ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಗುರುಗಳಿಗೆ ಮತ್ತೆ ಮತ್ತೆ ಅವಮಾನ: ಬಿ. ರಮಾನಾಥ ರೈ ಆರೋಪ

‘ಗುರು ಜಯಂತಿ‘ಗೆ ಬಿಜೆಪಿ ನೇತೃತ್ವದ ಸರ್ಕಾರದ ಸಿ.ಎಂ. ಗೈರಾಗುವುದು ಏಕೆ: ರಮಾನಾಥ ರೈ ಪ್ರಶ್ನೆ
Last Updated 12 ಸೆಪ್ಟೆಂಬರ್ 2022, 11:01 IST
ಅಕ್ಷರ ಗಾತ್ರ

ಮಂಗಳೂರು: ‘ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಬಿಜೆಪಿ ನೇತೃತ್ವದ ಸರ್ಕಾರ ಮತ್ತೆ ಮತ್ತೆ ಅವಮಾನ ಮಾಡುತ್ತಿದೆ. ಈ ಸಾಲಿನ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟಕ್ಕೆ ಸೀಮಿತಗೊಳಿಸಿದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ರಮಾನಾಥ ರೈ ಆರೋಪಿಸಿದರು.

‘ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಯಾವೊಬ್ಬ ಮುಖ್ಯಮಂತ್ರಿಯೂ ಸರ್ಕಾರದ ವತಿಯಿಂದ ಆಚರಿಸುವ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಅಧಿಕೃತ ಕಾರ್ಯಕ್ರಮಕ್ಕೆ ಗೈರಾಗಿದ್ದು ಏಕೆ’ ಎಂದು ಅವರು ಪ್ರಶ್ನಿಸಿದರು. ‌‌‌‌‌‌‌‌

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಸಜಿಪಮೂಡದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರ ಉದ್ಘಾಟನೆ ಆಗಮಿಸಿದ್ದರು. ಸರ್ಕಾರವೇ ನಾರಾಯಣ ಗುರು ಜಯಂತಿ ಆಚರಿಸಬೇಕು ಎಂದು ಅವರಲ್ಲಿ ನಾನು ಹಾಗೂ ಸಂಜೀವ ಪೂಜಾರಿ ಮನವಿ ಮಾಡಿದ್ದೆವು. ಅದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ನಾರಾಯಣ ಗುರು ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವಂತೆ ಆದೇಶ ಹೊರಡಿಸಿದ್ದರು. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಡೆದ ಗುರು ಜಯಂತಿಯಲ್ಲೂ ಅವರು ಭಾಗವಹಿಸಿದ್ದರು’ ಎಂದರು.

‘ದಾರ್ಶನಿಕರ ಜಯಂತಿಗಳನ್ನು ಹಿಂದಿನಿಂದಲೂ ರಾಜಧಾನಿಯಲ್ಲಿ ಬ್ಯಾಂಕ್ವೆಟ್‌ ಹಾಲ್‌ನಲ್ಲೇ ಆಚರಿಸುವುದು ಸಂಪ್ರದಾಯ. ಈ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತ ಅಧಿಕಾರಿಗಳು ಭಾಗವಹಿಸುತ್ತಾರೆ. ಆದರೆ ಈ ಬಾರಿ ಗುರು ಜಯಂತಿಯನ್ನು ಮಂಗಳೂರಿನಲ್ಲಿ ಆಚರಿಸಲಾಯಿತು. ಇಂತಹ ಮಹತ್ವದ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟಕ್ಕೆಸೀಮಿತಗೊಳಿಸಿದ್ದನ್ನು ಖಂಡಿಸುತ್ತೇವೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್ ಅವರು ಜನರ ನಡುವೆ ದಾರ್ಶನಿಕ ಜಯಂತಿ ಆಚರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ರಮಾನಾಥ ರೈ, ‘ಜನರ ನಡುವೆ ಕಾರ್ಯಕ್ರಮ ಆಚರಿಸುವುದಾದರೂ ಮುಖ್ಯಮಂತ್ರಿ ಅದರಲ್ಲಿ ಭಾಗವಹಿಸಬೇಕಿತ್ತಲ್ಲವೇ. ಅವರು ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ದರಲ್ಲವೇ’ ಎಂದು ಪ್ರಶ್ನಿಸಿದರು.

‘ನಾರಾಯಣ ಗುರುಗಳ ಸ್ತಬ್ರಚಿತ್ರವನ್ನು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶನಿಸಲು ಈಗಿನ ಕೇಂದ್ರ ಸರ್ಕಾರ ಅವಕಾಶ ನೀಡಲಿಲ್ಲ. 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ನಾರಾಯಣ ಗುರುಗಳ ಕುರಿತ ಪಠ್ಯಕ್ಕೆ ಕತ್ತರಿ ಹಾಕುವ ಮೂಲಕ ಅವರಿಗೆ ಅವಮಾನ ಮಾಡಲಾಗಿತ್ತು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ್ ಹೆಗ್ಡೆ, ಟಿ. ಕೆ. ಸುಧೀರ್, ಶಾಹುಲ್ ಹಮೀದ್, ಪ್ರತಿಭಾ ಕುಳಾಯಿ, ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ಸಲೀಂ, ಸುರೇಂದ್ರ ಕಂಬಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT