ಮಂಗಳೂರು: ಕಾಡಾನೆಗಳು ನಾಡಿಗೆ ನುಗ್ಗುವ, ಬೆಳೆ ಹಾನಿ ಮಾಡುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆಯಾದರೂ, ಕಾಡಾನೆಗಳ ಹಾವಳಿ ಒಂದು ಪ್ರದೇಶದಿಂದ ಇನ್ನೊಂದೆಡೆಗೆ ಸ್ಥಳಾಂತರಗೊಳ್ಳುತ್ತಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ಈ ವರ್ಷ ನಾಲ್ಕು ತಿಂಗಳುಗಳಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಏಪ್ರಿಲ್ 29ರಿಂದ ಪುತ್ತೂರು ತಾಲ್ಲೂಕಿನ ಕಣಿಯಾರುಮಲೆ ರಕ್ಷಿತಾರಣ್ಯದ ಅಂಚಿನಲ್ಲಿರುವ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದ ಮಹಿಳೆ ಆನೆ ದಾಳಿಯಿಂದ ಮೃತಪಟ್ಟಿದ್ದರು. ಮೂರು ದಿನಗಳ ಹಿಂದೆ (ಜುಲೈ 17) ಬೆಳ್ತಂಗಡಿ ತಾಲ್ಲೂಕಿನ ಸೌತಡ್ಕ ಗುಂಡಿಯಲ್ಲಿ ವ್ಯಕ್ತಿಯೊಬ್ಬರು ಕಾಡಾನೆ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.

‘2022–23ರಲ್ಲಿ ಆನೆ ದಾಳಿಯಿಂದ ನಾಲ್ವರು ಜೀವ ಕಳೆದುಕೊಂಡಿದ್ದರು. ಎರಡು ವರ್ಷಗಳಿಂದ ಯಾವುದೇ ಪ್ರಕರಣ ಇರಲಿಲ್ಲ, ಈ ವರ್ಷ ಎರಡು ಘಟನೆಗಳು ಸಂಭವಿಸಿವೆ. ಆನೆ ಬಂದಾಗ ಜನರ ನಡವಳಿಕೆ ಹೇಗಿರಬೇಕೆಂಬ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜನರಲ್ಲಿ ಸಾಕಷ್ಟು ಅರಿವು ಮೂಡಿದ ಪರಿಣಾಮ, ಜನರ ಮೇಲೆ ಆನೆಗಳು ಆಕ್ರಮಣ ನಡೆಸುವ ಪ್ರಕರಣಗಳು ಇಳಿಮುಖವಾಗಿವೆ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ.

ಅಕ್ರಮ ಬೇಟೆ ತಡೆ ಶಿಬಿರ, ಆನೆ ನಿಗ್ರಹ ಪಡೆ ಮತ್ತು ಆನೆ ಪತ್ತೆ ತಂಡ (ಎಲಿಫಂಟ್ ಟ್ರ್ಯಾಕರ್ಸ್) ಹೀಗೆ ಮೂರು ಮಾದರಿಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಕ್ರಮ ಬೇಟೆ ತಡೆ ತಂಡದವರಿಗೆ ಕಾಡಿನಲ್ಲೇ ವಸತಿ, ಅಲ್ಲಿಯೇ ಆಹಾರ ಸಾಮಗ್ರಿಗಳು ಪೂರೈಕೆಯಾಗುತ್ತವೆ. ಅವರು ನಿರ್ದಿಷ್ಟ ವ್ಯಾಪ್ತಿಯಲ್ಲಿ ಆನೆಗಳು ವಸತಿ ಪ್ರದೇಶಕ್ಕೆ ನುಗ್ಗಿದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುತ್ತಾರೆ. ನಿರ್ದಿಷ್ಟ ಅರಣ್ಯ ವ್ಯಾಪ್ತಿಯಲ್ಲಿ ಮೊಬೈಲ್ ವಾಹನದಲ್ಲಿ ಸಂಚರಿಸಿ ನಿಗಾ ವಹಿಸುವುದು ಆನೆ ನಿಗ್ರಹ ಪಡೆಯವರ ಹೊಣೆ. ಆನೆಗಳು ಬಂದಿರುವ ಸುಳಿವು ದೊರೆತರೆ ಅವರು ಮುನ್ನೆಚ್ಚರಿಕೆ ಕ್ರಮವಹಿಸಿ, ಅವುಗಳನ್ನು ಪುನಃ ಕಾಡಿಗೆ ಓಡಿಸುವ ಕಾರ್ಯಕ್ಕೆ ಅಣಿಯಾಗುತ್ತಾರೆ ಎನ್ನುತ್ತಾರೆ ಅವರು.

ಆನೆಗಳನ್ನು ಸೆರೆ ಹಿಡಿಯುವ ಸಂದರ್ಭ ಬಂದಾಗ, ಆನೆಗಳ ಚಲನವಲನ ಗಮನಿಸಲು ಆನೆ ಪತ್ತೆ ತಂಡವನ್ನು ದುಬಾರೆ ಕ್ಯಾಂಪ್ನಿಂದ ಕರೆಯಿಸಿಕೊಳ್ಳಲಾಗುತ್ತದೆ. ಆನೆಗಳ ಹಾವಳಿ ಹೆಚ್ಚಿರುವ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲ್ಲೂಕುಗಳಲ್ಲಿ ತಂಡಗಳು ಕಾರ್ಯಾಚರಿಸುತ್ತವೆ. ಪ್ರತಿ ಅಕ್ರಮ ಬೇಟೆ ತಡೆ ಶಿಬಿರದಲ್ಲಿ ನಾಲ್ಕು ಜನರು ಇರುತ್ತಾರೆ. ಇಂತಹ ಏಳು ಶಿಬಿರಗಳು ಜಿಲ್ಲೆಯಲ್ಲಿವೆ. ತಲಾ ನಾಲ್ವರು ಇರುವ ಎರಡು ಆನೆ ನಿಗ್ರಹ ಪಡೆಗಳು ಇವೆ. ಈ ತಂಡಗಳಿಗೆ ಹೊರಗುತ್ತಿಗೆ ನೌಕರರಾಗಿ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಲಾಗುತ್ತದೆ. ಇದರಿಂದ ಸ್ಥಳೀಯ ಜನರ ಜೊತೆ ಸಂವಹನ ಸಾಧಿಸಲು ಅನುಕೂಲವಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ, ಇವೆರಡು ತಂಡಗಳಿಂದ ಒಟ್ಟು 36 ಮಂದಿ ಆನೆ ಹಾವಳಿ ತಡೆ ಕಾರ್ಯಾಚರಣೆಯಲ್ಲಿ ಸಕ್ರಿಯರಾಗಿದ್ದಾರೆ. ಆನೆಗಳನ್ನು ನೋಡಿದಾಗ ಜನರು ವಿಚಲಿತರಾಗುವುದರಿಂದ ಬಹಳಷ್ಟು ಸಂದರ್ಭಗಳಲ್ಲಿ ಅವಘಡಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಯಾವ ರೀತಿ ನಡವಳಿಕೆ ಇರಬೇಕು ಎಂದು ಈ ತಂಡಗಳು ಜಾಗೃತಿ ಮೂಡಿಸುತ್ತವೆ. ಅಲ್ಲದೆ, ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸುತ್ತವೆ. ಹೀಗಾಗಿ, ಕಾಡಾನೆಗಳ ದಾಳಿಯಿಂದ ಮನುಷ್ಯನಿಗೆ ಆಗುವ ಅಪಾಯದ ಪ್ರಮಾಣ ತಗ್ಗಿದೆ. ಬೆಳೆ ಹಾನಿ ಅಲ್ಲಲ್ಲಿ ಸಂಭವಿಸುತ್ತಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುನ್ನೆಲೆಗೆ ಬಂದ ಆನೆ ಶಿಬಿರ

ಜಿಲ್ಲೆಯಲ್ಲಿ ಕಾಡಾನೆ ದಾಳಿ ಪ್ರಕರಣ ಹೆಚ್ಚುತ್ತಿರುವುದರಿಂದ ಸ್ಥಳೀಯವಾಗಿ ಆನೆ ಶಿಬಿರ ಸ್ಥಾಪಿಸಬೇಕೆಂಬ ಪ್ರಸ್ತಾವ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಸ್ತುತ ಆನೆಗಳನ್ನು ಸೆರೆ ಹಿಡಿಯುವ ಸಂದರ್ಭ ಬಂದಾಗ ದುಬಾರೆ, ಹುಣಸೂರು ಅಥವಾ ನಾಗರಹೊಳೆ ಆನೆ ಶಿಬಿರದ ಆನೆಗಳನ್ನು ಅವಲಂಬಿಸಬೇಕಾಗಿದೆ. ಅಲ್ಲಿ ಸಂಪರ್ಕ ಸಾಧಿಸಿ, ಅಗತ್ಯ ಸಿದ್ಧತೆ ಮಾಡಿಕೊಂಡು ಇಲ್ಲಿಗೆ ತಂಡ ಬರುವವರೆಗೆ ಕನಿಷ್ಠ ಒಂದು ದಿನ ಬೇಕಾಗುತ್ತದೆ. ಇಲ್ಲಿಯೇ ಸಾಕಾನೆಗಳನ್ನು ಪಳಗಿಸಿದರೆ, ವಿಳಂಬವಿಲ್ಲದೆ ಕಾರ್ಯಾಚರಣೆ ನಡೆಸಬಹುದು ಎಂಬ ಚರ್ಚೆ ನಡೆಯುತ್ತಿದೆ.

ಉಜಿರೆ ಸಮೀಪ ಗುಂಡದಲ್ಲಿ ಜಾಗವೂ ಲಭ್ಯವಿರುವ ಬಗ್ಗೆ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಶಿಬಿರಕ್ಕೆ ಸ್ಥಾಪನೆಗೆ ಪೂರಕವಾಗಿ ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಲಾರ್ ಬೇಲಿಗೆ ಸಹಾಯಧನ

ಆನೆ ಹಾವಳಿ ತಡೆಗೆ ಸುಮಾರು 11 ಕಿ.ಮೀ ವ್ಯಾಪ್ತಿಯಲ್ಲಿ ನೇತಾಡುವ ಸೋಲಾರ್ ಬೇಲಿ ಅಳವಡಿಸಲಾಗಿದೆ. ಈ ಭಾಗಕ್ಕೆ ಆನೆಗಳು ಬರುವುದು ಬಹುತೇಕ ಸ್ಥಗಿತಗೊಂಡಿದ್ದು, ಬೇರೆಡೆ ದಾಳಿ ಮಾಡುತ್ತಿವೆ. ನೇತಾಡುವ ಸೋಲಾರ್ ಬೇಲಿ ವಿಸ್ತರಣೆಗೆ ಪ್ರಸ್ತಾವ ಸಿದ್ಧಪಡಿಸಲಾಗಿದೆ. 2016ರಿಂದ ಆನೆ ಕಂದಕ ನಿರ್ಮಿಸುತ್ತಿದ್ದು, ಕಳೆದ ಐದು ವರ್ಷಗಳಲ್ಲಿ 17 ಕಿ.ಮೀ ಆನೆ ಕಂದಕ ನಿರ್ಮಿಸಲಾಗಿದೆ. ಸಾಕಷ್ಟು ನಿಯಂತ್ರಣ ಕ್ರಮಗಳನ್ನು ವಹಿಸಲಾಗಿದೆ ಎನ್ನುತ್ತಾರೆ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್.

ಸುಳ್ಯ ಉಪವಿಭಾಗ ವ್ಯಾಪ್ತಿಯಲ್ಲಿ 60 ಸಾವಿರ ಹೆಕ್ಟೇರ್ ದಟ್ಟ ಅರಣ್ಯ ಇದ್ದು, ಹೆಚ್ಚಿನ ಕೃಷಿಕರ ಜಮೀನು ಮೀಸಲು ಅರಣ್ಯಕ್ಕೆ ಹೊಂದಿಕೊಂಡೇ ಇದೆ. ಕೇರಳ, ಮಡಿಕೇರಿ ಭಾಗದಿಂದಲೂ ಆನೆಗಳು ಈ ಭಾಗಕ್ಕೆ ಬರುತ್ತವೆ. ಸ್ಥಳೀಯ ಕಾಡಿನಲ್ಲಿ ಆನೆಗಳ ನೆಲೆ ಇದೆ. ಸೋಲಾರ್ ಬೇಲಿ ನಿರ್ಮಾಣಕ್ಕೆ ರೈತರಿಗೆ ಶೇ 50ರ ಸಹಾಯಧನ ಲಭ್ಯವಿದ್ದು, ರೈತರು ಈ ಸೌಲಭ್ಯ ಬಳಸಿಕೊಳ್ಳಬೇಕು ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.