ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೋಳಿಯಾರ್‌– ಸೌಹಾರ್ದಕ್ಕೆ ಹುಳಿ ಹಿಂಡಿದ ‘ಚೂರಿ’ ಇರಿತ

ಕರಾಳ ನೆನಪಾಗಿ ಬದಲಾದ ವಿಜಯೋತ್ಸವ ಸಂಭ್ರಮ
Published 10 ಜೂನ್ 2024, 15:29 IST
Last Updated 10 ಜೂನ್ 2024, 15:29 IST
ಅಕ್ಷರ ಗಾತ್ರ

ಮಂಗಳೂರು: ಬೋಳಿಯಾರಿನ ರಿಕ್ಷಾ ಕಟ್ಟೆಯಲ್ಲಿ ಎಂದಿನ ಕಾಡು ಹರಟೆ ಇರಲಿಲ್ಲ. ಇಲ್ಲಿನ ದಿನಸಿ ಅಂಗಡಿಗಳಲ್ಲಿ, ತರಕಾರಿ ಅಂಗಡಿಗಳಲ್ಲಿ ಖರೀದಿಗೆ ಬಂದವರ ಬಳಿಯೂ ಅಗತ್ಯಕ್ಕಿಂತ ಹೆಚ್ಚು ಮಾತಿಲ್ಲ. ಭಾನುವಾರದವರೆಗೂ ಜಾತಿ ಧರ್ಮ ಬೇಧವಿಲ್ಲದೇ ಸದಾ ಲವಲವಿಕೆಯಿಂದ ಇರುತ್ತಿದ್ದ ಈ ಊರು ಸೋಮವಾರ ‘ಮೌನ’ದಂಚಿಗೆ ಸರಿದಿತ್ತು. ನೂರಿನ್ನೂರು ಮೀಟರ್‌ಗಳಷ್ಟು ಉದ್ದಕ್ಕೆ ಚಾಚಿರುವ ಈ ಪುಟ್ಟ ಊರಿನಲ್ಲಿ ಸಶಸ್ತ್ರ ಮೀಸಲು ಪಡೆಯ ಮೂರು ವಾಹನಗಳು ಬೀಡುಬಿಟ್ಟಿವೆ. 

ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ‌ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ವಿಜಯೋತ್ಸಾಹದ ಸಂಭ್ರಮದ ಸಂದರ್ಭದಲ್ಲಿ ಯುವಕರಿಬ್ಬರಿಗೆ ಚೂರಿ ಇರಿದ ಘಟನೆ ಉಳ್ಳಾಲ ತಾಲ್ಲೂಕಿನ ಬೋಳಿಯಾರ್‌ ಗ್ರಾಮಸ್ಥರ ಪಾಲಿಗೆ ಕರಾಳ ನೆನಪಾಗಿ ಉಳಿಯಲಿದೆ. ಊರಿನಂಚಿನಲ್ಲಿರುವ ‘ಸಮಾಧಾನ್‌’ ಬಾರ್‌ ಆ್ಯಂಡ್‌ ರೆಸ್ಟೋರಂಟ್‌ನ ಶಟರ್‌ ಬಾಗಿಲಿನ ಪಕ್ಕದ ಗೋಡೆಯಲ್ಲಿ ಅಂಟಿರುವ ರಕ್ತದ ಕಲೆಗಳು ಭಾನುವಾರ ರಾತ್ರಿ ಇಲ್ಲಿ ನಡೆದ ಕಹಿ ಘಟನೆಯ ಕುರುಹಾಗಿ ಉಳಿದಿವೆ.

ಸುಮಾರು 11 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಹಿಂದೂಗಳು - ಮುಸ್ಲಿಮರು ಹೆಚ್ಚೂ ಕಡಿಮೆ ಸಮಪ್ರಮಾಣದಲ್ಲಿ ಇದ್ದಾರೆ.  ‘ಕೋಮು ಸೌಹಾರ್ದ ಕದಡುವ ಇಂತಹ ಕೃತ್ಯಗಳು ಈ ಊರಿನಲ್ಲಿ ಹಿಂದೆಂದೂ ನಡೆದಿರಲಿಲ್ಲ. ಇದು ನಡೆಯಬಾರದಿತ್ತು. ನಡೆದು ಹೋಗಿಯಾಗಿದೆ. ಕದಡಿದ ಮನಸುಗಳು ಇನ್ನು ಸರಿಯಾಗುವುದಕ್ಕೆ ಇನ್ನೆಷ್ಟು ಸಮಯಬೇಕೋ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಊರಿನ ಹಿರಿಯರು.

‘ಇಷ್ಟು ವರ್ಷ ಎಲ್ಲರೂ ಚೆನ್ನಾಗಿ ಕೂಡಿ ಬಾಳಿದ್ದೆವು. ಪಕ್ಷಗಳು ಚುನಾವಣೆಯಲ್ಲಿ ಗೆದ್ದಾಗ ವಿಜಯೋತ್ಸವಗಳು ಹಿಂದೆಯೂ ನಡೆದಿವೆ. ಆದರೆ ಯಾವತ್ತೂ ಇಂತಹ ಉನ್ಮಾದದ ಸ್ಥಿತಿ ನಿರ್ಮಾಣವಾಗಿರಲಿಲ್ಲ. ಎಂದೂ ಶಾಂತಿಭಂಗ ಉಂಟಾಗಿರಲಿಲ್ಲ’ ಎನ್ನುತ್ತಾರೆ ಬೋಳಿಯಾರ್‌ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಶಕೂರ್‌.

‘ಈ ಕೃತ್ಯಕ್ಕೆ ಕಾರಣರದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು.ಇನ್ನೆಂದೂ ಇಂತಹ ತಪ್ಪು ಮರುಕಳಿಸಲು ಅವಕಾಶ ನೀಡಬಾರದು. ಅಮಾಯಕರಿಗೆ ಕಿರುಕುಳ ನೀಡಬಾರದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚೂರಿ ಇರಿತ ನಡೆದ ಸ್ಥಳದಿಂದ 50 ಮೀ ದೂರದಲ್ಲಿ ಕ್ರೈಸ್ತರೊಬ್ಬರ ಮನೆ ಇದೆ. ಒಲ್ಲದ ಮನಸ್ಸಿನಿಂದಲೇ ಮಾತಿಗಿಳಿದ ಅವರು, ‘ಬೇರೆ ಊರುಗಳಲ್ಲಿ ಇಂತಹ ಕೃತ್ಯಗಳ ಬಗ್ಗೆ ಸುದ್ದಿಗಳಲ್ಲಿ ಓದುತ್ತಿದ್ದೆವು. ಈಗ ನಮ್ಮೂರೂ ಕೂಡಾ ಕೋಮು ಸೌಹಾರ್ದ ಕದಡಿದ ಕಾರಣಕ್ಕೆ ಸುದ್ದಿಯಾಗುತ್ತಿರುವುದು ನೋವಿನ ವಿಷಯ. ಈ ಘಟನೆಯಲ್ಲಿ ಎರಡೂ ಕಡೆಯವರ ತಪ್ಪೂ ಇದೆ. ರಾಜಕೀಯದಲ್ಲಿ ಅಧಿಕಾರ ಅನುಭವಿಸುವವರು ಯಾರೋ. ನೋವುಣ್ಣುವವರು ಯಾರೋ. ಉನ್ಮಾದಕ್ಕೆ ಒಳಗಾಗಿ ಇಂತಹ ಕೃತ್ಯಗಳಲ್ಲಿ ತೊಡಗುವ ಯುವಕರಿಗೆ ಅದರ ದುಷ್ಪರಿಣಾಮಗಳ ಪರಿವೆಯೂ ಇರುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಐಸಿಯುವಿನಲ್ಲಿ ಮಲಗಿರುವ ‘ಹರೀಶ್‌’ ಮುಸ್ಲಿಂ ಯುವಕರ ತಂಡದಿಂದ ಚೂರಿ ಇರಿತಕ್ಕೊಳಗಾದ ಇನ್ನೋಳಿ ಧರ್ಮನಗರದ ಹರೀಶ್‌ (41 ವರ್ಷ) ಹೊಟ್ಟೆ ಭಾಗಕ್ಕೆ ತೀವ್ರತರಹದ ಗಾಯವಾಗಿದ್ದು ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.  ಅವರ ದೂರದ ಸಂಬಂಧಿಯೂ ಆಗಿರುವ ನಂದಕುಮಾರ್‌ (24) ಅವರ ಬೆನ್ನಿಗೆ ಚೂರಿ ಇರಿತವಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೊಳಿಯ ಕಿಶನ್‌ ಕುಮಾರ್‌ ಕೂಡಾ ಘಟನೆ ವೇಳೆ ಹಲ್ಲೆಗೊಳಗಾಗಿದ್ದಾರೆ. ಹರೀಶ್‌ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. ಹಿರಿಯ ಮಗ ಲವೀಶ್‌ ಏಳನೇ ತರಗತಿಯಲ್ಲಿ ಎರಡನೇ ಮಗ ಲವಿತ್‌ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದು ಹಂಸಿ ಎಂಬ ನಾಲ್ಕು ವರ್ಷದ ಮಗಳಿದ್ದಾಳೆ. ‘ಹರೀಶ್‌ ಅವರಿಗೆ ಮೂವರು ಮಕ್ಕಳಿದ್ದಾರೆ. ಇನ್ನೋಳಿ ಪದವಿನಲ್ಲಿ  ‘ಲವಿಶ್‌ ಫರ್ನಿಚರ್ಸ್‌’ ಎಂಬ ಪೀಠೋಪಕರಣಗಳ ಪುಟ್ಟ ಮಳಿಗೆಯನ್ನು ನಡೆಸುತ್ತಿದ್ದ ಅವರು ಅದರಿಂದಲೇ ಬದುಕು ಕಟ್ಟಿಕೊಂಡಿದ್ದರು. ಊರಿನವರ ಸುಖ ಕಷ್ಟಕ್ಕೂ ಒದಗಿಬರುತ್ತಿದ್ದರು’ ಎನ್ನುತ್ತಾರೆ ಧರ್ಮನಗರದ ನಿವಾಸಿಗಳು. ‘ಹರೀಶ್‌ ದಶಕಗಳಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಪಕ್ಷದ ಯಾವುದೇ ಹುದ್ದೆಯಲ್ಲಿ ಇರಲಿಲ್ಲ. ಆದರೂ ಪಕ್ಷಕ್ಕಾಗಿ ಸದಾ ದುಡಿಯುತ್ತಿದ್ದ ಅವರಿಗೆ ಈ ಸ್ಥಿತಿ ಬರಬಾರದಿತ್ತು’ ಎಂದು ಬೇಸರ ವ್ಯಕ್ತಪಡಿಸು‌ತ್ತಾರೆ ಬಿಜೆಪಿಯ ಬೋಳಿಯಾರು ಗ್ರಾಮ ಸಮಿತಿ ಅಧ್ಯಕ್ಷ ಸುಭಾಷ್‌ ಧರ್ಮನಗರ.

ಸ್ವಲಾತ್‌ ಪ್ರಾಥನೆಗಾಗಿ ಸೇರಿದ್ದ ಯುವಕರು ’ಬಿಜೆಪಿಯ ವಿಜಯೋತ್ಸವ ಮೆರವಣಿಗೆ ಬೋಳಿಯಾರ್‌ನಲ್ಲಿ ಸಾಗಿ ಬರುವಾಗ ಜುಮ್ಮಾ ಮಸೀದಿಯಲ್ಲಿ ಸ್ವಲಾತ್ ಪ್ರಾರ್ಥನೆ ನಡೆಯುತ್ತಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪ್ರಚೋದನಾಕಾರಿ ಘೋಷಣೆ ಕೂಗಲಾರಂಭಿಸಿದಾಗ ಕೆಲವು ಮುಸ್ಲಿಂ ಯುವಕರು ಘರ್ಷಣೆಗೆ ಮುಂದಾಗಿದ್ದು. ಅವರನ್ನು ತಡೆದಿದ್ದೆವು. ಮೆರವಣಿಗೆ ನಿರ್ಗಮಿಸಿದ ಕೆಲ ಹೊತ್ತಿನ ಬಳಿಕ ದ್ವಿಚಕ್ರ ವಾಹನದಲ್ಲಿ ಹಿಂತಿರುಗಿ ಬಂದ ಕೆಲವು ಬಿಜೆಪಿ ಕಾರ್ಯಕರ್ತರು ಮತ್ತೆ ಘೋಷಣೆ ಕೂಗಲಾರಂಭಿದರು. ಅದು ಸ್ವಲಾತ್‌ ಪ್ರಾರ್ಥನೆ ಸಲುವಾಗಿ ಇಲ್ಲಿ ಸೇರಿದ್ದ ಯುವಕರನ್ನು ಕೆರಳಿಸಿತ್ತು. ಹೊರಗಡೆ ಏನು ನಡೆದಿದೆಯೋ ಗೊತ್ತಿಲ್ಲ’ ಎಂದು ಬೋಳಿಯಾರ್‌ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಪಿ.ಕೆ.ಅಬ್ದುಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗಾಯಾಳುವನ್ನು ಸಾಗಿಸುವಾಗ ಕೈ ಕೊಟ್ಟ ರಿಕ್ಷಾ ‘ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿ ಹರೀಶ್‌ ಅವರನ್ನು ರಿಕ್ಷಾದಲ್ಲಿ ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ದಾರಿ ಮಧ್ಯೆ ರಿಕ್ಷಾದ ಎಲ್‌ಪಿಜಿ ಖಾಲಿಯಾಗಿ ಸಮಸ್ಯೆ ಎದುರಾಯಿತು. ಬಳಿಕ ಪರ್ಯಾಯ ವ್ಯವಸ್ಥೆ ಮಾಡಬೇಕಾಯಿತು’ ಎಂದು ಸುಭಾಷ್‌ ಧರ್ಮನಗರ ತಿಳಿಸಿದರು.

ರಾತ್ರಿ 9 ಗಂಟೆ ಸುಮಾರಿಗೆ ಗಲಾಟೆ ಬಾರ್‌ನ ಹೊರಗೆ ರಾತ್ರಿ 9 ಗಂಟೆ ಸುಮಾರಿಗೆ ಗಲಾಟೆ ಕೇಳಿಸಿತು. ನಾವು ಹೊರಗೆ ಬಂದು ನೋಡುವಷ್ಟರಲ್ಲಿ ಇಬ್ಬರಿಗೆ ಯಾರೋ ಚೂರಿ ಇರಿದು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಸ್ಥಳದಲ್ಲಿದ್ದ ಕೆಲವರು ಆಸ್ಪತ್ರೆಗೆ ಕರೆದೊಯ್ದರು ಎಂದು ಬಾರ್‌ನ ಸಿಬ್ಬಂದಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT