ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದುಡಿಮೆಗಾರರ ಕೈ ಹಿಡಿಯಲಿದೆ ಕೃಷಿ

ಸಾವಯವ ಕೃಷಿಕ ಬಳಗದ ಜೊತೆ ಅನುಭವ ಹಂಚಿಕೊಂಡ ಭತ್ತದ ತಳಿ ಸಂರಕ್ಷಕ ದೇವರಾಯ
Published 28 ಏಪ್ರಿಲ್ 2024, 16:19 IST
Last Updated 28 ಏಪ್ರಿಲ್ 2024, 16:19 IST
ಅಕ್ಷರ ಗಾತ್ರ

ಮಂಗಳೂರು: ಕೃಷಿಗೆ ಕಾರ್ಮಿಕರು ಸಿಗದಿರುವುದು ನಿಜವೇ? ಭತ್ತ ನಾಟಿ ಮಾಡುವುದು ಒಳ್ಳೆಯದೋ, ಬಿತ್ತುವುದು ಒಳ್ಳೆಯದೋ? ಒಂದೇ ಗದ್ದೆಯಲ್ಲಿ ನಾಲ್ಕೈದು ತಳಿಯ ಭತ್ತ ಬೆಳೆದಾಗ, ಅವುಗಳು ಪರಿಶುದ್ಧತೆಗೆ ಹಾನಿಯಾಗುವುದಿಲ್ಲವೇ? ಭತ್ತ ಬೆಳೆಯಲು ಜಾಸ್ತಿ ನೀರು ಬೇಕೇ? ಪಟ್ಟಣದಲ್ಲರುವ 10– 15 ಸೆಂಟ್ಸ್‌ ಜಾಗದಲ್ಲೂ ಭತ್ತ ಬೆಳೆಯ ಬಹುದೇ? 

ಬೆಳ್ತಂಗಡಿಯ ಕಿಲ್ಲೂರಿನ ಭತ್ತದ ತಳಿಗಳ ಸಂರಕ್ಷಕ ಬಿ.ಕೆ. ದೇವರಾವ್‌ ಅವರು ಸಭಿಕರ ಇಂತಹ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು. 

ಸಾವಯವ ಕೃಷಿಕ ಗ್ರಾಹಕ ಬಳಗ ಆಶ್ರಯದಲ್ಲಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ತಮ್ಮ ಕೃಷಿಯ ಸಮೃದ್ಧ ಅನುಭವದ ಆಧಾರದಲ್ಲಿ ಸಭಿಕರ ಸಂದೇಹಗಳನ್ನು ನಿವಾರಿಸುವ ಪ್ರಯತ್ನ ನಡೆಸಿದರು.

‘ಕೃಷಿಗೆ ಕಾರ್ಮಿಕರು ಸಿಗುವುದಿಲ್ಲ ಎಂಬುದನ್ನು ನಾನು ಒಪ್ಪಲಾರೆ. ಕೆಲ ದಶಕಗಳ ಹಿಂದೆ ಒಂದು ದಿನದ ನಾಟಿಗೆ ಎರಡು ಸೇರು ಅಕ್ಕಿ ನೀಡಲಾಗುತ್ತಿತ್ತು. ಈಗ ₹450 ಕೊಡಬೇಕು. ಚೆನ್ನಾಗಿ ನೋಡಿಕೊಂಡರೆ ಕೃಷಿಗೆ ಈಗಲೂ ಕಾರ್ಮಿಕರು ಸಿಗುತ್ತಾರೆ. ಕೃಷಿ ಕೈ ಹಿಡಿಯಲು ನಾವೇ ದುಡಿಮೆಗಾರರಾಗಬೇಕು. ಮತ್ತೊಬ್ಬರನ್ನು ದುಡಿಸುವ ಕಾಲ ಇದಲ್ಲ’ ಎಂದು ದೇವರಾವ್‌ ಅಭಿಪ್ರಾಯಪಟ್ಟರು.

‘ನಾಟಿ ಪದ್ಧತಿಯಲ್ಲಿ ಭತ್ತದ ಇಳುವರಿ ಜಾಸ್ತಿ. ಆದರೆ ಕಾರ್ಮಿಕರ ಕೊರತೆ ಇದ್ದರೆ ಭತ್ತವನ್ನು ಬಿತ್ತಿ ಬೆಳೆದರೂ ಇಳುವರಿ ಚೆನ್ನಾಗಿಯೇ ಬರುತ್ತದೆ. ಒಂದೇ ಗದ್ದೆಯಲ್ಲಿ ನಾಲ್ಕೈದು ತಳಿಯ ಭತ್ತ ಬೆಳೆದರೂ ಅವುಗಳ ತಳಿ ಪರಿಶುದ್ಧವಾಗಿಯೇ ಇರುತ್ತದೆ. ಅಷ್ಟೂ ತಳಿಗಳ ಪರಾಗಸ್ಪರ್ಶದ ಅವಧಿ ಬೇರೆ ಆಗಿರುತ್ತದೆ’ ಎಂದರು ವಿವರಿಸಿದರು.

‘ಭತ್ತ ಬೆಳೆ ಹೆಚ್ಚು ನೀರನ್ನು ಬಯಸುವುದಿಲ್ಲ. ಬಾಯಾರಿಕೆ ಆದಾಗ ನಾವು ನೀರು ಬಯಸುತ್ತೇವೆ. ಹಾಗೆಯೇ ಭತ್ತಕ್ಕೂ ಅಗತ್ಯ ಬಿದ್ದಾಗ ನೀರು ನೀಡಿದರೆ ಸಾಕು. ಪಟ್ಟಣದಲ್ಲಿ ಐದು ಹತ್ತು ಸೆಂಟ್ಸ್‌ ಜಾಗವಿರುವ ಕಡೆಯೂ ಬೆಳೆಯಬಲ್ಲ ಗುಡ್ಡಗಾಡು ಭತ್ತದ ತಳಿಗಳಿವೆ. ಇಂತಹ ಕಡೆ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ಭತ್ತ ತಳಿಗಳು ಸೂಕ್ತ’ ಎಂದರು.

‘ಹಿಂದೆಲ್ಲ ಏಣಿಲ್‌, ಸುಗ್ಗಿ, ಕೊಳಕೆ ಜೊತೆಗೆ ಪಾಂಡಿ ಎಂಬ ನಾಲ್ಕನೇ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ನಾಲ್ಕನೆ ಬೆಳೆಯಾಗಿ ಧಾನ್ಯ ಬೆಳೆದರೆ ಒಳ್ಳೆಯದು’ ಎಂದರು. 

ಸಾವಯವ ಕೃಷಿಕರ ಬಳಗದ ಅಧ್ಯಕ್ಷ ಜಿ.ಆರ್.ಪ್ರಸಾದ್,‘ನಮ್ಮ ಬಳಗವು ರೈತ ಉತ್ಪಾದಕ‌ ಸಂಸ್ಥೆಯನ್ನು ಆರಂಭಿಸುತ್ತಿದೆ. ಸಾವಯವ ಕೃಷಿಕರಿಗೆ ಆಧುನಿಕ ಶೈತ್ಯಾಗಾರ ವ್ಯವಸ್ಥೆ ಕಲ್ಪಿಸುವ ಹಾಗೂ ಇ–ಕಾಮರ್ಸ್‌ ಮಾದರಿಯಲ್ಲಿ ಗ್ರಾಹಕರ ಮನೆ ಮನೆಗೆ ಸಾವಯವ ಉತ್ಪನ್ನ ತಲುಪಿಸುವ ಉದ್ದೇಶವಿದೆ’ ಎಂದರು.

ಸ್ನೇಹಾ ಅವರು ರಚಿಸಿರುವ ಹೂವಿನ ಮತ್ತು ಅಲಂಕಾರಿಕ ಗಿಡಗಳ ಬೇಸಾಯ ಕ್ರಮ ಕೈಪಿಡಿಯನ್ನು ದೇವರಾವ್‌  ಬಿಡುಗಡೆ ಮಾಡಿದರು.

ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಟಿ–ಶರ್ಟ್‌ ಮತ್ತು ಟೋಪಿ ಬಿಡುಗಡೆ ಮಾಡಿದರು. ಬಳಗದ ವೆಬ್‌ಸೈಟನ್ನು ಶಾರದಾ ವಿದ್ಯಾಲಯಗಳ ಸಮೂಹದ ಅಧ್ಯಕ್ಷ ಎಂ.ಬಿ. ಪುರಾಣಿಕ್‌ ಲೋಕಾರ್ಪಣೆ ಮಾಡಿದರು. ಬಳಗದ ಗೌರವ ಸಲಹೆಗಾರ ಪ್ರದೀಪ ಕುಮಾರ್ ಕಲ್ಕೂರ ಅವರು ₹ 2,250 ನೀಡಿ ರೈತ ಉತ್ಪಾದನಾ ಸಂಸ್ಥೆ ‌ಸದಸ್ಯತ್ವ ಅಭಿಯಾನಕ್ಕೆ‌ ಚಾಲನೆ ನೀಡಿದರು.

ಬಳಗದ ಗೌರವಾಧ್ಯಕ್ಷ ಅಡ್ಡೂರು ಕೃಷ್ಣರಾವ್ ಸ್ವಾಗತಿಸಿದರು. ಗಿರೀಶ ಐತಾಳ ಅವರು ವೆಬ್‌ಸೈಟ್ ವಿವರ ನೀಡಿದರು. ರತ್ನಾಕರ ಕುಳಾಯಿ ಸಾವಯವ ಕೃಷಿ ತರಬೇತಿಯ ವಿವರ ನೀಡಿದರು.  

ರೈತ ಉತ್ಪಾದನಾ ಸಂಸ್ಥೆ ‌ಸದಸ್ಯತ್ವಕ್ಕೆ‌ ಚಾಲನೆ ಅಲಂಕಾರಿಕಾ‌ ಗಿಡಗಳ ಬೇಸಾಯ ಕ್ರಮ ಕೈಪಿಡಿ ಬಿಡುಗಡೆ ಬಳಗದ ವೆಬ್‌ಸೈಟ್ ಲೋಕಾರ್ಪಣೆ
‘ಯವ ಬೆಳೆಗೂ ಕ್ರಿಮಿನಾಶಕ ಬಳಸದಿರಿ’
‘ಏನನ್ನು ಬೆಳೆದರೂ ಅದಕ್ಕೆ ರಾಸಾಯನಿಕ  ಅಥವಾ ಕ್ರಿಮಿನಾಶಕ ಬಳಸಬೇಡಿ. ಇದರಿಂದ ಭೂಮಿ ತಾಯಿ ನೀಡುವ ಫಲ ಸ್ವಲ್ಪ‌ಕಡಿಮೆ ಆಗಬಹುದು. ಆದರೆ ಆ ಫಲ ಚೆನ್ನಾಗಿರುತ್ತದೆ.  ಭೂಮಿ ಯಾವತ್ತೂ ಬಂಜೆ ಅಲ್ಲ. ನಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಈ ಫಲವತ್ತಾದ ಭೂಮಿಯನ್ನು ಉಳಿಸಬೇಕು’ ಎಂದು ದೇವರಾವ್‌ ಸಲಹೆ ನೀಡಿದರು. ‘‌ಸರ್ಕಾರದಿಂದ ಧರ್ಮಾರ್ಥ ಅಕ್ಕಿ ಕೊಡುತ್ತಿದ್ದಾರೆ. ದುಡಿಯುವುದು ಯಾರಿಗೂ ಬೇಡ. ಕೂತು ತಿನ್ನುವ ಕಾಲವಿದು. ಇಂದಿನ ಕಾಲಘಟ್ಟದಲ್ಲಿ ಸಾವಯವ ಕೃಷಿಕರು ನಷ್ಟವಿಲ್ಲದೇ ಕೃಷಿ ಮುಂದುವರಿಸಬೇಕಾದರೆ ಸರ್ಕಾರದಿಂದ ಉತ್ತೇಜನ ಸಿಗಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT