ಶುಕ್ರವಾರ, ನವೆಂಬರ್ 27, 2020
21 °C

ಮೀನುಗಾರರಿಗೆ ಸಿಕ್ಕ ‘ಚಿನ್ನದ ಬೇಟೆ’: ಮೊದಲೆರಡು ದಿನ ಅಂಜಲ್ ಆವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಈ ಬಾರಿ ಒಂದು ತಿಂಗಳು ತಡವಾಗಿ ಮೀನುಗಾರಿಕೆ ಆರಂಭಗೊಂಡಿದ್ದರೂ, ಮೊದಲೆರಡು ದಿನಗಳಲ್ಲಿ ಚಿನ್ನದ ಬೇಟೆಯೇ ದೊರಕಿದಂತಾಗಿದೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಹೊಂದಿದ ಅಂಜಲ್ ಮೀನು ಮೊದಲೆರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಲೆಗೆ ಬಿದ್ದಿದೆ.  

ಮಂಗಳೂರಿನ ಧಕ್ಕೆಯಿಂದ ಕಾರ್ಯಾಚರಿಸುವ 1,250 ಟ್ರಾಲ್ ಹಾಗೂ ಸುಮಾರು 300ರಷ್ಟು ಪರ್ಸೀನ್ ಹಾಗೂ ಇತರ ನಾಡದೋಣಿಗಳಿವೆ. ಈ ಪೈಕಿ ಶೇ 20ರಷ್ಟು ದೋಣಿಗಳು ಈಗಾಗಲೇ ಮೀನುಗಾರಿಕೆಗೆ ತೆರಳಿವೆ. ಈ ಪೈಕಿ ಪರ್ಸೀನ್‌ ಬೋಟ್‌ಗಳು ಆಯಾ ದಿನವೇ ಹಿಂತಿರುಗುತ್ತವೆ. ಟ್ರಾಲ್ ಬೋಟ್ ಒಂದು ವಾರದಿಂದ ಎರಡು ವಾರಗಳಷ್ಟು ಮೀನುಗಾರಿಕೆಯಲ್ಲಿ ತೊಡಗಿರುತ್ತವೆ. ಹೀಗಾಗಿ, ಮೊದಲ ಹಂತದಲ್ಲಿ ಪರ್ಸೀನ್ ಬೋಟ್‌ಗಳ ಮೀನು ಬರುತ್ತಿವೆ. ಟ್ರಾಲ್ ಬೋಟ್‌ಗಳು ಸೆ.7ರ ಬಳಿಕ ಬರುವ ನಿರೀಕ್ಷೆ ಇದೆ.

‘ಮಾರುಕಟ್ಟೆಗೆ ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಅಂಜಲ್‌ ಮೀನು ಬಂದಿತ್ತು. ದೊಡ್ಡ ದೊಡ್ಡ ಗಾತ್ರದ ಅಂಜಲ್‌ ಕೆ.ಜಿ.ಗೆ ₹400ರಿಂದ ₹600ರ ತನಕ ಬೇಡಿಕೆ ಇತ್ತು. ಇದರಿಂದಾಗಿ ಕೆ.ಜಿ.ಗೆ ₹700ರಿಂದ ₹800ರ ಆಸುಪಾಸಿನಲ್ಲಿದ್ದ ದರವು ಕುಸಿದಿದೆ. ಅಲ್ಲದೇ, ತಾಜಾ ಮೀನು ಸಿಗುತ್ತಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಹೆಚ್ಚಿನ ಮೀನು ಬರಬಹುದು’ ಎಂದು ಧಕ್ಕೆಯಲ್ಲಿನ ಮೀನು ವ್ಯಾಪಾರಿ ಶ್ರೀಧರ್ ತಿಳಿಸಿದರು. 

ಪ್ರತಿ ವರ್ಷ ಆಗಸ್ಟ್ 1ರಿಂದ ಮೀನುಗಾರಿಕಾ ಋತು ಆರಂಭಗೊಳ್ಳುತ್ತಿತ್ತು. ಆದರೆ, ಈ ಬಾರಿ ಕೋವಿಡ್–19 ಪರಿಣಾಮ ಸೆಪ್ಟೆಂಬರ್ 1ರಿಂದ ಮೀನುಗಾರಿಕೆ ಆರಂಭಗೊಂಡಿದೆ. ಅಲ್ಲದೇ, ಈ ಹಿಂದಿನ ಋತುವಿನಲ್ಲಿ 2020 ಮಾರ್ಚ್‌ 25ರ ಬಳಿಕ ಮೀನುಗಾರಿಕೆಯು ಬಹುತೇಕ ಸ್ಥಗಿತಗೊಂಡಿತ್ತು. ಹೀಗಾಗಿ, ಮೀನುಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿತ್ತು.

‘ಕಳೆದೆರಡು ದಿನಗಳಲ್ಲಿ ಸುಮಾರು 30ರಷ್ಟು ಪರ್ಸೀನ್ ಹಾಗೂ 240ರಷ್ಟು ಟ್ರಾಲ್‌ ಬೋಟ್‌ಗಳು ಮೀನುಗಾರಿಕೆಗೆ ತೆರಳಿವೆ. ಈ ಪೈಕಿ ಪರ್ಸೀನ್‌ ಬೋಟ್‌ಗಳು ಪ್ರತಿನಿತ್ಯ ಬರುತ್ತವೆ. ಟ್ರಾಲ್ ಬೋಟ್‌ಗಳು ಬರಲು ವಿಳಂಬವಿದೆ. ಉತ್ತಮ ಸಂಖ್ಯೆಯಲ್ಲಿ ಅಂಜಲ್‌ ಮೀನು ದೊರೆತಿದ್ದು, ಮೀನುಗಾರರೂ ಖುಷಿಯಾಗಿದ್ದಾರೆ. ಕೆಲವೊಂದು ಏಳೆಂಟು ಕೆ.ಜಿ.ಗೂ ಅಧಿಕವಿತ್ತು’ ಎಂದು ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು