ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿವೇತನ ವಿತರಣೆ | 1,312 ವಿದ್ಯಾರ್ಥಿಗಳು: ಕೋಟಿ ಮೊತ್ತದ ನೆರವು

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ವಿದ್ಯಾರ್ಥಿವೇತನ ವಿತರಣೆ, ಸನ್ಮಾನ
Published 17 ಜೂನ್ 2024, 13:49 IST
Last Updated 17 ಜೂನ್ 2024, 13:49 IST
ಅಕ್ಷರ ಗಾತ್ರ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ನೂತನ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಸನ್ಮಾನ, 1,312 ವಿದ್ಯಾರ್ಥಿಗಳಿಗೆ ಒಟ್ಟು ₹1 ಕೋಟಿ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ನಡೆಯಿತು.

ಕೆ.ಎಂ. ಶೆಟ್ಟಿ ಮಾಲೀಕತ್ವದ ವಿ.ಕೆ. ಗ್ರೂಪ್‌ ಆಫ್ ಕಂಪನೀಸ್ ಮುಂಬೈ ಪ್ರಾಯೋಜಕತ್ವದಲ್ಲಿ ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಎಂ. ಶೆಟ್ಟಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉದ್ಯಮಿಗಳಿಗೆ ಹೆಚ್ಚು ಸಹಕಾರ ದೊರೆತರೆ, ಸ್ಥಳೀಯವಾಗಿ ಉದ್ಯಮ ಸ್ಥಾಪನೆಗೆ ಹೆಚ್ಚು ಜನರು ಮುಂದೆ ಬರುತ್ತಾರೆ ಎಂದರು.

ಸನ್ಮಾನ ಸ್ವೀಕರಿಸಿದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಕಾರ್ಯಸೂಚಿ ರೂಪಿಸಿದ್ದು, ಕ್ಷೇತ್ರವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಉಳುವವನೇ ಒಡೆಯ ಕಾನೂನು ಜಾರಿಗೊಂಡಾಗ ಅತಿ ಹೆಚ್ಚು ಭೂಮಿ ಕಳೆದುಕೊಂಡವರು ಬಂಟರು. ಸ್ವಭಾವತಃ ಸ್ವಾಭಿಮಾನಿಗಳಾಗಿರುವ ಬಂಟರು ಇದಕ್ಕಾಗಿ ಪಶ್ಚಾತ್ತಾಪ ಪಡದೆ, ಈ ಸವಾಲನ್ನು ಸಮರ್ಥವಾಗಿ ಎದುರಿಸಿದರು. ಊರು ಬಿಟ್ಟು, ಹೊರ ಊರು, ಹೊರ ರಾಜ್ಯಗಳಿಗೆ ಹೋಗಿ ಬಂಟರ ಸಾಮರ್ಥವನ್ನು ಪ್ರದರ್ಶಿಸಿದರು. ಹಲವಾರು ಬಂಟರು ಯಶಸ್ವಿ ಉದ್ಯಮಿಗಳಾಗಿದ್ದಾರೆ. ಶೌರ್ಯಕ್ಕೆ ಹೆಸರಾಗಿರುವ ಬಂಟರು ದೇಶ ರಕ್ಷಣೆ ವಿಷಯದಲ್ಲೂ ಮುಂಚೂಣಿಯಲ್ಲಿದ್ದಾರೆ’ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪಡೆದ ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಕರುಣಾಕರ ಶೆಟ್ಟಿ ಮದ್ಯಗುತ್ತು, ಲೆಫ್ಟಿನೆಂಟ್ ಸಾತ್ವಿಕ್ ರೈ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಸತೀಶ್ ಶೆಟ್ಟಿ ಮಾತನಾಡಿ, ‘ದಾನಿಗಳ ಸಹಕಾರ ಇದ್ದಾಗ ಹೆಚ್ಚು ಸಾಮಾಜಿಕ ಕಾರ್ಯ ನಡೆಸಲು ಸಾಧ್ಯವಾಗುತ್ತದೆ. ಒಕ್ಕೂಟದ ಮಹಾದಾನಿಗಳು, ನಿರ್ದೇಶಕರು ನಿರಂತರ ಸಹಕಾರ ನೀಡುತ್ತ ಬಂದಿದ್ದು, ದಾನಿಗಳ ಸಂಖ್ಯೆ ಇನ್ನೂ ಹೆಚ್ಚಬೇಕು’ ಎಂದರು.

ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ರಾಜೇಶ್ ಎನ್. ಶೆಟ್ಟಿ, ಅರವಿಂದ್ ಆನಂದ್ ಶೆಟ್ಟಿ, ಬೆಳ್ಳಾಡಿ ಅಶೋಕ್ ಎಸ್. ಶೆಟ್ಟಿ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾಶ್ಮೀರ, ಎ.ಸದಾನಂದ ಶೆಟ್ಟಿ, ಅಜಿತ್ ಕುಮಾರ್ ರೈ ಮಾಲಾಡಿ, ಪಿ.ವಿ. ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಇನ್ನಂಜೆ ಶಶಿಧರ್ ಶೆಟ್ಟಿ, ದಯಾಚರಣ್ ಶೆಟ್ಟಿ, ಶ್ರೀಧರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಆದರ್ಶ ಶೆಟ್ಟಿ, ಸುಧಾಕರ್ ಪೂಂಜ, ನಾಗೇಶ್ ಹೆಗ್ಡೆ, ಪುರುಷೋತ್ತಮ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ಇದ್ದರು.

ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್, ನಿತೇಶ್ ಶೆಟ್ಟಿ ಎಕ್ಕಾರ್, ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಜಾಗತಿಕ ಬಂಟರ‌ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಉದ್ಯಮಿ ಕೆ.ಎಂ. ಶೆಟ್ಟಿ ಉದ್ಘಾಟಿಸಿದರು - ಪ್ರಜಾವಾಣಿ ಚಿತ್ರ 
ಜಾಗತಿಕ ಬಂಟರ‌ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಉದ್ಯಮಿ ಕೆ.ಎಂ. ಶೆಟ್ಟಿ ಉದ್ಘಾಟಿಸಿದರು - ಪ್ರಜಾವಾಣಿ ಚಿತ್ರ 

‘60 ಸಾವಿರ ಜನರಿಗೆ ಉದ್ಯೋಗ’

ಗೋಲ್ಡ್‌ಫಿಂಚ್ ಸಿಟಿಯಲ್ಲಿ 16 ಸಾವಿರ ಚದರ ಅಡಿಯಲ್ಲಿ ಐಟಿ–ಬಿಟಿ ಪಾರ್ಕ್ ಮಾಡಲು ಯೋಜನೆ ರೂಪಿಸಲಾಗಿದೆ. ಇದರಿಂದ 60 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಉದ್ಯೋಗಕ್ಕಾಗಿ ಯುವಜನರು ಊರು ಬಿಟ್ಟು ಹೊರಹೋಗುವಂತಾಗಬಾರದು ಎಂದು ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಏಕಗವಾಕ್ಷಿ ಯೋಜನೆ ರೂಪಿಸಿ ಬಂಡವಾಳ ಹೂಡಿಕೆ ಮಾರ್ಗವನ್ನು ಸುಲಭಗೊಳಿಸಬೇಕು. ಬಂಡವಾಳ ತೊಡಗಿಸಿ ನಾಲ್ಕೈದು ತಿಂಗಳುಗಳಲ್ಲಿ ಯೋಜನೆ ಕಾರ್ಯಗತಗೊಳ್ಳಲು ಪೂರಕ ವಾತಾವರಣ ಸೃಷ್ಟಿಸಬೇಕು. ಇದು ಹೂಡಿಕೆದಾರರನ್ನು ಸೆಳೆಯಲು ಸಹಕಾರಿ ಎಂದು ನೂತನ ಸಂಸದರಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT