ಶನಿವಾರ, ಅಕ್ಟೋಬರ್ 23, 2021
20 °C
ಚಂಡಮಾರುತದ ಕಾಟದ ನಡುವೆಯೂ ಚೇತರಿಕೆ ಕಾಣುತ್ತಿರುವ ಉದ್ಯಮ

ಮಂಗಳೂರಲ್ಲಿ ಬಲೆ ತುಂಬ ಮೀನು: ಗ್ರಾಹಕರಿಗೆ ಜೇನು

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಹವಾಮಾನ ವೈಪರೀತ್ಯ, ಏರುತ್ತಿರುವ ಡೀಸೆಲ್ ಬೆಲೆ, ಮಾರುಕಟ್ಟೆಯಲ್ಲಿ ದರ ಏರಿಳಿತ ಹೀಗೆ ಸದಾ ಕಾಡುವ ಸಮಸ್ಯೆಗಳು, ಜತೆಗೆ ಸೇರಿಕೊಂಡಿದ್ದ ಕೋವಿಡ್‌ ಕಂಟಕದಿಂದ ಹೈರಾಣಾಗಿದ್ದ ಮತ್ಸ್ಯೋದ್ಯಮ, ಕೋವಿಡೋತ್ತರ ಕಾಲದಲ್ಲಿ ಕೊಂಚ ಚೇತೋಹಾರಿಯಾಗಿದೆ. ಕಡಲ ಕುವರರಲ್ಲಿ ಹೊಸ ಭರವಸೆ ಮೂಡಿಸಿದೆ.

ಮುಂಗಾರಿನ ಎರಡು ತಿಂಗಳ ಆಳ ಸಮುದ್ರ ಮೀನುಗಾರಿಕೆ ನಿಷೇಧ ತೆರವುಗೊಂಡು, ಆಗಸ್ಟ್ ಮೊದಲ ವಾರದಿಂದ ಯಾಂತ್ರೀಕೃತ ಬೋಟ್‌ಗಳು ಕಡಲಿಗೆ ಇಳಿದಿವೆ. ಹಂಗಾಮಿನ ಆರಂಭದಿಂದಲೇ ಉತ್ತಮ ಮೀನು ಸಿಗುತ್ತಿರುವುದರಿಂದ ಸಂತುಷ್ಟರಾಗಿದ್ದ ಮೀನುಗಾರಲ್ಲಿ ಇನ್ನಷ್ಟು ಉತ್ಸಾಹ ಮೂಡಿದೆ. ಈಗ ತುಂಬಿದ ಬೋಟ್‌ಗಳೊಂದಿಗೆ ದಕ್ಕೆಗೆ ಬರುತ್ತಿದ್ದಾರೆ. ಕೋವಿಡ್ ಕಾಲದ ತಲ್ಲಣಗಳನ್ನೆಲ್ಲ ಮರೆತು ಮೀನು ಮಾರಾಟಗಾರರು ಮತ್ತು ಗ್ರಾಹಕರು ಇಬ್ಬರೂ ಖುಷಿಯ ಪಾಲುದಾರರಾಗಿದ್ದಾರೆ.

ದುಬಾರಿ ಬೆಲೆಯ ಮೀನುಗಳು ಕೂಡ ಈಗ ಕಡಿಮೆ ದರಕ್ಕೆ ಸಿಗುತ್ತಿವೆ. ಸಿರಿವಂತರ ಅಡುಗೆ ಮನೆಯ ತವಾದಲ್ಲಿ ಕಾಣುತ್ತಿದ್ದ ಅಂಜಲ್, ಮಾಂಜಿ, ಪಾಂಫ್ರೆಟ್ ಮೀನುಗಳು ಸಾಮಾನ್ಯ ಮಧ್ಯಮ ವರ್ಗದವರ ಮನೆಯ ಊಟದ ಬಟ್ಟಲಿನಲ್ಲಿ ಇಣುಕಿವೆ. ಕೆ.ಜಿ. ಒಂದಕ್ಕೆ ₹700ರಷ್ಟು ದರ ಇರುತ್ತಿದ್ದ ಅಂಜಲ್ ಈಗ ₹300ರಿಂದ ₹400ಕ್ಕೆ ಸಿಗುತ್ತಿದೆ. ಕೆ.ಜಿ.ಗೆ ಸರಾಸರಿ ₹400 ದರ ಇರುತ್ತಿದ್ದ ಮಾಂಜಿ ಈಗ ₹ 220ರ ಆಸುಪಾಸಿನಲ್ಲಿ ಲಭ್ಯವಾಗುತ್ತಿದೆ. ಹೀಗಾಗಿ, ಬಂಗುಡೆ, ಕಲ್ಲೂರು, ಕೊಡ್ಡೈ, ರಾಣಿ, ಬೂತಾಯಿ ತಿಂದು ತೃಪ್ತರಾಗುತ್ತಿದ್ದ ಬಡವರು ಕೂಡ, ಅಂಜಲ್, ಮಾಂಜಿ ರುಚಿ ಸವಿಯುತ್ತಿದ್ದಾರೆ.

‘ಕೆಲ ಕಾಲ ನಿಷೇಧಕ್ಕೆ ಒಳಗಾಗಿದ್ದ ಬುಲ್ ಟ್ರಾಲ್ ಬೋಟ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ಈ ಮೀನುಗಳು ಸಿಕ್ಕಿವೆ. ಇವು ರಫ್ತು ಮಾಡುವ ಗುಣಮಟ್ಟದವು ಆಗಿಲ್ಲ. ಸಣ್ಣ ಗಾತ್ರದ ಮೀನುಗಳು ಕೂಡ ಇದ್ದವು. ಹೀಗಾಗಿ, ಸ್ಥಳೀಯ ಮಾರುಕಟ್ಟೆಯಲ್ಲಿ ಇವು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ದೊರೆತಿವೆ. ಮಾರಾಟಗಾರರಿಗೆ ಅಲ್ಪ ಆದಾಯ ತಗ್ಗಿದರೂ, ವಹಿವಾಟು ಹೆಚ್ಚಿರುವ ಕಾರಣ ನಷ್ಟವಾಗಿಲ್ಲ’ ಎನ್ನುತ್ತಾರೆ ಮೀನುಗಾರರು.

ಹೀಗೆಯೇ ಇದ್ದರೆ ಅನುಕೂಲ: ‘ಒಂದು ತಿಂಗಳಲ್ಲಿ ಎರಡು ಬಾರಿ ಚಂಡಮಾರುತಗಳು ಬಂದಿವೆ. ಚಂಡಮಾರುತ ಬಂದರೆ ಒಂದು ವಾರ ಕಡಲಿಗೆ ಇಳಿಯಲು ಆಗದು. ಆದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮತ್ಸ್ಯ ಉದ್ಯಮ ಆಶಾದಾಯಕವಾಗಿದೆ. ಕೋವಿಡ್ ಲಾಕ್‌ಡೌನ್ ಕಾರಣಕ್ಕೆ ಊರಿಗೆ ಹೋಗಿದ್ದ ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಕಾರ್ಮಿಕರು ಹಿಂದಿರುಗಿ
ಬಂದಿದ್ದಾರೆ. ಶೇ 90ರಷ್ಟು ಬೋಟ್‌ಗಳು ಕಡಲಿಗೆ ಇಳಿದಿವೆ. ಮೀನು ರಫ್ತು ಕೂಡ ಹಂಗಾಮಿನ ಆರಂಭದಲ್ಲಿ ಭರವಸೆ ಮೂಡಿಸಿದೆ. ಮುಂದೆಯೂ ಹೀಗೆಯೇ ಇದ್ದರೆ ಅನುಕೂಲ ಆಗಬಹುದು’
ಎನ್ನುತ್ತಾರೆ ಪರ್ಸಿನ್‌ ಬೋಟ್‌ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಮೋಹನ್‌ ಬೆಂಗ್ರೆ.

‘ಮೀನುಗಾರರಿಗೆ ಡೀಸೆಲ್ ಡೆಲಿವರಿ ಪಾಯಿಂಟ್‌ನಲ್ಲೇ ಕರರಹಿತ ಬೆಲೆಯಲ್ಲಿ ಡೀಸೆಲ್ ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಸಹಾಯಧನ ಪಡೆಯಲು ಹರಸಾಹಸ ಮಾಡಬೇಕಾಗಿದ್ದ ಮೀನುಗಾರರಿಗೆ ಈ ಆರಂಭಿಕ ನೆರವು ನಿಟ್ಟುಸಿರು ಬಿಡುವಂತೆ ಮಾಡಿದೆ. ಬೋಟ್‌ಗಳ ಅಶ್ವಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ₹ 3000ದಿಂದ ₹ 9,000ದವರೆಗೆ ಸಹಾಯಧನ ದೊರೆಯುತ್ತದೆ. ಆರು ತಿಂಗಳು ಬಾಕಿ ಇದ್ದ ಈ ಹಿಂದಿನ ಡೀಸೆಲ್ ಸಬ್ಸಿಡಿ ಹಣದಲ್ಲಿ ನಾಲ್ಕು ತಿಂಗಳುಗಳ ಹಣ ದೊರೆತು, ಸಾಲ ಮಾಡಿಕೊಂಡಿದ್ದ ಮೀನುಗಾರರಿಗೆ, ಬಾಕಿ ಕಟ್ಟಲು ಅನುಕೂಲವಾಯಿತು.
ಇನ್ನೂ ಬಾಕಿ ಇರುವ ಎರಡು ತಿಂಗಳುಗಳ ಸಬ್ಸಿಡಿ ಹಣವನ್ನು ಆದಷ್ಟು ಶೀಘ್ರ ಬಿಡುಗಡೆಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಒಂದು ಬೋಟ್ ಒಮ್ಮೆ ಆಳ ಸಮುದ್ರ ಮೀನುಗಾರಿಕೆ ತೆರಳಿದರೆ ಅಂದಾಜು 6,500 ಲೀಟರ್ ಡೀಸೆಲ್ ಬೇಕಾಗುತ್ತದೆ. ಈ ಹಿಂದೆ ಮಾರಾಟ ಕರ ಲೀಟರ್‌ ಒಂದಕ್ಕೆ ₹8 ಇದ್ದರೆ, ಈಗ ₹14ಕ್ಕೆ ಏರಿಕೆಯಾಗಿದೆ. ಸಹಾಯಧನದ ಮೊತ್ತವನ್ನು ಸರ್ಕಾರ
ನೇರವಾಗಿ ನಿಗದಿತ ಡೀಸೆಲ್ ಮಾರಾಟಗಾರರಿಗೆ ಪಾವತಿಸುತ್ತದೆ. ಸರ್ಕಾರ ಸಹಾಯಧನ ನೀಡುತ್ತಿದ್ದರೂ, ಡೀಸೆಲ್ ದರ
ಹೆಚ್ಚಳ ಆಗಿರುವ ಕಾರಣ, ಹೆಚ್ಚು ಮೀನು ಸಿಕ್ಕಿದರೂ, ಲಾಭ ಅಧಿಕ ಸಿಗುತ್ತದೆ ಎನ್ನಲಾಗದು’ ಎಂದು ಮೀನುಗಾರ ದಿನೇಶ್ ಬಂಗೇರ ಹೇಳಿದರು.

‘ಜಟ್ಟಿ ವಿಸ್ತರಣೆ ಬೇಗ ಆಗಲಿ’

10 ವರ್ಷಗಳ ಹಿಂದೆಯೇ ಪ್ರಸ್ತಾಪವಾಗಿದ್ದ 3ನೇ ಹಂತದ ಜೆಟ್ಟಿ ವಿಸ್ತರಣೆ ಇನ್ನೂ ಅನುಷ್ಠಾನಗೊಂಡಿಲ್ಲ. ಅನೇಕ ಅಡೆತಡೆಗಳನ್ನು ದಾಟಿ, ಈಗ ಈ ಪ್ರಸ್ತಾವ ಟೆಂಡರ್‌ ಹಂತದಲ್ಲಿದೆ. ಪ್ರಸ್ತುತ ಇರುವ ಜಾಗದಲ್ಲಿ 150 ಬೋಟ್ ನಿಲುಗಡೆ ಮಾತ್ರ ಸಾಧ್ಯವಾಗುತ್ತದೆ. ಹೊಸ ಜೆಟ್ಟಿ ನಿರ್ಮಾಣವಾದರೆ, ತುಂಬಾ ಅನುಕೂಲವಾಗುತ್ತದೆ. ಹೊಸ ಯೋಜನೆಯ ಅನೇಕ ಸೌಲಭ್ಯಗಳನ್ನು ಹೊಂದಿದೆ. ಆದಷ್ಟು ಬೇಗ ಇದನ್ನು ಅನುಷ್ಠಾನಗೊಳಿಸಿ, ಸರ್ಕಾರ ಮೀನುಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮೋಹನ್ ಬೆಂಗ್ರೆ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು