ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಝಿಲ್‌, ಮಸೂದ್ ಹತ್ಯೆಗಳ ತನಿಖೆ, ಪರಿಹಾರ ವಿತರಣೆಯಲ್ಲಿ ತಾರತಮ್ಯ: ಆರೋಪ

ವಿಧಾನಸೌಧಕ್ಕೆ ಮುತ್ತಿಗೆ ಎಚ್ಚರಿಕೆ
Last Updated 16 ಸೆಪ್ಟೆಂಬರ್ 2022, 18:27 IST
ಅಕ್ಷರ ಗಾತ್ರ

ಮಂಗಳೂರು: ಕಾಟಿಪಳ್ಳದ ಮಹಮ್ಮದ್‌ ಫಾಝಿಲ್‌ ಹಾಗೂ ಬೆಳ್ಳಾರೆ ಕಳಂಜದ ಮಸೂದ್ ಹತ್ಯೆ ಪ್ರಕರಣಗಳ ತನಿಖೆ ಹಾಗೂ ಈ ಯುವಕರಿಬ್ಬರ ಕುಟುಂಬಗಳಿಗೆ ಪರಿಹಾರ ವಿತರಣೆಯಲ್ಲಿ ಸರ್ಕಾರ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಮುಸ್ಲಿಂ ಐಕ್ಯತಾ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರವೀಣ್‌ ನೆಟ್ಟಾರು, ಮಸೂದ್‌ ಹಾಗೂ ಮಹಮ್ಮದ್‌ ಫಾಝಿಲ್‌ ಹತ್ಯೆಗಳೆಲ್ಲವೂ ಖಂಡನೀಯ. ಪ್ರವೀಣ್‌ ಹತ್ಯೆ ತನಿಖೆಯನ್ನಷ್ಟೇ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಲಾಯಿತು. ಉಳಿದಿಬ್ಬರ ಹತ್ಯೆಗಳ ತನಿಖೆಯನ್ನು ಸ್ಥಳೀಯ ಪೊಲೀಸರಿಗೇ ವಹಿಸಲಾಗಿದೆ. ಈ ಹತ್ಯೆಗಳ ಹಿಂದಿನ ಷಡ್ಯಂತ್ರ ‌ಬಯಲಾಗುವುದು ಬೇಡವೇ’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

‘ಪ್ರವೀಣ್‌ ಮನೆಗೆ ತೆರಳಿ ಸಾಂತ್ವನ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದಿಂದ ₹ 25 ಲಕ್ಷ ಪರಿಹಾರವನ್ನೂ ವಿತರಿಸಿದ್ದಾರೆ. ಅಲ್ಲಿಂದ ಕೆಲವೇ ಕಿ.ಮೀ. ದೂರದ ಮಸೂದ್‌ ಮನೆಗೆ ಭೇಟಿ ನೀಡಲಿಲ್ಲ. ಸಿ.ಎಂ ಮಂಗಳೂರಿನಲ್ಲಿದ್ದಾಗಲೇ ಫಾಝಿಲ್‌ ಹತ್ಯೆ ನಡೆದಿದ್ದರೂ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಲಿಲ್ಲ. ಮಸೂದ್‌ ಹಾಗೂ ಫಾಝಿಲ್‌ ಕೂಡ ದೇಶದ ಪ್ರಜೆಗಳೇ. ಆದರೂ ಅವರ ಕುಟುಂಬಗಳಿಗೂ ಬಿಡಿಗಾಸಿನ ಪರಿಹಾರ ನೀಡಿಲ್ಲ. ಬೆಂಕಿ ಬಿದ್ದಾಗ ಚಳಿ ಕಾಯಿಸುವ ಕೆಲಸವನ್ನು ಸರ್ಕಾರ ಮಾಡಿದೆ’ ಎಂದು ಆರೋಪಿಸಿದರು.

ಫಾಝಿಲ್‌ ತಂದೆ ಉಮರ್‌ ಫಾರೂಕ್‌, ‘ತನಿಖೆಯಲ್ಲಿ ಸಿಸಿಟಿವಿಯಲ್ಲಿ ಮುಖ ದಾಖಲಾದವರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೆ ಕಾರು ನೀಡಿದ್ದವರು, ಷಡ್ಯಂತ್ರ ರೂಪಿಸಿದವರನ್ನು ಇನ್ನೂ ಬಂಧಿಸಿಲ್ಲ. ನ್ಯಾಯ ಸಿಗುವ ವಿಶ್ವಾಸ ಉಳಿದಿಲ್ಲ‘ ಎಂದು ಕಣ್ಣೀರಿಟ್ಟರು.

‘ಫಾಝಿಲ್‌ ಹಾಗೂ ಮಸೂದ್‌ ಕುಟುಂಬಗಳಿಗೂ ನ್ಯಾಯ ಒದಗಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ವೇದಿಕೆಯ ಅಧ್ಯಕ್ಷ ಕೆ.ಅಶ್ರಫ್‌ ಎಚ್ಚರಿಕೆ ನೀಡಿದರು. ‌ಮುಸ್ಲಿಂ ಸಂಘಟನೆಗಳ ಪ್ರಮುಖರು ಹಾಗೂ ಧರ್ಮಗುರುಗಳು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT