚರಣೆ ನಡೆಯುವಾಗ ಮೈದಾನದವರೆಗೂ ಜನರು ಬಂದಿದ್ದರು. ಪೊಲೀಸರು ಎಚ್ಚರಿಕೆ ನೀಡಿದ ಬಳಿಕವೇ ಹಿಂದಕ್ಕೆ ಹೋದರು. ಸುತ್ತಲಿನ ಗುಡ್ಡಗಳು, ಕಟ್ಟಡಗಳು, ಗುಡ್ಡದ ಮೇಲಿರುವ ಶ್ರೀದೇವಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ನೂರಾರು ಮಂದಿ ನಿಂತು ಕಾರ್ಯಾಚರಣೆಯನ್ನು ವೀಕ್ಷಿಸಿದರು.

ನಗರದೆಲ್ಲೆಡೆ ಕಟ್ಟೆಚ್ಚರ: ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾದ ತಕ್ಷಣವೇ ನಗರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಿದ ಪೊಲೀಸರು, ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನಗಳ ಮೇಲೂ ನಿಗಾ ಇರಿಸಿದ್ದರು.

ವಿಮಾನ ನಿಲ್ದಾಣದ ಮಾರ್ಗದಲ್ಲಿ ಒಳ ಬರುವ ಮತ್ತು ಹೊರ ಹೋಗುವ ಎಲ್ಲರ ಫೋಟೊ ಸೆರೆಹಿಡಿದು, ಮಾಹಿತಿ ಸಂಗ್ರಹಿಸಿದರು. ಬಜ್ಪೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬ್ಯಾಗ್‌ ಧರಿಸಿ ಓಡಾಡುತ್ತಿದ್ದವರನ್ನೂ ತಪಾಸಣೆಗೆ ಒಳಪಡಿಸಲಾಯಿತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು