ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಅನಿಯಮಿತ ಲೋಡ್‌ಶೆಡ್ಡಿಂಗ್‌– ಗ್ರಾಹಕರ ಅಳಲು

Published 17 ಜನವರಿ 2024, 6:16 IST
Last Updated 17 ಜನವರಿ 2024, 6:16 IST
ಅಕ್ಷರ ಗಾತ್ರ

ಮಂಗಳೂರು: ವಿದ್ಯುತ್ ಪೂರೈಕೆಯಲ್ಲಿ ಪದೇ ಪದೇ ಅನಿಯಮಿತ ವ್ಯತ್ಯಯ ಉಂಟಾಗುತ್ತಿದೆ, ಲೋ ವೋಲ್ಟೇಜ್ ಸಮಸ್ಯೆಯಿಂದ ಕೈಗಾರಿಕೆಗಳು ತೊಂದರೆ ಅನುಭವಿಸುತ್ತಿದ್ದು, ಉತ್ಪಾದನೆ ಮೇಲೂ ದುಷ್ಪರಿಣಾಮ ಬೀರುತ್ತಿದೆ....

ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು (ಮೆಸ್ಕಾಂ) ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಂಗಳೂರು ವೃತ್ತದ ಹೈ–ಟೆನ್ಷನ್‌ (ಎಚ್‌ಟಿ) ವಿದ್ಯುತ್‌ ಗ್ರಾಹಕರ ಸಂವಾದದಲ್ಲಿ ಗ್ರಾಹಕರು ಹೇಳಿಕೊಂಡ ಅಹವಾಲುಗಳಿವು.

ಅನಿಯಮಿತ ಲೋಡ್‌ಶೆಡ್ಡಿಂಗ್‌ ಹಾಗೂ ಲೋ ವೋಲ್ಟೇಜ್ ಸಮಸ್ಯೆಯಿಂದಾಗಿ ಯಂತ್ರಗಳು ಕೆಡುತ್ತಿದ್ದು, ದುರಸ್ತಿಗೆ ದುಬಾರಿ ವೆಚ್ಚವಾಗುತ್ತಿದೆ ಎಂದು ಕೋಣಾಜೆ ಕಂಬಳಪದವು, ಬೈಕಂಪಾಡಿ ಕೈಗಾರಿಕಾ ವಲಯದ ಅನೇಕ ಉದ್ಯಮಿಗಳು ದೂರಿದರು. ಗ್ರಾಹಕರ ಅಹವಾಲುಗಳನ್ನು ಆಲಿಸಿದ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಅವರು ಈ ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥಪಡಿಸುವ ಭರವಸೆ ನೀಡಿದರು.  

ಭಾರತದ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಸಂಘಗಳ ಒಕ್ಕೂಟದ (ಕ್ರೆಡೈ) ಮಂಗಳೂರು ಘಟಕದ  ವಿನೋದ್ ಪಿಂಟೊ, ‘ರಿಯಲ್ ಎಸ್ಟೇಟ್‌ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ನಿರ್ಮಾಣ ಯೋಜನೆಗಳು ತ್ವರಿತ ಗತಿಯಲ್ಲಿ ಅನುಷ್ಠಾನಗೊಳ್ಳುತ್ತಿವೆ. ಐ.ಟಿ.ಕಂಪನಿಗಳ ಕಚೇರಿಗಳು ಇಲ್ಲಿ ಕಚೇರಿ ತೆರೆಯುತ್ತಿವೆ.  ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಕ್ರಮವಹಿಸಿ’ ಎಂದು ಸಲಹೆ ನೀಡಿದರು. 

‘ಸುರತ್ಕಲ್ ಮತ್ತು ಬೈಕಂಪಾಡಿ ಕೈಗಾರಿಕಾ ವಲಯಕ್ಕೆ ವಿದ್ಯುತ್ ಪೂರೈಸ ಒಂದೇ ಎಚ್‌ಟಿ ಮಾರ್ಗವಿದೆ. ದುರಸ್ತಿ ಅಥವಾ ನಿರ್ವಹಣೆಗೆ ವಿದ್ಯುತ್ ಪೂರೈಕೆ ಪದೇ ಪದೇ ಸ್ಥಗಿತವಾಗುತ್ತಿದೆ. ಆ ಬಳಿಕ ಯಂತ್ರಗಳನ್ನು ಮತ್ತೆ  ಚಾಲನೆ ಮಾಡಲು 1 ಗಂಟೆಗೂ ಹೆಚ್ಚು ಸಮಯ ಬೇಕು.  ನಾವು ತಯಾರಿಸುವ ಅಡುಗೆ ಎಣ್ಣೆಯ  ಗುಣಮಟ್ಟದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ’ ಎಂದು ಅದಾನಿ ಗ್ರೂಪ್‌ನ ಪ್ರಸಾದ್  ಸಮಸ್ಯೆ ಹೇಳಿಕೊಂಡರು.  ಐಡಿಯಲ್ ಐಸ್‌ಕ್ರೀಂನ ಕಿನ್ನಿಗೋಳಿ ಘಟಕದ ಮುಖ್ಯಸ್ಥರೂ ಇದಕ್ಕೆ ದನಿಗೂಡಿಸಿದರು.

‘ಕುಲಶೇಖರದ ಹಿರಿಯ ನಾಗರಿಕರ ಆಶ್ರಮವೊಂದಕ್ಕೆ ಎಚ್‌ಟಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ರಾಜ್ಯದ ಕೆಲವೆಡೆ ಇಂತಹ ಆಶ್ರಮಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸಲಾಗುತ್ತಿದೆ.  ಲಾಭರಹಿತವಾಗಿ ನಡೆಸುತ್ತಿರುವ ನಮ್ಮ ಸಂಸ್ಥೆಗೂ ಈ ಸೌಕರ್ಯ ಕಲ್ಪಿಸಿ’ ಎಂದು ಆಶ್ರಮದ ಸೋದರಿ ಥಾಮಸಿನ್ ಮರಿಯಾ ಕೋರಿದರು. ಶಾಲಾ ಕಾಲೇಜುಗಳ ಎಚ್‌ಟಿ ಸಂಪರ್ಕವನ್ನು ಎಲ್‌ಟಿ ಸಂಪರ್ಕವನ್ನಾಗಿ ಪರಿವರ್ತಿಸುವಂತೆ ಗ್ರಾಹಕರೊಬ್ಬರು ಮನವಿ ಮಾಡಿದರು. ಇದನ್ನು ಪರಿಶೀಲಿಸುವುದಾಗಿ ಪದ್ಮಾವತಿ ಭರವಸೆ ನೀಡಿದರು.

ಮೆಸ್ಕಾಂ ಸೂಪರಿಂಟೆಂಡಿಂಗ್‌ ಎಂಜಿನಿಯರ್ ಕೃಷ್ಣರಾಜು, ‘ಮೆಸ್ಕಾಂನಡಿ ಜಿಲ್ಲೆಯ ವ್ಯಾಪ್ತಿಯಲ್ಲಿ 1182 ಎಚ್‌ಟಿ ಗ್ರಾಹಕರಿದ್ದು, ಶಿರ್ತಾಡಿ, ಕೋಟೆಕಾರ್ ಹಾಗೂ ನೆಲ್ಯಾಡಿಯಲ್ಲಿ33/11 ಕೆವಿ ಹೊಸ ವಿದ್ಯುತ್ ಕೇಂದ್ರಗಳ ಕಾಮಗಾರಿ ಪ್ರಗತಿಯಲ್ಲಿವೆ ಎಂದು  ಮಾಹಿತಿ ನೀಡಿದರು.

ಸಭೆಯಲ್ಲಿ ಮೆಸ್ಕಾಂ ನಿರ್ದೇಶಕ (ತಾಂತ್ರಿಕ) ಎಚ್.ಜಿ. ರಮೇಶ್, ಮುಖ್ಯ ಎಂಜಿನಿಯರ್ ಪುಷ್ಪಾ, ಹೆಚ್ಚುವರಿ ಮುಖ್ಯ ಪರಿವೀಕ್ಷಕ ಸುದೇಶ್ ಮಾರ್ಟಿಸ್, ಲೆಕ್ಕ ಪರಿಶೋಧಕ ಹರಿಶ್ಚಂದ್ರ, ಮುಖ್ಯ ಆರ್ಥಿಕ ಅಧಿಕಾರಿ ಮೌರಿಸ್, ಕೆಸಿಸಿಐ ಅಧ್ಯಕ್ಷ ನಜೀರ್ ಮೊದಲಾದವರು ಭಾಗವಹಿಸಿದರು. ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯಕ್ ಸ್ವಾಗತಿಸಿದರು. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.

‘ಎಚ್‌ಟಿ ಬದಲು ಎಲ್‌ಟಿ ಸಂಪರ್ಕ ನೀಡಿ’

ಬಹುಮಹಡಿ ವಸತಿ ಕಟ್ಟಡಗಳಿಗೆ ಎಚ್‌ಟಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಕಟ್ಟಡಗಳಲ್ಲಿ ವಸತಿಯನ್ನು ಬಾಡಿಗೆಗೆ ಪಡೆದವರು ಹಾಗೂ ಕೆಲವು  ಮಾಲೀಕರು ಹೆಚ್ಚುವರಿ ವಿದ್ಯುತ್ ಬಿಲ್‌ ಪಾವತಿಸಲು ನಿರಾಕರಿಸುತ್ತಾರೆ. ಇದರಿಂದ ಬಹುಮಹಡಿ ವಸತಿ ಸಮುಚ್ಚಯಗಳ ನಿರ್ವಹಣಾ ಸಂಘಗಳು ಆರ್ಥಿಕ ಹೊರೆಯನ್ನು ಹೊರಬೇಕಾಗುತ್ತಿದೆ. ಎಚ್‌ಟಿ ವಿದ್ಯುತ್‌ ಸಂಪರ್ಕವನ್ನು ಲೋ ಟೆನ್ಶನ್ (ಎಲ್‌ಟಿ) ಸಂಪರ್ಕಕ್ಕೆ ಬದಲಾಯಿಸಬೇಕು ಎಂದು ಈ ಸಂಘಗಳ ಪ್ರತಿನಿಧಿಗಳು ಕೋರಿದರು. ಮೆಸ್ಕಾಂ ಎಂಡಿ ಪದ್ಮಾವತಿ ‘ಈ ಹಿಂದೆ 50 ಕೆವಿ ಲೋಡ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವ  ಬಹುಮಹಡಿ ಕಟ್ಟಡಗಳಿಗೆ ಎಚ್‌ಟಿ ಸಂಪರ್ಕ ಕಡ್ಡಾಯವಾಗಿತ್ತು.  ಈಗ 150 ಕೆ.ವಿ.ಗಿಂತ ಹೆಚ್ಚು ಲೋಡ್‌ ಹೊಂದಿರುವ ಕಟ್ಟಡಗಳು ಮಾತ್ರ ಎಚ್‌ಟಿ ಸಂಪರ್ಕ ಪಡೆದರೆ ಸಾಕು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT