ಸೋಮವಾರ, ಅಕ್ಟೋಬರ್ 18, 2021
26 °C
ಮುಖ್ಯಮಂತ್ರಿಗೆ ಪತ್ರ ಬರೆದ ಪ್ರಮುಖರು

ಲಸಿಕೆ ಪಡೆಯದವರಿಗೂ ಬದುಕಲು ಬಿಡಿ: ಸಾಹಿತಿಗಳು, ಸಂಘಟನೆ ಪ್ರಮುಖರಿಂದ ಸಿಎಂಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೋವಿಡ್‌ ಲಸಿಕೆ ಪಡೆಯಲಾಗದವರಿಗೂ ಮನುಷ್ಯರಾಗಿ ಬದುಕಿಕೊಳ್ಳಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿ ಸಾಹಿತಿಗಳು, ಸಂಘಟನೆಗಳ ಪ್ರಮುಖರು ಹಾಗೂ ವಿವಿಧ ಕ್ಷೇತ್ರ ತಜ್ಞರು ಪತ್ರ ಬರೆದಿದ್ದಾರೆ. 

ಲಸಿಕೆ ಹಾಕಿಸಿಕೊಳ್ಳಲಾಗದವರನ್ನು ವಿವಿಧ ಕಾರ್ಯಕ್ರಮಗಳಿಂದ ಹೊರಗುಳಿಸುವುದು ಅಸಾಂವಿಧಾನಿಕವೂ, ಅನೈತಿಕವೂ, ನ್ಯಾಯಬಾಹಿರ ಹಾಗೂ ಅಮಾನುಷವೂ ಆಗಿದೆ. ಕೋವಿಡ್‌ ಸೋಂಕು ಶೇ 75 ಜನರಿಗೆ ತಗುಲಿ ಅವರಲ್ಲಿ ರೋಗರಕ್ಷಣೆಯನ್ನು ಉಂಟು ಮಾಡಿರಬಹುದು ಎಂದು ಅಧ್ಯಯನಗಳು ತಿಳಿಸಿವೆ. ಇನ್ನು ಕೆಲವೇ ತಿಂಗಳುಗಳಲ್ಲಿ ಈ ಹೊಸ ಸೋಂಕಿನ ಹರಡುವಿಕೆ ಮರೆಯಾಗಬಹುದು ಎಂದೂ ತಜ್ಞರು ಹೇಳಿದ್ದಾರೆ. ಹಾಗಿರುವಾಗ ಲಸಿಕೆ ಹಾಕಿಸಿಕೊಳ್ಳಲಾಗದವರನ್ನು ಶಿಕ್ಷಣ, ನೌಕರಿ, ಪಡಿತರ ಇತ್ಯಾದಿಗಳಿಂದ ಹೊರಗಿಟ್ಟು, ಅವರ ಬದುಕನ್ನು ಶಾಶ್ವತವಾಗಿ ನಾಶ ಮಾಡುವುದು ಅಕ್ಷಮ್ಯ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ಲಸಿಕೆ ಪಡೆದವರಿಗೂ ಸೋಂಕು ತಗಲಬಹುದು, ಅವರಿಂದಲೂ ಅದು ಹರಡಬಹುದು ಎನ್ನುವುದು ದೃಢಪಟ್ಟಿದೆ. ಲಸಿಕೆ ಕಡ್ಡಾಯ ಮಾಡುವುದು ಸರಿಯಲ್ಲ ಎಂದು ಈಶಾನ್ಯ ರಾಜ್ಯಗಳು, ಕೇರಳ, ಗುಜರಾತ್ ಹೈಕೋರ್ಟ್‌ಗಳು ಹೇಳಿವೆ. ರಾಜ್ಯ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ. ಲಸಿಕೆ ಉತ್ಪಾದಿಸುವ ಕಂಪೆನಿಗಳೇ ವೈದ್ಯರ ಸಲಹೆಯನ್ನು ಪಾಲಿಸುವಂತೆ ತಿಳಿಸಿವೆ. ಕೋವಿಡ್ ಲಸಿಕೆ ಪಡೆಯುವುದು ಐಚ್ಛಿಕ, ವರ್ಷಾಂತ್ಯಕ್ಕೆ ಕೇವಲ ಶೇ 43 ಜನರಿಗಷ್ಟೇ ಲಸಿಕೆಗಳನ್ನು ನೀಡಲು ಸಾಧ್ಯ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೇಳಿವೆ.  

ಆದರೆ, ಲಸಿಕೆ ಪಡೆಯದವರಿಗೆ ಪಡಿತರ ಇಲ್ಲ, ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶವಿಲ್ಲ, ವ್ಯಾಪಾರ ಮಳಿಗೆಗಳಲ್ಲಿ ಕೆಲಸ ಮಾಡುವಂತಿಲ್ಲ, ಕೆಲಸಕ್ಕೆ ಬರುವಂತಿಲ್ಲ, ಕಾಲೇಜುಗಳಿಗೆ ಪ್ರವೇಶವಿಲ್ಲ, ಲಸಿಕೆ ನಿರಾಕರಿಸಿದರೆ ಶಿಕ್ಷಾರ್ಹ ಎಂಬಿತ್ಯಾದಿ ಆದೇಶಗಳು, ಹೇಳಿಕೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದಲೂ ಪ್ರಕಟಗೊಂಡಿವೆ.

ಯಾವುದೇ ಕಾರ್ಯಕ್ರಮ ಅಥವಾ ಯೋಜನೆಗಳಿಗೆ ಲಸಿಕೆ ಕಡ್ಡಾಯ ಎಂದು ಜೋಡಿಸಿಲ್ಲ ರಾಜ್ಯದ ಮುಖ್ಯ ಕಾರ್ಯದರ್ಶಿ ಸ್ಪಷ್ಟ ಪಡಿಸಿದ್ದಾರೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಐಚ್ಛಿಕವೆಂದೂ ಸ್ಪಷ್ಟ ಪಡಿಸಿದ್ದರೆ, ಕೆಳಮಟ್ಟದಲ್ಲಿ ಲಸಿಕೆ ಕಡ್ಡಾಯಗೊಳಿಸಿ, ಉಳಿದವರನ್ನು ಹೊರಗುಳಿಸುವ, ಶಿಕ್ಷಿಸುವ, ಬೆದರಿಕೆಗಳನ್ನು ಹಾಕಲಾಗುತ್ತಿದೆ.

ಆದ್ದರಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸುವ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಆದರೆ, ಲಸಿಕೆ ಪಡೆಯಲಾಗದವರನ್ನು ಹೊಣೆಯಾಗಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. 

ಚಿಂತಕ ಡಾ.ಜಿ.ರಾಮಕೃಷ್ಣ, ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ದಸಂಸನ ಮಾವಳ್ಳಿ ಶಂಕರ, ಸಂಪಾದಕ ಡಾ.ಸಿದ್ದನಗೌಡ ಪಾಟೀಲ, ವಿಚಾರವಾದಿಗಳ ಒಕ್ಕೂಟದ ಪ್ರೊ. ನರೇಂದ್ರ ನಾಯಕ್, ಮಹಿಳಾ ಸಂಘಟನೆಯ ಕೆ. ನೀಲಾ, ವೈದ್ಯರಾದ ಪಿ.ವಿ. ಭಂಡಾರಿ, ವಾಣಿಕೋರಿ, ಡಾ. ಕೃಷ್ಣಮೋಹನ ಪ್ರಭು, ಶಿಕ್ಷಣ ತಜ್ಞ ಡಾ.ವಿಪಿ ನಿರಂಜನಾರಾಧ್ಯ, ನಿರ್ದೇಶಕ ಕೇಸರಿ ಹರವೂ, ನಾಗೇಶ್ ಕಲ್ಲೂರು, ವಿವಿಧ ಸಂಘನೆಗಳ ಪ್ರಮುಖರು ಪತ್ರಕ್ಕೆ ಸಹಿ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು