ಬುಧವಾರ, ಜುಲೈ 28, 2021
29 °C

ದಕ್ಷಿಣ ಕನ್ನಡ: 10 ಸಾವಿರ ಮಾದರಿ ಪರೀಕ್ಷೆಯಲ್ಲಿ 224 ಪ್ರಕರಣ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೋವಿಡ್–19 ಸೋಂಕು ಪತ್ತೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡೂವರೆ ತಿಂಗಳಲ್ಲಿ ಒಟ್ಟು 10 ಸಾವಿರಕ್ಕೂ ಹೆಚ್ಚು ಮಂದಿಯ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ಒಟ್ಟು 224 ಪ್ರಕರಣಗಳು ದೃಢಪಟ್ಟಂತಾಗಿದೆ. ಇದರಲ್ಲಿ 125 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.

ಗುರುವಾರ ಮತ್ತೆ 205 ಜನರ ಮಾದರಿಗಳನ್ನು ತಪಾಸಣೆಗೆ ಕಳುಹಿಸಲಾಗಿದ್ದು, ಈ ಮೂಲಕ ಒಟ್ಟಾರೆ 10,181 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ 10,019 ಮಾದರಿಗಳ ಪರೀಕ್ಷಾ ವರದಿ ಕೈಸೇರಿದ್ದು, ಇನ್ನೂ 162 ಮಾದರಿಗಳ ವರದಿ ಬರಬೇಕಾಗಿದೆ.

ಆರಂಭದಲ್ಲಿ ವಿದೇಶದಿಂದ ಬಂದವರಲ್ಲಿ ಸೋಂಕು ದೃಢವಾಗಿದ್ದರೆ, ಮೇ ಮಧ್ಯಭಾಗದಿಂದ ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆರಂಭದಲ್ಲಿ ವಿದೇಶದಿಂದ ಬಂದವರನ್ನು ವಿಮಾನ ನಿಲ್ದಾಣದ ಮೂಲಕ ನೇರವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಇದರಿಂದಾಗಿ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಎಚ್ಚರವಹಿಸಲಾಗಿತ್ತು.

ನಂತರ ದಿನಗಳಲ್ಲಿ ಬಂಟ್ವಾಳ ಕಸಬಾ ಹಾಗೂ ನಗರದ ಫಸ್ಟ್‌ ನ್ಯೂರೋ ಆಸ್ಪತ್ರೆಯ ಮೂಲದಿಂದ ಸೋಂಕು ಹರಡಲು ಆರಂಭಿಸಿತ್ತು. ಇದರಲ್ಲಿ ಐದು ಜನ ಮಹಿಳೆಯರೂ ಮೃತಪಟ್ಟಿದ್ದರು. ಅದಾದ ನಂತರ ಮಹಾರಾಷ್ಟ್ರದಿಂದ ಬಂದ ಅನೇಕರಲ್ಲಿ ಸೋಂಕು ದೃಢವಾಗಿದೆ. ಅದಾಗ್ಯೂ ಸಮುದಾಯದ ಮಟ್ಟದಲ್ಲಿ ಸೋಂಕು ಹರಡಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಚೇತರಿಕೆ ಪ್ರಮಾಣ ಏರಿಕೆ

ಜಿಲ್ಲೆಯಲ್ಲಿ ಪತ್ತೆಯಾಗಿರುವ 224 ಕೋವಿಡ್–19 ಪ್ರಕರಣಗಳ ಪೈಕಿ 125 ಮಂದಿ ಗುಣಮುಖರಾಗಿದ್ದು, ಚೇತರಿಕೆಯ ಪ್ರಮಾಣ ಶೇ 55.80 ರಷ್ಟಾಗಿದೆ.

ಆರಂಭದಲ್ಲಿ ಸುಮಾರು 28 ದಿನಗಳವರೆಗೆ ಕೋವಿಡ್–19 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದಾದ ನಂತರ ಎರಡು ದಿನ ನಿರಂತರ ತಪಾಸಣೆ ನಡೆಸಿ, ವರದಿ ನೆಗೆಟಿವ್‌ ಬಂದರೆ ಮಾತ್ರ ಬಿಡುಗಡೆ ಮಾಡಲಾಗುತ್ತಿತ್ತು. ಇದೀಗ ಗುಣಮುಖರಾದವರ ಗಂಟಲು ದ್ರವದ ಮಾದರಿ ಒಂದು ಬಾರಿ ನೆಗೆಟಿವ್‌ ಬಂದಲ್ಲಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತಿದೆ.

ಮಾರ್ಗಸೂಚಿಯಂತೆ ಕ್ರಮ

ಮಹಾರಾಷ್ಟ್ರದಿಂದ ಬಂದವರನ್ನು ಮಾರ್ಗಸೂಚಿಯಂತೆ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ಅಲ್ಲಿಂದ ಬರುವಾಗಲೇ ತಪಾಸಣೆ ಮಾಡಿಸಿಕೊಂಡು, ವರದಿ ನೆಗೆಟಿವ್‌ ಬಂದಿದ್ದರೆ ಅಂಥವರನ್ನು ನೇರವಾಗಿ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತಿದೆ. ಅಲ್ಲದೇ ಗರ್ಭಿಣಿಯರು, 10 ವರ್ಷದೊಳಗಿನ ಹಾಗೂ 60 ವರ್ಷದ ಮೇಲಿನ ವಯೋಮಾನದವರು, ಜತೆಗೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವುದು, ಕುಟುಂಬದಲ್ಲಿ ಯಾರಾದರೂ ನಿಧನರಾಗಿದ್ದಲ್ಲಿ, ಅಂಥವರನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತಿದೆ.

ಮಹಾರಾಷ್ಟ್ರದಿಂದ ಬಂದವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಹಾಗೂ 14 ದಿನಗಳ ಹೋಂ ಕ್ವಾರಂಟೈನ್‌ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

8 ಮಂದಿ ಗುಣಮುಖ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 15 ವರ್ಷದ ಬಾಲಕ ಸೇರಿದಂತೆ ಒಟ್ಟು 8 ಮಂದಿ ಗುಣಮುಖರಾಗಿದ್ದಾರೆ.27, 29, 30, 36, 48 ಹಾಗೂ 58 ವರ್ಷದ ಪುರುಷರು ಮತ್ತು 60 ವರ್ಷದ ವೃದ್ಧೆಯ ವರದಿ ನೆಗೆಟಿವ್ ಬಂದಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಈ ಮಧ್ಯೆ ಮತ್ತೆ ಇಬ್ಬರಿಗೆ ಕೋವಿಡ್–19 ದೃಢವಾಗಿದೆ. ರೋಗಿ ಸಂಖ್ಯೆ 4,186 ಸಂಪರ್ಕದಿಂದ 45 ವರ್ಷದ ಮಹಿಳೆಗೆ ಸೋಂಕು ತಗಲಿದೆ. ಇವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ರೋಗ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಗಂಟಲು ದ್ರವದ ಮಾದರಿ ತಪಾಸಣೆಗೆ ಕಳುಹಿಸಲಾಗಿತ್ತು.

ಇದೇ 1 ರಂದು ಪುಣೆಯಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ್ದ 33 ವರ್ಷದ ಪುರುಷ ಬೆಳ್ತಂಗಡಿಗೆ ಬಂದಿದ್ದರು. ಅವರಲ್ಲಿಯೂ ಇದೀಗ ಸೋಂಕು ಖಚಿತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು