ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ: ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ ಪ್ರತಿಭಟನೆ

ಕಾಂಗ್ರೆಸ್‌ನಿಂದ ಸೋಮವಾರ ಪಾದಯಾತ್ರೆ: ಐವನ್‌
Last Updated 12 ಜೂನ್ 2021, 12:56 IST
ಅಕ್ಷರ ಗಾತ್ರ

ಮಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲೆಯ ಎಲ್ಲ ಪೆಟ್ರೋಲ್ ಬಂಕ್‌ಗಳ ಎದುರು ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಇದೇ ವೇಳೆ ಕೋವಿಡ್ ಸಹಾಯವಾಣಿ ವತಿಯಿಂದ ಜೂ.14ರಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್‌ ಡಿಸೋಜ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆ ಪ್ರಧಾನಿ ಮೋದಿಯವರು ಚಪ್ಪಾಳೆ, ದೀಪ ಬೆಳಗಿಸಿ, ಶಂಖ ಊದಿ, ಜಾಗಟೆ ಬಾರಿಸಲು ಹೇಳಿದ್ದರು. ಅದೆಲ್ಲವನ್ನೂ ಮಾಡಿಕೊಂಡು ಸೋಮವಾರ 4 ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ಇಂಧನ ಬೆಲೆ ಇಳಿಕೆಗೆ ಒತ್ತಾಯಿಸಲಾಗುವುದು ಎಂದರು.

ಕೋವಿಡ್–19 ಸಂಕಷ್ಟದ ಸಂದರ್ಭದಲ್ಲಿ ಕೆಲಸವಿಲ್ಲದೆ ಕಂಗೆಟ್ಟಿರುವ ಜನರ ಮೇಲೆ ಇಂಧನ ಬೆಲೆ ಏರಿಕೆಯ ಮೂಲಕ ಆರ್ಥಿಕ ಹೊರೆಯನ್ನು ಹೇರುತ್ತಿರುವ ಬಗ್ಗೆ ಬಿಜೆಪಿ ಉತ್ತರಿಸಬೇಕು. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಎಲ್ಲ ವರ್ಗದ ಜನರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಹೇಳಿದರು.

ಅಸಂಘಟಿತಕ ಕಾರ್ಮಿಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಹಣವನ್ನು ಪಡೆಯಲು ಅನುಕೂಲವಾಗುವಂತೆ ಅರ್ಹ ಫಲಾನುಭವಿಗಳಿಗೆ ನೋಂದಣಿಗೆ ಕಾಂಗ್ರೆಸ್ ಹೆಲ್ಪ್‌ಲೈನ್ ವತಿಯಿಂದ ಸಹಕರಿಸಲಾಗುವುದು ಎಂದರು.

ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ನವೀನ್ ಡಿಸೋಜ, ಮುಹಮ್ಮದ್ ಕುಂಜತ್ತ್‌ಬೈಲ್, ಅಪ್ಪಿ, ಶುಭೋದಯ ಆಳ್ವ, ಚಿತ್ತರಂಜನ್ ಶೆಟ್ಟಿ, ಭಾಸ್ಕರ್ ರಾವ್, ಹಸನ್ ಫಳ್ನೀರ್‌, ಮನುರಾಜ್, ಅಶಿತ್ ಪಿರೇರಾ, ಸಿ.ಎಂ. ಮುಸ್ತಫ, ಸತೀಶ್ ಪೆಂಗಲ್, ದಿಕ್ಸಿತ್ ಅತ್ತಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT