ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕಸ ವಿಲೇವಾರಿ, ಒಳ ಚರಂಡಿ ನಿರ್ವಹಣೆ ಪುನರಾರಂಭ

ಮುಷ್ಕರ ಅಂತ್ಯಗೊಳಿಸಿದ ಹೊರಗುತ್ತಿಗೆ ಕಾರ್ಮಿಕರು
Last Updated 26 ಮಾರ್ಚ್ 2023, 9:06 IST
ಅಕ್ಷರ ಗಾತ್ರ

ಮಂಗಳೂರು: ಕಸ ವಿಲೇವಾರಿ ವಾಹನಗಳ ಮುಷ್ಕರನಿರತ ಚಾಲಕರು, ಪೌರಕಾರ್ಮಿಕರು ಹಾಗೂ ಒಳಚರಂಡಿ ವ್ಯವಸ್ಥೆ ನಿರ್ವಹಣೆಯ ಸಫಾಯಿ ಕರ್ಮಾಚಾರಿಗಳು ಮುಷ್ಕರ ಅಂತ್ಯಗೊಳಿಸಿ ಶನಿವಾರ ಕೆಲಸಕ್ಕೆ ಹಾಜರಾದರು.

ಹೊರಗುತ್ತಿಗೆ ಕಾರ್ಮಿಕರ ಮುಷ್ಕರದಿಂದಾಗಿ ನಗರದ ಕಸ ವಿಲೇವಾರಿ ಹಾಗೂ ಒಳಚರಂಡಿ ನಿರ್ವಹಣೆ ಮಾ. 13 ರಿಂದ ಅಸ್ತವ್ಯಸ್ತವಾಗಿತ್ತು. ನಗರದ ಬೀದಿ ಬೀದಿಗಳಲ್ಲಿ ಕಸ ರಾಶಿ ಬಿದ್ದಿತ್ತು. ಒಳಚರಂಡಿ ವ್ಯವಸ್ಥೆ ನಿರ್ವಹಣೆಯಾಗದ ಪರಿಣಾಮ ನಗರದ ಅನೇಕ ಕಡೆ ಮ್ಯಾನ್‌ಹೋಲ್‌ಗಳಲ್ಲಿ ಶೌಚಯುಕ್ತ ಕೊಳಚೆ ನೀರು ಉಕ್ಕಿ ಹರಿಯುತ್ತಿತ್ತು. ಒಳಚರಂಡಿ ಕೊಳವೆಗಳು ಕಟ್ಟಿಕೊಂಡು ದುರ್ನಾತ ಬೀರುವ ಸ್ಥಿತಿ ನಿರ್ಮಾಣವಾಗಿತ್ತು.

‘ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಹೊರಗುತ್ತಿಗೆ ನೌಕರರನ್ನು ನೇರಪಾವತಿ ವ್ಯವಸ್ಥೆಯಡಿ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರಿಂದ ಮುಷ್ಕರ ನಿರತರೆಲ್ಲರೂ ಶನಿವಾರ ಕೆಲಸಕ್ಕೆ ಮರಳಿದ್ದಾರೆ. ನಗರದಲ್ಲಿ ಕಸ ವಿಲೇವಾರಿ ವ್ಯವಸ್ಥೆ ಶೀಘ್ರವೇ ಸಹಜ ಸ್ಥತಿಗೆ ಬರಲಿದೆ’ ಎಂದು ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗದ ಸಂಚಾಲಕ ಅಣ್ಣಪ್ಪ ಬಿ.ಕೆ.ಕಾರೆಕಾಡು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ಹೊರಗುತ್ತಿಗೆ ನೌಕರರು ಕೆಲಸ ನಿರ್ವಹಣೆ ವೇಳೆ ಸರ್ಕಾರದ ಭರವಸೆ ನೆನಪಿಸಲು ಬ್ಯಾನರ್‌ ಅಳವಡಿಸಲಿದ್ದಾರೆ. ಅದೇ ಸಂದೇಶ ಇರುವ ಬ್ಯಾಡ್ಜ್‌ ಧರಿಸಿಕೊಂಡೇ ಕೆಲಸ ಮಾಡಲಿದ್ದಾರೆ’ ಎಂದು ಅವರು ತಿಳಿಸಿದರು.

‘ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿ ವಾಹನಗಳ ಬಹುತೇಕ ಚಾಲಕರು ಹಾಗೂ ಸಿಬ್ಬಂದಿ ಶನಿವಾರ ಕೆಲಸಕ್ಕೆ ಮರಳಿದ್ದಾರೆ. ಒಂದೆರಡು ದಿನಗಳಲ್ಲಿ ಕಸ ವಿಲೇವಾರಿ ವ್ಯವಸ್ಥೆ ಸಹಜ ಸ್ಥಿತಿಗೆ ಬರಬಹುದು’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

‘ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರದಿಂದ ಭರವಸೆ ಸಿಕ್ಕಿದ್ದರಿಂದ ಕೆಲಸಕ್ಕೆ ಹಾಜರಾಗಿದ್ದೇವೆ. ನಗರದ ಎಲ್ಲ ಕೊಳಚೆ ನೀರು ಶುದ್ಧೀಕರಣ ಘಟಕಗಳು (ಎಸ್‌ಟಿಪಿಗಳು) ಹಾಗೂ ಎಸ್‌ಟಿಪಿಗಳು ಮತ್ತೆ ಕಾರ್ಯಾರಂಭ ಮಾಡಿವೆ’ ಎಂದು ದಕ್ಷಿಣ ಕನ್ನಡ ಸಫಾಯಿ ಕರ್ಮಾಚಾರಿಗಳ ಸಂಗದ ಕಾರ್ಯದರ್ಶಿ ಪದ್ಮನಾಭ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT