ಭಾನುವಾರ, ಜೂಲೈ 5, 2020
28 °C
ಲಾಕ್‌ಡೌನ್ ಸಮಯದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬರ ದಿನಚರಿ

ಲಾಕ್‌ಡೌನ್‌ ನಡುವೆಯೂ ಪ್ರತಿನಿತ್ಯ ಶಾಲೆ ಅಂಗಳ ಸ್ವಚ್ಛ ಮಾಡುತ್ತಿರುವ ಹಾಜಬ್ಬ

ಮೋಹನ್‌ ಕುತ್ತಾರ್‌ Updated:

ಅಕ್ಷರ ಗಾತ್ರ : | |

Prajavani

ಉಳ್ಳಾಲ: ‘ಪದ್ಮಶ್ರೀ’ ಪುರಸ್ಕೃತ ಹರೇಕಳ ಹಾಜಬ್ಬ ಲಾಕ್‌ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದಾರೆ? ಉತ್ತರ ಸರಳ; ಅವರು ಪ್ರತಿ ನಿತ್ಯ ಶಾಲೆಯ ಅಂಗಳಕ್ಕೆ ಹೋಗಿ ಅಲ್ಲಿ ಕಸ ಗುಡಿಸಿ, ಸ್ವಚ್ಛಗೊಳಿಸಿ ಬರುತ್ತಿದ್ದಾರೆ.

ಲಾಕ್‌ಡೌನ್‌ ದಿನಗಳ ಕುರಿತಂತೆ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಮಾರ್ಚ್‌ ತಿಂಗಳಲ್ಲಿ ಮನೆ ಯಲ್ಲೇ ಉಳಿದಿದ್ದ ಕಾರಣಕ್ಕೆ ನರ ಸಮಸ್ಯೆ ಕಾಡಿತು. ಯೆನೆಪೋಯ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡೆ. ತಿಂಗಳಿಗೆ ಆಗುವಷ್ಟು ಮದ್ದು ನೀಡಿ, ಶುಲ್ಕವಿಲ್ಲದೆ ಪರೀಕ್ಷೆ ನಡೆಸಿದರು’ ಎಂದರು.

‘ಲಾಕ್‍ಡೌನ್‌ನಿಂದಾಗಿ ಪುತ್ರನ ಪೇಯಿಟಿಂಗ್ ವೃತ್ತಿಗೂ ಕಂಟಕ ಎದುರಾಯಿತು. ಆದರೆ, ದೇರಳಕಟ್ಟೆ ಮತ್ತು ಮಂಗಳೂರಿನ ಉದ್ಯಮಿ ಇಬ್ಬರು ಮನೆಗೆ ಬೇಕಾದ ರೇಷನ್ ವ್ಯವಸ್ಥೆ ಕಲ್ಪಿಸಿದರು. ಮೊಬೈಲಿಗೆ ತುಮಕೂರಿನ ಶಿಕ್ಷಕ ದಂಪತಿ ರಿಚಾರ್ಚ್ ಮಾಡುತ್ತಿದ್ದಾರೆ. ಪತ್ನಿಗೆ ದುಗ್ಗಜ್ಜರಕಟ್ಟೆಯ ಆಯುರ್ವೇದ ವೈದ್ಯ ರಿಂದ ಔಷಧಿ ಮಾಡುತ್ತಿರುವೆ. ಅದಕ್ಕಾಗಿ ಕೆಲವೊಮ್ಮೆ ಹಣ ಹೊಂದಿಸಬೇಕು. ಪುತ್ರಿಯರ ವಿವಾಹ ಆದರೆ, ಭಾರ ಇಳಿದಂತಾಗುತ್ತದೆ’ ಎಂದು ಹೇಳಿದರು.

‘ಲಾಕ್‍ಡೌನ್‌ನಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡಚಣೆ ಉಂಟಾಗಿದೆ. ಇದನ್ನು ಸರ್ಕಾರ ಮನಗಂಡು ಅವರ ಶಿಕ್ಷಣಕ್ಕೆ ಮತ್ತು ಭವಿಷ್ಯಕ್ಕೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದರು.

‘ಪದ್ಮಶ್ರೀ’ ಸ್ವೀಕಾರಕ್ಕೆ ಲಾಕ್‌ಡೌನ್‌ ಅಡ್ಡಿ: ‘ಪದ್ಮಶ್ರೀ ಪುರಸ್ಕಾರ ಪಡೆಯಲು ನವದೆಹಲಿಗೆ ತೆರಳುವುದಕ್ಕೂ ಲಾಕ್‌ಡೌನ್ ಅಡ್ಡಿ ಉಂಟು ಮಾಡಿತು. ನವದೆಹಲಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ವಿಮಾನದ ಟಿಕೆಟ್ ನೀಡಲೆಂದು ಮಾರ್ಚ್‌ 24 ರಂದು ಜಿಲ್ಲಾ ಉಸ್ತುವಾರಿ ಸಚಿವರು ಕಚೇರಿಗೆ ಕರೆಸಿದ್ದರು. ನಾನು ಹಾಗೂ ನನ್ನ ಸಹೋದರನ ಪುತ್ರಹೋಗಲು ತೀರ್ಮಾನ ಮಾಡಿದ್ದೆವು. ಜತೆಗೆ ದೆಹಲಿ ಅಶೋಕಾ ಹೋಟೆಲ್‌ ನಲ್ಲಿ ವಾಸ್ತವ್ಯಕ್ಕೆ ರೂಂ ಖಾತ್ರಿ ಪಡಿಸಿರುವ ಕುರಿತು ಸಚಿವರ ಆಪ್ತ ಸಹಾಯಕರು ತಿಳಿಸಿದ್ದರು. ಅದೇ ಸಮಯದಲ್ಲಿ ಮೊಬೈಲ್‌ಗೆ ಕರೆ ಬಂತು. ಕನ್ನಡದಲ್ಲಿ ಮಾತನಾಡಿ ಕಾರ್ಯಕ್ರಮ ಮುಂದೂಡಿರುವ ಬಗ್ಗೆ ಹೇಳಿದರು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು