ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರಿನಿಂದ ಹೊರಟ ‘ಧರ್ಮಸ್ಥಳ ಚಲೊ’ ಯಾತ್ರೆ ಧರ್ಮಸ್ಥಳ ಕ್ಷೇತ್ರವನ್ನು ಶನಿವಾರ ತಲುಪಿತು
‘ಒಂದು ವಾರ ಶಿವ ಪಂಚಾಕ್ಷರಿ ಪಠಣ’
‘ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರಗಳಿಗೆ ಸೋಲುಂಟಾಗಲಿ. ಅಪಪ್ರಚಾರ ನಿಲ್ಲಲಿ ಕ್ಷೇತ್ರದಲ್ಲಿ ಶ್ರದ್ದೆ ಭಕ್ತಿ ಬೆಳಗಿ ಶಾಂತಿ ನೆಲಸಲಿ‘ ಎಂಬ ಸಂಕಲ್ಪದೊಂದಿಗೆ ಇದೇ 18ರಿಂದ ಒಂದು ವಾರ ರಾಜ್ಯದಾದ್ಯಂತ ಸಾಮೂಹಿಕ ಶಿವ ಪಂಚಾಕ್ಷರಿ ( ಓಂ ನಮಃ ಶಿವಾಯ) ಜಪ ಅನುಷ್ಠಾನ ಮಾಡುವಂತೆ ವಿಶ್ವ ಹಿಂದೂ ಪರಿಷದ್ ಹೇಳಿದೆ. ‘ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಇದೇ 18ರಂದು ಬೆಳಿಗ್ಗೆ 9ಕ್ಕೆ ಶಿವ ಪಂಚಾಕ್ಷರಿ ಜಪ ಅನುಷ್ಠಾನ ಪ್ರಾರಂಭಗೊಳ್ಳಲಿದೆ. ಹಿಂದೂಗಳು ತಮ್ಮ ಮನೆಗಳಲ್ಲಿ ಜಪ ಅನುಷ್ಠಾನ ಮಾಡಬೇಕು’ ಎಂದು ವಿಎಚ್‌ಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ ಪುರುಷೋತ್ತಮ ಹಾಗೂ ಕಾರ್ಯದರ್ಶಿ ರವಿ ಅಸೈಗೋಳಿ ಕೋರಿದ್ದಾರೆ.
ಶಾಸಕ ವಿಶ್ವನಾಥ್ ನೇತೃತ್ವದಲ್ಲಿ 'ಧರ್ಮಸ್ಥಳಕ್ಕೆ ಬಂದ ಯಾತ್ರೆ‘
ಕ್ಷೇತ್ರದ ಅಪಪ್ರಚಾರ ತಡೆಗೆ ಒತ್ತಾಯಿಸಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರಿನಿಂದ ಹೊರಟ 'ಧರ್ಮಸ್ಥಳ ಚಲೊ' ಯಾತ್ರೆ ಶನಿವಾರ ಸಂಜೆ ಧರ್ಮಸ್ಥಳ ತಲುಪಿತು. ಯಾತ್ರೆಯಲ್ಲಿ ಪಾಲ್ಗೊಂಡವರು ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಎಸ್.ಆರ್.ವಿಶ್ವನಾಥ್ ‘ತನಿಖೆ ವರದಿ ಬಂದ ಬಳಿಕ ಮೊದಲು ಸಾಕ್ಷಿ ದೂರುದಾರನ ವಿಚಾರಣೆ ಮಾಡಬೇಕು. ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು. ‘ದೂರುದಾರ ಮುಖ ಮುಚ್ಚಿಕೊಂಡಿರುವುದು ಏಕೆ. ಅವನ ಹೆಸರನ್ನು ಎಸ್‌ಐಟಿ ಬಹಿರಂಗ ಮಾಡುತ್ತಿಲ್ಲವೇಕೆ. ಆತ ಮತಾಂತರಗೊಂಡ ವ್ಯಕ್ತಿ. ಮೂರು ಮದುವೆಯಾಗಿದ್ದಾನೆ ಎಂಬ ಮಾಹಿತಿ ಇದೆ’ ಎಂದರು. ‘ಎಸ್‌ಡಿಪಿಐ ಹಾಗೂ ಎಡಪಂಥೀಯರ ಷಡ್ಯಂತ್ರದಿಂದ ಸರ್ಕಾರ ಎಸ್ಐಟಿಯನ್ನು ರಚಿಸಲಾಗಿದೆ. ಯೂಟ್ಯೂಬರ್‌ಗಳು ಹಾಗೂ ಬೇರೆ ಬೇರೆಯವರು ಸೇರಿ ಅಂತರರಾಷ್ಟ್ರೀಯ ಷಡ್ಯಂತ್ರ ಮಾಡಿದ್ದಾರೆ. ಹೊರದೇಶಗಳಿಂದಲೂ ಹಣ ಸಂದಾಯವಾಗಿರಬಹುದು’ ಎಂದರು