ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಕೆಯ ಹೂಳು ತೆಗೆಯಲು ತಡವಾದರೆ ಇನ್ನಷ್ಟು ಗೋಳು

ಸಮುದ್ರದಲ್ಲಿ ಇಳಿತ ಇರುವಾಗ ದಡ ಸೇರುವ ಸವಾಲು: ಬೋಟ್‌ ಹೂತುಕೊಳ್ಳುವ ಅಪಾಯ; ಪ್ರಾಣ ಕಳೆದುಕೊಳ್ಳುವ ಭೀತಿ
Last Updated 7 ನವೆಂಬರ್ 2022, 7:23 IST
ಅಕ್ಷರ ಗಾತ್ರ

ಮಂಗಳೂರು: ಪ್ರತಿ ನಿತ್ಯ ಕೋಟ್ಯಂತರ ಮೊತ್ತದ ವ್ಯವಹಾರ ನಡೆಯುವ ಮಂಗಳೂರು ಬಂದರಿನ ಮೀನುಗಾರಿಕಾ ದಕ್ಕೆಯ ಮೂರನೇ ಹಂತದ ವಿಸ್ತರಣಾ ಕಾಮಗಾರಿ ಪುನರಾರಂಭಗೊಳ್ಳಲು ಮೀನುಗಾರರು, ಅಧಿಕಾರಿಗಳು ಮತ್ತು ಮೀನು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಭಾರಿ ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ. ಈ ವಿಸ್ತರಣಾ ಯೋಜನೆ ಪೂರ್ತಿಗೊಂಡರೆ ದೋಣಿಗಳ ಸುಗಮ ಸಂಚಾರಕ್ಕೆ ಅನುಕೂಲ ಆಗಲಿದೆ ಎಂಬ ಭರವಸೆಯೇ ಈ ಕಾತರಕ್ಕೆ ಕಾರಣ.

ಆದರೆ, ಇದೆಲ್ಲದರ ನಡುವೆ ಮೀನುಗಾರರು ಮತ್ತು ಬೋಟ್ ಮಾಲೀಕರನ್ನು ಕಾಡುವ ದೊಡ್ಡ ಸಮಸ್ಯೆ ಹೂಳು. ದಕ್ಕೆಯಲ್ಲಿ ಬೋಟ್‌ಗಳು ಹೊರಡುವ ಮತ್ತು ಸಮುದ್ರದಿಂದ ವಾಪಸ್ ಬಂದು ಮೀನು ಇಳಿಸುವ ಜಾಗದಲ್ಲಿ ಕಿಲೋಮೀಟರ್‌ಗಟ್ಟಲೆ ಪ್ರದೇಶದಲ್ಲಿ ಹೂಳು ತುಂಬಿರುವುದರಿಂದ ಅತ್ಯಂತ ಜಾಗ್ರತೆಯಿಂದ ಬೋಟ್‌ಗಳನ್ನು ಚಲಾಯಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಮೀನು ಹಿಡಿಯುವವರು ಮತ್ತು ದಕ್ಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಒಂದರೆ ಕ್ಷಣ ಎಡವಿದರೂ ಪ್ರಾಣವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಸಮುದ್ರದಲ್ಲಿ ಇಳಿತ ಇರುವಾಗ ಅಂತೂ ಬೋಟ್‌ಗಳನ್ನು ದಡ ಸೇರಿಸುವುದು ಅತ್ಯಂತ ಕ್ಲಿಷ್ಟಕರ ಕೆಲಸ. ಬೋಟ್ ಹೊರಡುವಾಗ ಕೂಡ ಭಾರಿ ಸಾಹಸ ಮಾಡಬೇಕಾಗುತ್ತದೆ. ಇಳಿತದ ಸಂದರ್ಭದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಬೋಟ್‌ ಹೂಳಿನಲ್ಲಿ ಹೂತುಕೊಳ್ಳುವ ಅಪಾಯ ಇರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಮುಂಜಾಗರೂಕತೆ ವಹಿಸಬೇಕಾಗುತ್ತದೆ.

ಬಂದರು ಮತ್ತು ದಕ್ಕೆಗಳಲ್ಲಿ ಹೂಳಿನ ಸಮಸ್ಯೆ ಇಂದು ನಿನ್ನೆಯದಲ್ಲ. ಹೀಗಾಗಿ ಅದನ್ನು ಮೇಲೆತ್ತಬೇಕು ಎಂಬ ಬೇಡಿಕೆಯೂ ಹೊಸತಲ್ಲ. ಉಡುಪಿಯ ಮಲ್ಪೆ ಬಂದರಿನಲ್ಲಿ ಹೂಳಿನಿಂದಾಗಿ ಮೀನುಗಾರರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. ಪೊಲೀಸ್ ಇಲಾಖೆಯ ಅಧಿಕೃತ ಅಂಕಿ ಅಂಶಗಳ ಪ್ರಕಾರ 2017ರಿಂದ 2022ರವರೆಗೆ ಮಲ್ಪೆ ಬಂದರಿನಲ್ಲಿ 54 ಮೀನುಗಾರರು ಮೃತಪಟ್ಟಿದ್ದಾರೆ. ಬಹುತೇಕರ ಸಾವಿಗೆ ಬಂದರಿನಲ್ಲಿ ಜಮೆ ಆಗಿರುವ ಹೂಳೇ ಕಾರಣ. ಮಂಗಳೂರು ಬಂದರಿನಲ್ಲಿ ಹೂಳಿನಿಂದಾಗಿ ಸಾವು–ನೋವು ಸಂಭವಿಸಿಲ್ಲ. ಆದರೆ ಹೂಳಿನಿಂದಾಗಿ ಅಪಾಯ ತಪ್ಪಿದ್ದಲ್ಲ ಎಂಬ ಎಚ್ಚರಿಕೆಯ ಗಂಟೆ ಇಲ್ಲಿನವರಲ್ಲಿ ಸದಾ ಮೊಳಗುತ್ತಿದೆ. ಆಳಸಮುದ್ರದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗುವ ತೊಂದರೆಯಂತೆ, ದಡದಲ್ಲಿ ಹೂಳಿನಿಂದ ಆಗುವ ಸಮಸ್ಯೆಯಿಂದ ಪಾರಾಗಲು ಅವರು ಪ್ರತಿ ಕ್ಷಣವೂ ಸಜ್ಜಾಗುತ್ತಿರುತ್ತಾರೆ.

ಮಂಗಳೂರು ದಕ್ಕೆಯಲ್ಲಿ ಬೋಟುಗಳು ತಂಗುವ ತಾಣದಲ್ಲಿ ಹೂಳು ಎತ್ತಲು ₹ 3.90 ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆಯೂ ನಡೆದಿದೆ. ಆದರೆ ಎಲ್ಲ ಪ್ರಕ್ರಿಯೆಗಳು ಮುಗಿದು ಹೂಳೆತ್ತುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇಲ್ಲ. ಹೂಳೆತ್ತುವ ಕಾರ್ಯಕ್ಕೆ ಹಳೆಯ ಮಾದರಿಯ ಯಂತ್ರಗಳನ್ನು ಬಳಸದೆ ‘ಕಟಿಂಗ್‌ ಡ್ರೆಜರ್‌’ಗಳಂಥ ಹೊಸ ತಂತ್ರಜ್ಞಾನವನ್ನು ಬಳಸಬೇಕು ಎಂಬ ಬೇಡಿಕೆಯೂ ಇದೆ. ಆದರೆ ಇದ್ಯಾವುದರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲದ ಮೀನುಗಾರರು ಮತ್ತು ಕೆಲವು ಬೋಟ್‌ ಮಾಲೀಕರು ‘ಹೂಳೆತ್ತಿದರೆ ಸಾಕು, ನಾವು ನೆಮ್ಮದಿಯಿಂದ ಕೆಲಸ ಮಾಡಬಹುದು’ ಎಂದು ಹೇಳುತ್ತಾರೆ.

ಬದುಕು ನೀರಮೇಲಿನ ಗುಳ್ಳೆ...

‘ನಮ್ಮ ಬದುಕು ನೀರ ಮೇಲಿನ ಗುಳ್ಳೆಯಂತೆ. ಯಾವಾಗ ಒಡೆಯುತ್ತದೆ ಎಂದು ಹೇಳಲಾಗದು. ಆಳ ಸಮುದ್ರದಲ್ಲಿ ಅವಘಡ ಆಗಿ ಸಾವು–ನೋವು ಸಂಭವಿಸುವುದುಂಟು. ನಾಡದೋಣಿಯಲ್ಲಿ ದೂರ ಹೋದಾಗ ಪ್ರಕೃತಿ ವಿಕೋಪಕ್ಕೆ ಬಲಿಯಾಗುವುದೂ ಸಾಮಾನ್ಯ. ಆದರೆ ಕೆಲಸ ಶುರು ಮಾಡುವ ಅಥವಾ ವಾಪಸ್ ಬಂದು ದಡ ಸೇರುವ ದಕ್ಕೆಯಲ್ಲೇ ಪ್ರಾಣಕ್ಕೆ ಕುತ್ತು ಉಂಟಾಗುವ ಆತಂಕ ಇರುವುದು ಅತ್ಯಂತ ದುರದೃಷ್ಟಕರ. ಆದಷ್ಟು ಬೇಗ ಹೂಳೆತ್ತುವುದರ ಮೂಲಕ ಈ ಆತಂಕವನ್ನು ದೂರ ಮಾಡಬೇಕು ಎಂಬುದು ನಮ್ಮೆಲ್ಲರ ಬಯಕೆ’ ಎಂದು ಹೇಳುವ ತಮಿಳುನಾಡಿನ ಫಯಾಜ್ ಅವರ ಮಾತಿನಲ್ಲಿ ಎಲ್ಲರ ಕುರಿತ ಕಾಳಜಿ ಎದ್ದು ಕಾಣುತ್ತಿತ್ತು.

‌ಅಳಿವೆ ಬಾಗಿಲು ಮತ್ತು ದಕ್ಕೆಯಲ್ಲಿ ಆಯ ತಪ್ಪಿ ಕೆಳಗೆ ಬಿದ್ದರೆ ಉಳಿಸಲು ರಕ್ಷಣಾ ಸಿಬ್ಬಂದಿ ಇದ್ದಾರೆ. ಬಹುತೇಕ ಮೀನುಗಾರರೆಲ್ಲರೂ ನುರಿತ ಈಜುಗಾರರೂ ಆಗಿರುತ್ತಾರೆ. ಆದರೆ ಹೂಳಿನಿಂದಾಗಿ ಆಳದಲ್ಲಿ ಹೂತು ಹೋದರೆ ಎಂಥವರಿಗೂ ಎದ್ದು ಬರಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಬೋಟ್‌ಗಳ ತಳಭಾಗ ಹೂಳಿನಿಂದ ಹೂತು ಹೋದರೆ ಸುಧಾರಿಸಿಕೊಂಡು ಮುಂದೆ ಸಾಗುವುದು ಕೂಡ ಸುಲಭದ ಮಾತಲ್ಲ. ಈ ಹಿನ್ನೆಲೆಯಲ್ಲಿ ಹೂಳನ್ನು ಅತ್ಯಂತ ಅಪಾಯಕಾರಿ ಎಂದೇ ಪರಿಗಣಿಸಲಾಗುತ್ತದೆ.

ಜೆಟ್ಟಿಗಳಲ್ಲಿ ಜನರನ್ನು ದಾಟಿಸಲು ಬಳಸುವ ಬೋಟ್‌ಗಳಿಂದ ಯಾರೂ ಕೆಳಗೆ ಬೀಳದಂತೆ ಬದಿಯಲ್ಲಿ ರಕ್ಷಣಾ ವ್ಯವಸ್ಥೆ ಇರುತ್ತದೆ. ಬಲೆ ಬೀಸಲು ಮತ್ತು ಬಲೆಯನ್ನು ವಾಪಸ್ ಎಳೆಯಲು ಅನುಕೂಲ ಆಗುಂತೆ ಮೀನುಗಾರಿಕೆ ಬೋಟ್‌ಗಳ ಬದಿಗಳು ತೆರೆದಿರುತ್ತವೆ. ಆದ್ದರಿಂದ ಆಯತಪ್ಪಿ ಬೀಳುವ ಸಾಧ್ಯತೆಗಳು ಹೆಚ್ಚು. ದಕ್ಕೆಯಲ್ಲಿ ಒಂದು ಬೋಟಿನಿಂದ ಇನ್ನೊಂದು ಬೋಟ್‌ಗೆ ದಾಟುವ ಸಂದರ್ಭದಲ್ಲೂ ನೀರಿಗೆ ಬೀಳುವ ಸಾಧ್ಯತೆಗಳು ಇರುತ್ತವೆ. ಈ ವೇಳೆ ಹೂಳಿನಲ್ಲಿ ಸಿಲುಕಿದರೆ ಪ್ರಾಣ ಕಳೆದುಕೊಂಡಂತೆಯೇ. ಇದನ್ನು ತಪ್ಪಿಸುವುದಕ್ಕಾಗಿ ಹೂಳೆತ್ತುವುದೊಂದೇ ದಾರಿ ಎಂಬುದು ಎಲ್ಲರ ಅಭಿಲಾಷೆ.

ಕಾರವಾರ, ಮಲ್ಪೆ ಬಂದರು ಆಶ್ರಯ

ಹೂಳಿನಿಂದಾಗಿ ತುಂಬ ತೊಂದರೆಯಾಗುತ್ತಿದೆ. ವಿಶೇಷವಾಗಿ, ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಬೋಟ್‌ಗಳು ದಡ ಸೇರಲು ಆತಂಕ ಉಂಟಾಗುತ್ತದೆ. ಹೀಗಿರುವಾಗ ಕಾರವಾರ ಅಥವಾ ಮಲ್ಪೆ ಬಂದರನ್ನು ಆಶ್ರಯಿಸಬೇಕಾಗುತ್ತದೆ. ಅಲ್ಲಿ ಮೀನು ಇಳಿಸಲು ಅವಕಾಶ ಸಿಗುವುದಿಲ್ಲ. ಆದ್ದರಿಂದ ಪರಿಸ್ಥಿತಿ ತಿಳಿಯಾಗುವವರೆಗೂ ಅಲ್ಲೇ ಇರಬೇಕಾಗುತ್ತದೆ. ನಂತರ ಮಂಗಳೂರಿಗೆ ಬರಬೇಕಾಗುತ್ತದೆ. ಇದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ನನಗೆ ನೆನಪಿರುವ ಪ್ರಕಾರ 10 ವರ್ಷಗಳ ಹಿಂದೆ ಹೂಳೆತ್ತಲಾಗಿದೆ. ಈಗ ತುರ್ತಾಗಿ ಮತ್ತೆ ಹೂಳು ತೆಗೆಯಬೇಕಾಗಿದೆ ಎಂಬುದು ಟ್ರಾಲ್ ಬೋಟ್ ಮೀನುಗಾರರ ಸಂಘದ ಕಾರ್ಯದರ್ಶಿ ರಾಜೇಶ್‌ ಪುತ್ರನ್ ಅಭಿಪ್ರಾಯ.

ಹೂಳಿದೆ; ಅಪಾಯ ಕಡಿಮೆ

ಮಂಗಳೂರು ದಕ್ಕೆಗೂ ಇತರ ಕಡೆಗಳ ದಕ್ಕೆಗೂ ವ್ಯತ್ಯಾಸವಿದೆ. ಇಲ್ಲಿ ಬೋಟ್ ಹೊರಡುವುದಕ್ಕೂ ವಾಪಸ್ ಬರುವುದಕ್ಕೂ ಸರಿಯಾದ ಹಾದಿಯೊಂದು ಇದೆ. ಆದ್ದರಿಂದ ಸಾಮಾನ್ಯವಾಗಿ ಅಪಾಯವಾಗುವುದು ಕಡಿಮೆ. ಆದರೆ ಹೂಳು ಇರುವುದಂತೂ ನಿಜ. ಆದ್ದರಿಂದ ಅಜಾಕರೂಕತೆಯಿಂದ ಅಥವಾ ಆಯತಪ್ಪಿ ಬಿದ್ದರೆ ಪ್ರಾಣಕ್ಕೆ ಕುತ್ತಾಗುವುದು ಖಚಿತ. ಆದ್ದರಿಂದ ಹೂಳೆತ್ತುವ ಕಾರ್ಯ ಆದಷ್ಟು ಬೇಗ ಆಗಬೇಕು ಎನ್ನುತ್ತಾರೆ, ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್.

ಮಂಗಳೂರು ದಕ್ಕೆಯ ವಿಸ್ತಾರ

223 ಮೀಟರ್‌

ಮೊದಲ ಹಂತ

71 ಮೀಟರ್‌

ಎರಡನೇ ಹಂತ

450 ಮೀಟರ್‌

ಮೂರನೇ ಹಂತ (ಹೊಯಿಗೆ ಬಜಾರ್‌)

360 ಮೀಟರ್

ಮೂರನೇ ಹಂತ (ಬೆಂಗ್ರೆ)

300 ಮೀಟರ್‌

ಹಳೆಯ ಸರಕು ಕಟ್ಟೆ

35,875

ಜಿಲ್ಲೆಯ ಕರಾವಳಿಯಲ್ಲಿ ಕೆಲಸ ಮಾಡುತ್ತಿರುವ ಮೀನುಗಾರರು

1399

ಜಿಲ್ಲೆಯ ನೊಂದಾಯಿತ ಯಾಂತ್ರೀಕೃತ ಬೋಟ್‌ಗಳ ಸಂಖ್ಯೆ

1531

ಮೋಟರ್ ಅಳವಡಿಸಿದ ಬೋಟ್‌ಗಳ ಸಂಖ್ಯೆ

218

ಸಾಂಪ್ರದಾಯಿಕ ಮಾದರಿಯ ಬೋಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT