ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ ಪ್ರಣೀತ ಬದುಕು ನಮ್ಮದಾಗಬೇಕು: ರಂಗಕರ್ಮಿ ಪ್ರಸನ್ನ ಹೆಗ್ಗೋಡು

Published 6 ಡಿಸೆಂಬರ್ 2023, 4:32 IST
Last Updated 6 ಡಿಸೆಂಬರ್ 2023, 4:32 IST
ಅಕ್ಷರ ಗಾತ್ರ

ಮುಡಿಪು: ‘ಯಾವ ತಂತ್ರಜ್ಞಾನದ ಯಾಂತ್ರಿಕೃತ ಬದುಕು ನಮಗೆ ಶ್ರೀಮಂತಿಕೆ, ಪ್ರಗತಿಯನ್ನು ತಂದು ಕೊಟ್ಟಿತೋ ಅದೇ ಪ್ರಗತಿ ನಮಗೆ ಅರಿವಾಗದಂತೆ ನಮ್ಮನ್ನು ನಾಶ ಮಾಡುತ್ತಿವೆ. ಪ್ರೀತಿಯ, ಸಹಬಾಳ್ವೆಯ, ಆರೋಗ್ಯಕರ ಬದುಕಿಗಾಗಿ ಯಾಂತ್ರಿಕ ಬದುಕು ದೂರವಾಗಿ ಕಾಯಕದ ಬದುಕು ಮರಳಬೇಕು. ಕಾಯಕ ಪ್ರಣೀತ ಬದುಕು ನಮ್ಮದಾಗಬೇಕು’ ಎಂದು ರಂಗಕರ್ಮಿ ಪ್ರಸನ್ನ ಹೆಗ್ಗೋಡು ಹೇಳಿದರು.

ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ ಕರ್ನಾಟಕ ವತಿಯಿಂದ ಪ್ರೀತಿ ಸಹಬಾಳ್ವೆಗಾಗಿ ನಮ್ಮ ನಡೆ ಆಶಯದೊಂದಿಗೆ ಡಿ.7ರ ವರೆಗೆ ನಡೆಯಲಿರುವ ಸಾಂಸ್ಕೃತಿಕ ಯಾತ್ರೆಯ ಭಾಗವಾಗಿ ಮುಡಿಪುವಿನ ಕುಲಾಲ ಸಂಘದ ಸಹಯೋಗದಲ್ಲಿ ಮುಡಿಪುವಿನ ಕುಲಾಲ ಸಮುದಾಯ ಭವನದಲ್ಲಿ ಮಂಗಳವಾರ ಸ್ವಾತಂತ್ರ್ಯ ಹೋರಾಟಗಾರ ಅಮ್ಮೆಂಬಳ ಬಾಳಪ್ಪ ಅವರ ನೆನಪು, ಕುಂಬಾರಿಕೆ ಮತ್ತು ಕುಲವೃತ್ತಿಗಳು ಕುರಿತು ಸಂವಾದ, ಕುಂಬಾರಿಕೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೈಗಾರೀಕರಣ ಪರಿಣಾಮವಾಗಿ ಸೃಷ್ಟಿಯಾದ ಯಾಂತ್ರಿಕೃತ ಶ್ರೀಮಂತಿಕೆ, ಪ್ರಗತಿಯ ನಡುವೆಯೇ ನಮ್ಮ ನಡುವಿನ ಸಂಬಂಧಗಳು ದೂರವಾಗುತ್ತಿವೆ. ಜಗಳಗಳು ಹೆಚ್ಚಾಗುತ್ತಿವೆ. ದೇವರ ಜತೆಗಿನ ಸಂಬಂಧ ದೂರವಾಗುತ್ತಿದೆ. ಗಾಂಧೀಜಿಯ ಆಶಯದಂತೆ ಜಾತಿಭೇದ ದೂರಗೊಳಿಸಿ, ಕಾಯಕ, ಕೈ ಉತ್ಪನ್ನಗಳನ್ನು ಉಳಿಸಿಕೊಳ್ಳುವುದರ ಮೂಲಕ ನಮ್ಮ ಧರ್ಮವನ್ನು ಸಂರಕ್ಷಿಸೋಣ ಎಂದರು.‌

ಕುಲಾಲ ಸಂಘದ ಅಧ್ಯಕ್ಷ ಪುಂಡರಿಕಾಕ್ಷ ಅವರು ಸ್ವಾತಂತ್ರ್ಯ ಹೋರಾಟಗಾರ ಅಮ್ಮೆಂಬಳ ಬಾಳಪ್ಪ ಅವರ ಬಗ್ಗೆ, ಸ್ವಾತಂತ್ರ್ಯ ಹೋರಾಟ ಹಾಗೂ ಭೂಸುದಾರಣೆಯ ಕಾಲಘಟ್ಟದಲ್ಲಿ ಸಮಾಜಕ್ಕೆ ಅವರ ಕೊಡುಗೆಗಳ ಬಗ್ಗೆ ಮಾತನಾಡಿದರು.

ಕುಂಬಾರಿಕೆ ಗುಡಿಕೈಗಾರಿಕೆ ಸಂಘದ ಸಿಇಒ ಜನಾರ್ದನ ಕುಲಾಲ್ ಅವರು ಕುಂಬಾರಿಕೆ ವೃತ್ತಿ ಮತ್ತು ಸವಾಲುಗಳು ಕುರಿತು ಮಾತನಾಡಿದರು.

ಸಿದ್ದನಗೌಡ ಪಾಟೀಲ, ಅಮ್ಮೆಂಬಳ ಬಾಳಪ್ಪ ಅವರ ಸೋದರಳಿಯ ರವೀಂದ್ರನಾಥ, ಕುಲಾಲ ಸಂಘದ ಪ್ರದಾನ ಕಾರ್ಯದರ್ಶಿ ಸದಾನಂದ‌ ಭಾಗವಹಿಸಿದ್ದರು.

ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್ ಸ್ವಾಗತಿಸಿ,‌ ಕಾರ್ಯಕ್ರಮ ನಿರೂಪಿಸಿದರು. ನಾದ ಮಣಿನಾಲ್ಕೂರು ಅವರಿಂದ ಕತ್ತಲಹಾಡು ಗಾನಾಮೃತ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT