ಪರಿವರ್ತಿತ ಪಡಿತರ ಚೀಟಿ: ಮರು ಪರಿಶೀಲನೆ

ಮಂಗಳೂರು: ‘ಜಿಲ್ಲೆಯಲ್ಲಿ ಬಿಪಿಎಲ್‍ನಿಂದ ಎಪಿಲ್‍ಗೆ ಪರಿವರ್ತಿಸಲಾದ ಪಡಿತರ ಚೀಟಿಗಳ ಪ್ರಕರಣಗಳನ್ನು ಸೂಕ್ಷ್ಮ ಪರಿಶೀಲನೆ ನಡೆಸಿ, ಚೀಟಿದಾರರಿಗೆ ಆಹಾರ ವಿತರಿಸಬೇಕು. ತಾಂತ್ರಿಕ ಕಾರಣಗಳ ನೆಪದಲ್ಲಿ ಬಡವರ ಪಡಿತರ ತಡೆಹಿಡಿಯಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪಡಿತರ ಚೀಟಿಗಳ ಪುನರ್ ಪರಿಶೀಲನೆ ಕುರಿತಂತೆ ಸೋಮವಾರ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆ ವರದಿಯಲ್ಲಿ ತಿಳಿಸಿರುವಂತೆ ವಾರ್ಷಿಕ ₹1.20 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿರುವ ಪಡಿತರ ಚೀಟಿದಾರರ ಬಗ್ಗೆ ಗ್ರಾಮ ಲೆಕ್ಕಧಿಕಾರಿಗಳಿಂದ ವರದಿ ಶೀಘ್ರ ಪಡೆದು, ಸಮಗ್ರ ಮಾಹಿತಿಯನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಲ್ಲಿಸಿ,ಅನುಮತಿ ಪಡೆದು, ಅರ್ಹರಿಗೆ ಪಡಿತರ ನೀಡುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ಪಡಿತರ ಚೀಟಿ ಹೊಂದಿರುವವರಲ್ಲಿ ಆ ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದರೂ, ಇ-ತಂತ್ರಾಂಶದಲ್ಲಿ ಮರಣ ಹೊಂದಿದವರ ಹೆಸರನ್ನು ಬೇರ್ಪಡಿಸದ ಬಗ್ಗೆ ವರದಿಯಾಗಿದ್ದು, ಮೃತರ ಉತ್ತರಾಧಿಕಾರಿಗಳು ಪಡಿತರ ಚೀಟಿಯಲ್ಲಿ, ಮೃತಪಟ್ಟವರ ಹೆಸರನ್ನು ತೆಗೆದು ಹಾಕಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಸಹಾಯಕ ಆಯುಕ್ತ ಮದನ್ ಮೋಹನ್, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ರಮ್ಯಾ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.
‘ಆದಾಯತೆರಿಗೆ ಪಾವತಿ ಬಿಪಿಎಲ್ ಕಾರ್ಡ್‌ದಾರರಿಗೆ ರಿಯಾಯಿತಿ’: ಪಡಿತರ ಚೀಟಿದಾರರ ಪೈಕಿ 1,595 ಜನರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ, ₹1.20 ಲಕ್ಷಕ್ಕೂ ಹೆಚ್ಚು ಆದಾಯವಿರುವ 3,526 ಪಡಿತರದಾರರು ಸೇರಿದಂತೆ ಒಟ್ಟು 5,121 ಮಂದಿಯ ಆದಾಯ ಹೆಚ್ಚಿರುವುದರಿಂದ ಪಡಿತರ ಸೌಲಭ್ಯಗಳನ್ನು ಪಡೆಯಲಾಗದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಆದಾಯ ಹೆಚ್ಚಿರುವ 3,526 ಫಲಾನುಭವಿಗಳ ಪೈಕಿ, 820 ಮಂದಿಗೆ ಮಾತ್ರ ಪಡಿತರ ರದ್ದು ಪಡಿಸಿದ್ದು, ಉಳಿದ 2,706 ಜನರ ಪಡಿತರ ತಡೆಹಿಡಿಯಬಾರದು ಎಂದು ಜಿಲ್ಲಾ ಉಸುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಆದಾಯ ತೆರಿಗೆ ಪಾವತಿದಾರರು, ಮನೆ ನಿರ್ಮಿಸಿಕೊಳ್ಳಲು ಬ್ಯಾಂಕ್‍ನಿಂದ ಸಾಲಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ದರೆ ಅಂಥವರ ಪಡಿತರ ಚೀಟಿಯನ್ನು ಬಿಪಿಎಲ್‍ನಿಂದ ಎಪಿಎಲ್‍ಗೆ ಪರಿವರ್ತಿಸಬಾರದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ರಮ್ಯಾ ಮಾತನಾಡಿ, ಈ ಬಗ್ಗೆ ಇಲಾಖೆಯ ಆಯುಕ್ತರಿಂದ ಅನುಮತಿ ಪಡೆಯುವುದಾಗಿ ತಿಳಿಸಿದರು.
4000 ಮಂದಿಗೆ ಬಿಪಿಎಲ್ ಕಾರ್ಡ್: ಶಾಸಕರಾದ ರಾಜೇಶ್ ನಾಯಕ್, ಉಮನಾಥ್ ಕೋಟ್ಯಾನ್ ಹಾಗೂ ಡಾ. ಭರತ್ ಶೆಟ್ಟಿ, ‘ಜನಸಾಮಾನ್ಯರು ಪಡಿತರ ಸಾಮಗ್ರಿಗಳಿಗಿಂತ ಮುಖ್ಯವಾಗಿ ಆರೋಗ್ಯ ಸೌಲಭ್ಯಕ್ಕಾಗಿ ಬಿಪಿಎಲ್ ಪಡಿತರ ಚೀಟಿಯ ಅನಿವಾರ್ಯತೆ ಹೊಂದಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು. ಆಯುಷ್ಮಾನ್ ಆರೋಗ್ಯ ಕಾರ್ಡ್ ಸೌಲಭ್ಯಕ್ಕಾಗಿ ಈಗಾಗಲೇ ಬಿಪಿಎಲ್ ಪಡಿತರ ಚೀಟಿಗಾಗಿ ಆರ್ಜಿ ಸಲ್ಲಿಸಿದ್ದ 4,000 ಮಂದಿಯ ಅರ್ಜಿ ಪರಿಶೀಲಿಸಿ ಕೂಡಲೇ ಬಿಪಿಎಲ್ ಪಡಿತರ ಚೀಟಿ ನೀಡಬೇಕು. ಅಗತ್ಯವೆನಿಸಿದರೆ ಜಿಲ್ಲೆಯ ಶಾಸಕರೊಂದಿಗೆ ಮತ್ತೊಮ್ಮೆ ಆಹಾರ ಸಚಿವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.