ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ.ಕ: ಬವಣೆ ನೀಗಲು ಬೇಕಿದೆ ಬಜೆಟ್‌ ಅನುದಾನ

ಡಿ.ಸಿ ಕಚೇರಿ ಸಂಕೀರ್ಣ ಅಪೂರ್ಣ, ಹರೇಕಳ ಜಲಾಶಯಕ್ಕೆ ಆಗಬೇಕಿದೆ ಭೂಸ್ವಾದೀನ, ನಗರದ ಒಳಚರಂಡಿ ಆಗಿಲ್ಲ ಪರಿಪೂರ್ಣ
ಪ್ರವೀಣ್‌ ಕುಮಾರ್ ಪಿ.ವಿ.
Published 12 ಫೆಬ್ರುವರಿ 2024, 7:04 IST
Last Updated 12 ಫೆಬ್ರುವರಿ 2024, 7:04 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ಪಶ್ಚಿಮದ ಹೆಬ್ಬಾಗಿಲು ಎಂದೇ ಕರೆಸಿಕೊಂಡ, ಬೆಂಗಳೂರು ಹೊರತುಪಡಿಸಿದರೆ, ರಾಜ್ಯದ  ಬೊಕ್ಕಸಕ್ಕೆ ಹೆಚ್ಚು ತೆರಿಗೆ ವರಮಾನ ನೀಡುವ ಜಿಲ್ಲೆಗಳಲ್ಲೊಂದಾದ ದಕ್ಷಿಣ ಕನ್ನಡದಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಬೇಸಿಗೆಯಲ್ಲಿ ಕಾಡುವ ಕುಡಿಯುವ ನೀರಿನ ಬವಣೆಯಿಂದ ಹಿಡಿದು, ಅಪೂರ್ಣ ಒಳಚರಂಡಿ ಜಾಲದವರೆಗೆ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತ ರೂಪಿಸಿರುವ ಪ್ರಸ್ತಾವಗಳು ಸರ್ಕಾರದ ಅನುದಾನಕ್ಕಾಗಿ ಕಾಯುತ್ತಿವೆ.

ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಇದೇ 16ರಂದು ಮಂಡಿಸಲಿರುವ 2024–25ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯನ್ನು ಕಾಡುತ್ತಿರುವ ಬವಣೆಗಳಿಗೆ ಮುಕ್ತಿ ನೀಡುವ ಯೋಜನೆಗಳಿಗೆ ಅನುದಾನ ದಕ್ಕ ಬಹುದು ಎಂಬ ನಿರೀಕ್ಷೆ ಇಲ್ಲಿನ ಜನತೆಯದ್ದು.

ಕುಡಿಯುವ ನೀರು: ರಾಜ್ಯದಲ್ಲಿ 2023ರ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಜಿಲ್ಲೆಯನ್ನು ಬಹಳ ಕಾಡಿತ್ತು. ಬಹುಗ್ರಾಮ ಕುಡಿಯುವ ಯೋಜನೆಗಳು ಹಾಗೂ ಜಲಜೀವನ್‌ ಅಭಿಯಾನದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಪ್ರಯತ್ನಗಳಾಗಿವೆ. ಮಂಗಳೂರು ಮಹಾನಗರ, ಮೂಲ್ಕಿ, ಉಳ್ಳಾಲ ಪಟ್ಟಣಗಳಿಗೆ, ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸದ್ಯಕ್ಕೆ ತುಂಬೆ ಅಣೆಕಟ್ಟೆಯಿಂದಲೇ ಕುಡಿಯುವ ನೀರು ಪೂರೈಕೆಯಾಗುತ್ತದೆ. 

ತುಂಬೆ ಅಣೆಕಟ್ಟೆಯಿಂದ ನಗರಕ್ಕೆ ನಿತ್ಯ 16 ಕೋಟಿ ಲೀಟರ್‌ ನೀರನ್ನು ಪಂಪ್‌ ಮಾಡಲಾಗುತ್ತದೆ. ಅದರಲ್ಲಿ ಶೇ 40ರಷ್ಟು ನೀರು ನಗರವನ್ನು ತಲುಪುತ್ತಿಲ್ಲ. ತುಂಬೆ ಜಲಾಶಯದಲ್ಲಿ 7 ಮೀ ಎತ್ತರದವರೆಗೆ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಆದರೆ, ಇಷ್ಟು ನೀರು ಸಂಗ್ರಹಿಸಿದರೆ ಆಸುಪಾಸಿನ ಅನೇಕ ಗ್ರಾಮಗಳ ಜಮೀನು ಮುಳುಗಡೆಯಾಗುತ್ತವೆ. ಹಾಗಾಗಿ 6 ಮೀ. ಎತ್ತರದವರೆಗೆ ಮಾತ್ರ ನೀರು ಸಂಗ್ರಹಿಸಲಾಗುತ್ತದೆ. 6 ಮೀ ಭರ್ತಿ ಆದಾಗ ತುಂಬೆ ಜಲಾಶಯದಲ್ಲಿ 1.042 ಕೋಟಿ ಕ್ಯುಬಿಕ್‌ ಮೀಟರ್‌ ಲೀಟರ್‌ಗಳಷ್ಟು (14.42 ಎಂಸಿಎಂ) ನೀರಿನ ಸಂಗ್ರಹವಿರುತ್ತದೆ. ಈ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸಬೇಕಾದರೆ ಆಸುಪಾಸಿನ ಗ್ರಾಮಗಳಲ್ಲಿ ಒಟ್ಟು 344 ಎಕರೆ ಭೂಸ್ವಾಧೀನ ಮಾಡಬೇಕು. ಇದಕ್ಕೆ ₹130 ಕೋಟಿ ಅನುದಾನದ ಅಗತ್ಯ ಇದೆ ಎಂದು 2019ರಲ್ಲಿ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಈ ಮೊತ್ತ ಈಗ ಮತ್ತಷ್ಟು ಜಾಸ್ತಿ ಆಗಿದೆ.

ಅಡ್ಯಾರ್‌–ಹರೇಕಳ ಅಣೆಕಟ್ಟು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೇ ಅದರ ಜಲಾಶಯದಲ್ಲೂ ಪೂರ್ಣ ಪ್ರಮಾಣದಲ್ಲಿ ಸಂಗ್ರಹಿಸಲು ಸಾಧ್ಯವಾಗದು. ಈ ಅಣೆಕಟ್ಟೆಯ ನೀರು ಸಂಗ್ರಹಕ್ಕೆ 33 ಹೆಕ್ಟೇರ್‌ ಭೂಸ್ವಾಧೀನವಾಗಬೇಕು. ಇದಕ್ಕೆ ₹ 100 ಕೋಟಿ ಅನುದಾನದ ಅಗತ್ಯವಿದೆ. ಇಷ್ಟು  ಭೂಸ್ವಾಧೀನ ನಡೆಸಿದ್ದೇ ಆದರೆ ಈ ಅಣೆಕಟ್ಟೆಯ ನೀರು ಸಂಗ್ರಹ ಸಾಮರ್ಥ್ಯ 0.3 ಟಿಎಂಸಿ ಅಡಿಗಳಷ್ಟು ಹೆಚ್ಚಲಿದೆ.

ಈ ಸಲದ ಬಜೆಟ್‌ನಲ್ಲಾದರೂ ಈ ಎರಡು ಅಣೆಕಟ್ಟೆಗಳ ಜಲಾಶಯಗಳ ವಿಸ್ತೀರ್ಣ ಹೆಚ್ಚಳಕ್ಕೆ ಭೂಸ್ವಾಧೀನ ನಡೆದದ್ದೇ ಆದರೆ ಮಂಗಳೂರು, ಮೂಲ್ಕಿ, ಉಳ್ಳಾಲ, ಕೊಣಾಜೆ ಪರಿಸರದ ಕುಡಿಯುವ ನೀರಿನ ಸಮಸ್ಯೆ ಬಹುತೇಕ ನೀಗಲಿದೆ. ಈ ಸಲ ಅನುದಾನ ಸಿಗಬಹುದು ಎಂಬ ನಿರೀಕ್ಷೆ ಜಿಲ್ಲಾಡಳಿತದ್ದು.

ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆ ಕೇವಲ ದಕ್ಷಿಣ ಕನ್ನಡ ಮಾತ್ರವಲ್ಲ ಆಸುಪಾಸಿನ ಇತರ ಜಿಲ್ಲೆಗಳ ಬಡರೋಗಿಗಳ ಪಾಲಿನ ಆಶಾಕಿರಣ. ಇತ್ತೀಚೆಗೆ ಅಸ್ಪತ್ರೆಗೆ ಹೊಸ ಸಂಕೀರ್ಣವೂ ಉದ್ಘಾಟನೆಗೊಂಡಿದೆ. ಆದರೂ, ಅದಕ್ಕೆ ಪೂರ್ಣ  ಮೂಲಸೌಕರ್ಯ ಕಲ್ಪಿಸುವ ಕಾರ್ಯ ಬಾಕಿ ಇದೆ.  ಆಸ್ಪತ್ರೆಯನ್ನು ಕ್ಲಿನಿಕಲ್‌ ತರಬೇತಿಗೆ ಬಳಸಿಕೊಳ್ಳುತ್ತಿರುವ ಕೆಎಂಸಿ ಆಸ್ಪತ್ರೆ, ಸ್ಮಾರ್ಟ್‌ಸಿಟಿ ಯೋಜನೆ ಹಾಗೂ ವಿವಿಧ ಸಂಸ್ಥೆಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಇದಕ್ಕೆ ಅನುದಾನ ಜೋಡಿಸುವ ಪ್ರಯತ್ನಗಳು ನಡೆದಿವೆ. ವೈದ್ಯಕೀಯ ದಾಖಲೆ ವಿಭಾಗ, ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಹೊಸ ಕಟ್ಟಡ ಹೊಸ ಅಡುಗೆ ಕೋಣೆ ಸೌಲಭ್ಯಗಳ ಅಗತ್ಯವಿದೆ. ಇಲ್ಲಿನ ಡಯಾಲಿಸಿಸ್ ಕೇಂದ್ರವನ್ನು ಉನ್ನತೀಕರಿಸಬೇಕಿದೆ. ಸರ್ಕಾರವೇ ಇದಕ್ಕೆ ಅನುದಾನ ಒದಗಿಸಿದರೆ ಬಡರೋಗಿಗಳಿಗೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎನ್ನುತ್ತವೆ ಆಸ್ಪತ್ರೆಯ ಮೂಲಗಳು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಕಾಯಕಲ್ಪ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಭರವಸೆ ನೀಡಿದ್ದರು.  ಈ ಭರವಸೆ ಈಡೇರಿಸುವಂತಹ ಮಹತ್ತರ ಯೋಜನೆಗಳು ಯಾವುವೂ ಕಾರ್ಯಗತವಾಗಿಲ್ಲ. ‘ಜಿಲ್ಲೆಯ ಕಡಲ ಕಿನಾರೆಗಳನ್ನು ಗುರುತಿಸಿ ಸುಮಾರು ₹ 50 ಕೊಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಹಾಗೂ ತೀರ್ಥಕ್ಷೇತ್ರಗಳಲ್ಲಿ ಯಾತ್ರಿ ನಿವಾಸ ಮತ್ತಿತರ ಸೌಕರ್ಯ ಕಲ್ಪಿಸುವ ಪ್ರಸ್ತಾವವನ್ನು ಪ್ರವಾಸೋದ್ಯಮ ಇಲಾಖೆ ಸಿದ್ಧಪಡಿಸಿದೆ. ಇದಕ್ಕೆ ಈ ಸಲದ ಬಜೆಟ್‌ನಲ್ಲಿ ಅನುದಾನ ಸಿಗಬಹುದು ಎಂಬ ನಿರೀಕ್ಷೆ ಇದೆ‘ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲೆಯಲ್ಲಿ ಕಡಬ, ಮೂಲ್ಕಿ ಹಾಗೂ ಉಳ್ಳಾಲ ತಾಲ್ಲೂಕುಗಳು ಹೊಸತಾಗಿ ಅಸ್ತಿತ್ವಕ್ಕೆ ಬಂದಿವೆ. ವಿವಿಧ ಇಲಾಖೆಗಳು ಈ ಹೊಸ ತಾಲ್ಲೂಕು ಮಟ್ಟದಲ್ಲಿ ಇನ್ನಷ್ಟೇ ಕಚೇರಿಗಳನ್ನು ಆರಂಭಿಸಬೇಕಿವೆ. ಸರ್ಕಾರದ ಅನುದಾನದ ಕೊರತೆಯಿಂದ ಈ ಕಾರ್ಯವೂ ಸಾಧ್ಯವಾಗಿಲ್ಲ.

ಮಂಗಳೂರಿನ ಹರೆಕಳ–ಅಡ್ಯಾರ್‌ ಅಣೆಕಟ್ಟೆ ಮತ್ತು ಸೇತುವೆ –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್.
ಮಂಗಳೂರಿನ ಹರೆಕಳ–ಅಡ್ಯಾರ್‌ ಅಣೆಕಟ್ಟೆ ಮತ್ತು ಸೇತುವೆ –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್.
ಮುಲ್ಲೈ ಮುಗಿಲನ್
ಮುಲ್ಲೈ ಮುಗಿಲನ್

ಇತರ ಪ್ರಮುಖ ಬೇಡಿಕೆಗಳು ಮೀನುಗಾರರಿಗೆ ಸೀ ಆಂಬುಲೆನ್ಸ್‌ ಹಳೆ ಬಂದರಿನ ಮೀನುಗಾರಿಕಾ ಬಂದರು ಅಭಿವೃದ್ಧಿ ಪಂಪ್‌ವೆಲ್‌ನಲ್ಲಿ ಹೊಸ ಬಸ್‌ನಿಲ್ದಾಣ ಬಡ ವಿದ್ಯಾರ್ಥಿಗಳಿಗೆ ಹೊಸ ಹಾಸ್ಟೆಲ್‌ಗಳ ನಿರ್ಮಾಣ

ಜಿಲ್ಲೆಯ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಆಯಾ ಇಲಾಖೆಗಳಿಂದಲೇ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ಇವುಗಳಿಗೆ ಅನುದಾನ ಸಿಗುವ ನಿರೀಕ್ಷೆ ಇದೆ- ಮುಲ್ಲೈ ಮುಗಿಲನ್‌ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ

ಡಿ.ಸಿ. ಕಚೇರಿ ಸಂಕೀರ್ಣಕ್ಕೆ ಬೇಕು ₹ 32 ಕೋಟಿ ಪಡೀಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕಚೇರಿ ಸಂಕೀರ್ಣದ ಕಾಮಗಾರಿಗೆ ಗುತ್ತಿಗೆದಾರರಿಗೆ ಜಾಗ ಹಸ್ತಾಂತರಿಸಿ ಐದಕ್ಕೂ ಹಷ ಐದು ತಿಂಗಳುಗಳೇ ಕಳೆದಿವೆ. ಈ ಭವ್ಯ ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ‘ಮೊದಲ ಹಂತದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ವಿವಿಧ ಇಲಾಖೆಗಳ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವುದಕ್ಕೆ ಒಟ್ಟು ₹ 32 ಕೋಟಿ  ಅನುದಾನ ಬೇಕು. ಜಿಲ್ಲಾಧಿಕಾರಿ ಕಚೇರಿಗೆ ಸಂಬಂಧಿಸಿ  ಕಚೇರಿಗಳನ್ನು ಮಾತ್ರ ಇಲ್ಲಿಗೆ ಸ್ಥಳಾಂತರಿಸುವುದಕ್ಕೆ ಇಲ್ಲಿ ಸಭಾಂಗಣ ಲ್ಯಾನ್‌ ನೆಟ್‌ವರ್ಕ್‌ ಜೋಡಣೆ ವಾಹನ ನಿಲುಗಡೆ ಪೀಠೋಪಕರಣ ಅಳವಡಿಕೆ ಮಾಡಬೇಕಾಗುತ್ತದೆ. ಈ ಅಗತ್ಯ ಸೌಕರ್ಯ ಕಲ್ಪಿಸಲು ₹ 20 ಕೋಟಿ ಅನುದಾನ ಬೇಕಾಗುತ್ತದೆ’ ಎಂದು ಕರ್ನಾಟಕ ಗೃಹ ಮಂಡಳಿಯ ಮೂಲಗಳು ತಿಳಿಸಿವೆ.

ಒಳಚರಂಡಿ ಜಾಲಕ್ಕೆ ಬೇಕಿದೆ ಕಾಯಕಲ್ಪ ನಗರದ ಶೇ 40ರಷ್ಟು ಪ್ರದೇಶಗಳಲ್ಲಿ ಮನೆ ಮನೆಗೆ ಒಳಚರಂಡಿ ಸಂಪರ್ಕ ಇನ್ನೂ ಕಲ್ಪಿಸಲು ಸಾಧ್ಯವಾಗಿಲ್ಲ. ಇದಕ್ಕೆ ಏನಿಲ್ಲವೆಂದರೂ ₹ 350 ಕೋಟಿ ಅನುದಾನ ಬೇಕು’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT