ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಎಲ್ಲ ಸವಲತ್ತು ಮನೆಗೆ ತಲುಪಿಸುವ ‌ವ್ಯವಸ್ಥೆ, ಸಂಸದ ನಳಿನ್ ಕುಮಾರ್

ಕೇರಳದ ಆಂಬುಲೆನ್ಸ್‌ಗಳಿಗೆ ಜಿಲ್ಲೆಗೆ ಪ್ರವೇಶ ಇಲ್ಲ ಎಂದ ಸಂಸದ
Last Updated 25 ಮಾರ್ಚ್ 2020, 17:04 IST
ಅಕ್ಷರ ಗಾತ್ರ

ಮಂಗಳೂರು: ಸಾರ್ವಜನಿಕರು ಅಗತ್ಯ ವಸ್ತುಗಳಿಗೆ ಗುಂಪು ಗುಂಪುಗಳಾಗಿ ಮಾರುಕಟ್ಟೆಗಳಿಗೆ ಮುಗಿಬೀಳುತ್ತಿರುವ ಬಗ್ಗೆ ತಿಳಿದುಬಂದಿದೆ. ಬುಧವಾರ ಅಗತ್ಯ ವಸ್ತು ಖರೀದಿಗೆ ಸಮಯ ಕೊಡಲಾಗಿದೆ. ಆದರೆ ಗುರುವಾರದಿಂದ ನಗರದಲ್ಲಿ ಇದಕ್ಕೂ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಜನ ಹೊರಗೆ ಅಡಿ ಇಡುವಂತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಕಟ್ಟು ನಿಟ್ಟಿನ ಕ್ರಮ ಅನಿವಾರ್ಯ. ಹೀಗಾಗಿ ಗುರುವಾರದಿಂದ ಜನರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಜನರಿಗೆ ಅಗತ್ಯ ವಸ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ. ಇದಕ್ಕಾಗಿ ಶೀಘ್ರವೇ ವ್ಯವಸ್ಥೆ ಮಾಡಲಾಗುವುದು. ಸರ್ಕಾರದ ಕಡೆಯಿಂದ ಪ್ರತಿ ಮನೆಗೆ ಹೇಗೆ ತಲುಪಿಸುವುದು, ಅಪಾರ್ಟ್‌ಮೆಂಟ್‌ಗಳಿಗೆ ಹೇಗೆ ತಲುಪಿಸುವುದು ಎನ್ನುವ ಬಗ್ಗೆ ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂದು ಅವರು ಸ್ಪಷಪಡಿಸಿದ್ದಾರೆ.

ಕೊರೊನಾ ಹರಡುವುದನ್ನು ನಿಯಂತ್ರಿಸಬಹುದು. ಆದರೆ ಹಲವೆಡೆ ಮಾರ್ಕೆಟ್, ಅಗತ್ಯ ವಸ್ತುಗಳ ಖರೀದಿಗೆ ಜನ ಒಮ್ಮೆಲೇ ಮುಗಿಬೀಳುತ್ತಿದ್ದಾರೆ. ವರ್ತಕರು, ಗ್ರಾಹಕರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ವ್ಯಾಪಾರ ವಹಿವಾಟು ಮಾಡುತ್ತಿರುವ ಬಗ್ಗೆ ತಿಳಿದುಬಂದಿದ್ದು ಗುರುವಾರ ಎಲ್ಲವನ್ನೂ ಬಂದ್ ಮಾಡಲಾಗುವುದು. ಈ ಬಗ್ಗೆ ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಕೇರಳದ ಆಂಬುಲೆನ್ಸ್‌ಗಳಿಗೆ ಪ್ರವೇಶ ನಿಷೇಧ: ಪ್ರಸ್ತುತ ಇರುವ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗಳು ‌ನಮ್ಮ ಜಿಲ್ಲೆಯ ಜನರಿಗೆ ಸಾಲುವುದಿಲ್ಲ, ಹೀಗಾಗಿ ಹೊರಗಿನ ಆಂಬುಲೆನ್ಸ್ ಸೇರಿ ಯಾವುದೇ ವಾಹನವನ್ನು ಜಿಲ್ಲೆಯ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಕಟೀಲ್ ಹೇಳಿದ್ದಾರೆ.

ಕೇರಳದಿಂದ ನಿರಂತರವಾಗಿ ಅಂಬುಲೆನ್ಸ್‌ಗಳು ಮಂಗಳೂರು ಆಸ್ಪತ್ರೆಗೆ ಸಂಚರಿಸುತ್ತಿದ್ದು, ಇದು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಸಣ್ಣ ಜ್ವರ ಬಂದರೂ ಆಂಬುಲೆನ್ಸ್ ಮೂಲಕ ಕೇರಳಿಗರು ಮಂಗಳೂರಿನ ಆಸ್ಪತ್ರೆ ಸೇರುತ್ತಿರುವ ದೃಶ್ಯ ಕಳೆದೆರಡು ದಿನಗಳಿಂದ ಮಾಮೂಲಾಗಿತ್ತು. ಮಂಗಳೂರಿನಲ್ಲಿರುವ ಆಸ್ಪತ್ರೆಗಳಲ್ಲಿ ಕೇರಳಿಗರೇ ತುಂಬಿ ತುಳುಕಿದರೆ ತುರ್ತು ಸ್ಥಿತಿಯಲ್ಲಿ ಜಿಲ್ಲೆಯ ಜನರು ದಾಖಲಾಗುವುದಾದರೂ ಎಲ್ಲಿ ಎಂದು ಜಿಲ್ಲೆಯ ಜನಸಾಮಾನ್ಯರು ಪ್ರಶ್ನಿಸಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿರುವ ಸಂಸದರು, ಮಂಗಳವಾರ ಅತಿ ಹೆಚ್ಚು ರೋಗಿಗಳು ಕೇರಳದಿಂದ ಮಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಒಂದು ನಿರ್ಧಾರ ತೆಗೆದುಕೊಂಡಿದೆ. ಸದ್ಯ ಉದ್ಭವವಾಗಿರುವ ಪರಿಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗಳು ‌ನಮಗೆ ಸಾಲುವುದಿಲ್ಲ. ಹೀಗಾಗಿ ಹೊರಗಿನ ವಾಹನ, ಅಂಬುಲೆನ್ಸ್ ಸೇರಿ ಯಾವುದನ್ನೂ ಬಿಡಬಾರದು ಅಂತ ನಿರ್ಧರಿಸಲಾಗಿದೆ. ಇನ್ನು ಎಲ್ಲಾ ಅಂಬುಲೆನ್ಸ್ ಗಳನ್ನು ತಲಪಾಡಿ ಗಡಿಯಲ್ಲಿ ನಿರ್ಬಂಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಕೊರತೆ ಆಗದು: ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ‌ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಈಗಾಗಲೇ ಎಲ್ಲ ಪೂರೈಕೆದಾರರು, ವರ್ತಕರ‌ ಜತೆಗೆ ಚರ್ಚಿಸಲಾಗಿದೆ. ಅಗತ್ಯ ವಸ್ತುಗಳ ಸಾಗಣೆ ವಾಹನಗಳಿಗೆ ಯಾವುದೇ ಅಡೆತಡೆ ಇಲ್ಲ. ಜನರು ಆತಂಕಕ್ಕೆ ಒಳಗಾಗಬಾರದು ಎಂದು ಅವರು ಹೇಳಿದ್ದಾರೆ.

ನಿತ್ಯ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಮಾರುಕಟ್ಟೆಯಲ್ಲಿ‌‌ ಸಾರ್ವಜನಿಕರ‌ ಖರೀದಿಗೆ ನಿರ್ಬಂಧ

ಮಂಗಳೂರು ನಗರದ ಕೇಂದ್ರ ಮಾರುಕಟ್ಟೆಯಲ್ಲಿ ಚಿಲ್ಲರೆ ಮಾರಾಟಗಾರರು ಮಾತ್ರ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಖರೀದಿ ಮಾಡಬಹುದು. ಸಾರ್ವಜನಿಕರು‌ ಈ ಮಾರುಕಟ್ಟೆಯಲ್ಲಿ ಖರೀದಿ ಮಾಡುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ‌ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಚಿಲ್ಲರೆ ಮಾರಾಟಗಾರರು ತಮ್ಮ ಪ್ರದೇಶಗಳ‌ ವ್ಯಾಪ್ತಿಯ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬೇಕು. ಜನರು ತಮ್ಮ ಹತ್ತಿರದ ಅಂಗಡಿಗಳಲ್ಲಿ ಬೆಳಿಗ್ಗೆ 6 ರಿಂದ 12 ರವರೆಗೆ ಮಾತ್ರ ಖರೀದಿ ಮಾಡಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT