ಶುಕ್ರವಾರ, ಜನವರಿ 15, 2021
21 °C
ಜಾಗರೂಕತೆಯಿಂದ ಮೀನುಗಾರಿಕೆ ನಡೆಸಲು ಸಿಎಂಎಫ್‌ಆರ್‌ಐ ಸಲಹೆ

ಕರಾವಳಿಯಲ್ಲಿ ‘ಬೂತಾಯಿ’ ಸಂಖ್ಯೆ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಕ್ಷಿಣ ಕರಾವಳಿ ಪ್ರದೇಶಗಳಾದ ಕೇರಳ, ಕರ್ನಾಟಕ ಮತ್ತು ಗೋವಾದಲ್ಲಿ ಹೇರಳವಾಗಿ ದೊರೆಯುತ್ತಿದ್ದ ಬೂತಾಯಿಯ ಪ್ರಮಾಣ, ಕಳೆದ ಕೆಲವು ವರ್ಷಗಳಿಂದ ಕಡಿಮೆಯಾಗಿದೆ.

ವೈಜ್ಞಾನಿಕವಾಗಿ ‘ಸಾರ್ಡಿನೆಲ್ಲ ಲಾಂಜಿಸೆಪ್ಸ್’ ಎಂದು ಕರೆಯಲಾಗುವ, ಕರ್ನಾಟಕದಲ್ಲಿ ‘ಬೂತಾಯಿ’ ಅಥವಾ ‘ಬೈಗೆ’ ಎಂದು ಜನಪ್ರಿಯವಾಗಿರುವ ಈ ಮೀನಿನ ಉತ್ಪಾದನೆಯು 2019 ರಲ್ಲಿ ಕೇವಲ 12,396 ಟನ್‌ಗಳಿಗೆ ಇಳಿಕೆಯಾಗಿತ್ತು. ಐದು ವರ್ಷಗಳ ಸರಾಸರಿ ಉತ್ಪಾದನೆಯು 77,704 ಟನ್‌ಗಳಾಗಿದೆ. ಬೂತಾಯಿ ಮೀನಿನ ಉತ್ಪಾದನೆಯ ಏರಿಳಿತಕ್ಕೆ ಎಲ್‌ನಿನೊ ನಂತರದಲ್ಲಿ ಸಮುದ್ರ ಪರಿಸರದಲ್ಲಿ ಆದ ಪ್ರತೀಕೂಲ ಬದಲಾವಣೆಗಳೇ ಪ್ರಮುಖ ಕಾರಣ ಎಂದು ಸೆಂಟ್ರಲ್‌ ಮರೈನ್‌ ಫಿಶರೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಸಿಎಂಎಫ್‌ಆರ್‌ಐ) ಸಂಶೋಧನೆಯ ಮೂಲಕ ಗುರುತಿಸಿದೆ.

ಕಡಿಮೆ ಸಾಂದ್ರತೆಯುಳ್ಳ ಚದುರಿದ ಬೂತಾಯಿಯ ಗುಂಪುಗಳು 2020 ರ ಕೊನೆಯ ಭಾಗದಲ್ಲಿ ಕರ್ನಾಟಕ ಕರಾವಳಿಯ ದಕ್ಷಿಣ ಮತ್ತು ಮಧ್ಯಭಾಗದ ಉದ್ದಕ್ಕೂ ಗೋಚರಿಸುತ್ತಿವೆ. ಮೀನುಗಾರರು ಮಾಟುಬಲೆ, ರಾಣಿಬಲೆ ಮತ್ತು ಪರ್ಸೀನ್ ಬಲೆಗಳ ಉಪಯೋಗದಿಂದ ಹಿಡಿದು ತಂದಿರುವುದು, ಈ ಪ್ರದೇಶದ ನೀರು ಬೂತಾಯಿಯ ಉಳಿವು ಮತ್ತು ಬೆಳವಣಿಗೆಗೆ ಅನುಕೂಲ ಆಗುತ್ತಿರುವುದನ್ನು ಸೂಚಿಸುತ್ತಿದೆ ಎಂದು ತಿಳಿಸಿದೆ.

‘ಬೂತಾಯಿ ಮೀನುಗಳ ದಾಸ್ತಾನಿನಲ್ಲಿ ಇನ್ನೂ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿಲ್ಲ. ಹಾಗಾಗಿ ಈ ಮೀನನ್ನು ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆಗೆ ಒಳಪಡಿಸದೇ, ಸಂತಾನೋತ್ಪತ್ತಿಗೆ ಅನುವು ಮಾಡಿಕೊಡುವಂತೆ’ ಸಿಎಂಎಫ್‌ಆರ್‌ಐನ ಮಂಗಳೂರು ಪ್ರಾದೇಶಿಕ ಕೇಂದ್ರದ ಪೆಲಾಜಿಕ್ ಫಿಶರೀಸ್ ವಿಭಾಗದ ವಿಜ್ಞಾನಿಗಳಾದ ಡಾ. ಪ್ರತಿಭಾ ರೋಹಿತ್ ಮತ್ತು ಡಾ.ರಾಜೇಶ್ ಕೆ.ಎಂ. ಮೀನುಗಾರರಿಗೆ ಸೂಚಿಸಿದ್ದಾರೆ.

ಇತ್ತೀಚೆಗೆ ಹಿಡಿಯಲಾಗುತ್ತಿರುವ ಬೂತಾಯಿ ಮೀನುಗಳು, ಸಿಎಂಎಫ್‌ಆರ್‌ಐನ ವಿಜ್ಞಾನಿಗಳು ಶಿಫಾರಸು ಮಾಡಿರುವ ಕನಿಷ್ಠ ಕಾನೂನಾತ್ಮಕ ಗಾತ್ರ(ಎಂಎಲ್‌ಎಸ್‌) ಕ್ಕಿಂತ ದೊಡ್ಡದಿದ್ದರೂ, ಈ ಮೀನುಗಳು ಇನ್ನೂ ಪ್ರೌಢಾವಸ್ಥೆಗೆ ಬಂದು ಸಂತಾನೋತ್ಪತ್ತಿ ಹಂತವನ್ನು ತಲುಪಿಲ್ಲ. ಕರ್ನಾಟಕದ ಕರಾವಳಿಯಲ್ಲಿ ಬೂತಾಯಿಯ ಒಟ್ಟು ದಾಸ್ತಾನಿನ ಪ್ರಮಾಣಕ್ಕೆ ಹೋಲಿಸಿದಾಗ. ಮೊಟ್ಟೆ ಇಡುವ ಮೀನಿನ ಶೇಕಡವಾರು ಪ್ರಮಾಣ ಅತೀ ಕಡಿಮೆ ಇರುವುದು ಕಳೆದ ಕೆಲವು ವರ್ಷಗಳ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಪುನರುಜ್ಜೀವನದ ಲಕ್ಷಣಗಳನ್ನು ತೋರಿಸುತ್ತಿರುವ ಈ ಸಣ್ಣ ಗಾತ್ರದ ಅಪಕ್ವವಾದ ಬೂತಾಯಿ ಮೀನಿನ ಹಿಡಿಯುವಿಕೆಯು ದಾಸ್ತಾನಿನ ಏರಿಕೆಯ ಮೇಲೆ ಮತ್ತಷ್ಟು ಹಾನಿ ಉಂಟು ಮಾಡುತ್ತದೆ.

‘ಸ್ವಲ್ಪ ಸಮಯ ದೂರವಿರಿ’

ಮೀನುಗಾರರು ಸ್ವಯಂಪ್ರೇರಿತ ನಿಯಂತ್ರಣದಿಂದ ಬೂತಾಯಿ ಮೀನುಗಾರಿಕೆಯಿಂದ ಸ್ವಲ್ಪ ಸಮಯ ದೂರ ಉಳಿದರೆ, ಈ ಮೀನುಗಳ ಬದುಕಿ ಉಳಿಯುವಿಕೆಯನ್ನು ಹೆಚ್ಚಿಸಲು ಮತ್ತು ಇದರ ದಾಸ್ತಾನನ್ನು ಉತ್ತಮ ಮಟ್ಟಕ್ಕೆ ತರಲು ಸಹಾಯಕವಾಗುತ್ತದೆ ಎಂದು ಸಿಎಂಎಫ್‌ಆರ್‌ಐ ಸಲಹೆ ನೀಡಿದೆ.

ಸಮುದ್ರದಲ್ಲಿ ಯಾವುದೇ ನಿರ್ದಿಷ್ಟ ಭೌಗೋಳಿಕ ಗಡಿಗಳಿಲ್ಲದ ಕಾರಣ, ಈ ಮೀನುಗಳು ಗುಂಪಾಗಿ ಕರಾವಳಿಯಾದ್ಯಂತ ಚಲಿಸುತ್ತವೆ. ಈಗಾಗಲೇ ಕೊಚ್ಚಿಯ ಸಿಎಂಎಫ್‌ಆರ್‌ಐ ನಿರ್ದೇಶಕರು ಮತ್ತು ವಿಜ್ಞಾನಿಗಳು, ಕೇರಳದ ಮೀನುಗಾರರಿಗೆ ಇದೇ ರೀತಿಯ ಸಲಹೆಯನ್ನು ನೀಡಿದ್ದು, ಬೂತಾಯಿ ದಾಸ್ತಾನು ಪುನರುಜ್ಜೀವನಗೊಳಿಸಲು ಉತ್ತಮ ವಾತಾವರಣ ಒದಗಿಸಿದಂತಾಗುತ್ತದೆ ಎಂದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು