ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಆರೋಗ್ಯ ತೊಂದರೆ: ಬಾಲಕರೇ ಅಧಿಕ

ಶಾಲಾ ಮಕ್ಕಳಿಗೆ ನಡೆಸಿದ ಆರೋಗ್ಯ ತಪಾಸಣೆ: 2,183 ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಸಮಸ್ಯೆ
Published 26 ಜನವರಿ 2024, 7:13 IST
Last Updated 26 ಜನವರಿ 2024, 7:13 IST
ಅಕ್ಷರ ಗಾತ್ರ

ಮಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಡೆಸಿದ ಆರೋಗ್ಯ ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ರೀತಿಯ ಮಾನಸಿಕ, ದೈಹಿಕ ತೊಂದರೆ ಹೊಂದಿರುವವರಲ್ಲಿ ಬಾಲಕಿಯರಿಗಿಂತ ಬಾಲಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ಜಿಲ್ಲೆಯ ಒಟ್ಟು ಏಳು ಶೈಕ್ಷಣಿಕ ವಲಯಗಳಲ್ಲಿ ಪ್ರತಿ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಬಿಐಎಆರ್‌ಟಿಗಳು (ಬ್ಲಾಕ್ ಇನ್‌ಕ್ಲೂಸಿವ್ ಎಜುಕೇಷನ್ ರಿಸರ್ಚ್‌ ಟೀಚರ್ಸ್‌) ಭೇಟಿ ನೀಡಿ, ಸಮಸ್ಯೆ ಇರುವ ವಿದ್ಯಾರ್ಥಿಗಳ ಪಟ್ಟಿ ತಯಾರಿಸುತ್ತಾರೆ. ಅಲ್ಲದೆ ಬ್ಲಾಕ್ ಮಟ್ಟದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನೂ ನಡೆಸಲಾಗುತ್ತದೆ. ಇವುಗಳಲ್ಲಿ ಸುಮಾರು 2,183 ಮಕ್ಕಳಿಗೆ ಆಟಿಸಮ್, ದೃಷ್ಟಿ ದೋಷ, ಕಿವುಡುತನ, ಹಿಮೊಫೀಲಿಯಾ, ಮಾನಸಿಕ ಸಮಸ್ಯೆ, ತಲಸ್ಸೇಮಿಯಾ ಮತ್ತಿತರ ಸಮಸ್ಯೆಗಳು ಇರುವುದು ಗಮನಕ್ಕೆ ಬಂದಿದೆ. ಇವರಲ್ಲಿ 1,282 ಮಕ್ಕಳು ಬಾಲಕರಾಗಿದ್ದರೆ, 901 ಬಾಲಕಿಯರು ಇದ್ದಾರೆ.

‘ಪ್ರತಿ ಬ್ಲಾಕ್‌ನಲ್ಲಿ ನಾಲ್ವರು ಬಿಐಎಆರ್‌ಟಿಗಳು ಇರುತ್ತಾರೆ. ಅವರು ತಮ್ಮ ವ್ಯಾಪ್ತಿಯ ಪ್ರತಿ ಶಾಲೆಗೆ ಭೇಟಿ ನೀಡಿ ಮಗುವಿನ  ಮಾಹಿತಿ ಪಡೆಯುತ್ತಾರೆ. ಎಲ್ಲ ವಲಯಗಳಿಂದ ಮಾಹಿತಿ ಸಂಗ್ರಹಿಸಿ ಆರೋಗ್ಯ ತೊಂದರೆ ಇರುವ ಮಕ್ಕಳಿಗೆ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದ ನಂತರ ಯುಡಿಐಡಿ ಕಾರ್ಡ್‌ ನೀಡಲಾಗುತ್ತದೆ. ಈ ಮಾಹಿತಿಯನ್ನು ಇಲಾಖೆಯ ಸಿಡಬ್ಲ್ಯುಎಸ್‌ಎನ್ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಇದನ್ನು ಆಧರಿಸಿ ಸರ್ಕಾರ ವಿವಿಧ ರೀತಿಯ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.

‘ಮಕ್ಕಳಿಗೆ ಅಗತ್ಯವಿರುವ ಸಲಕರಣೆಗಳನ್ನು ಸರ್ಕಾರ ಉಚಿತವಾಗಿ ನೀಡುತ್ತದೆ. ಅಲಿಮ್ಕೊ ಕಂಪನಿ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಸರ್ಕಾರ ಅರ್ಧದಷ್ಟು ವೆಚ್ಚವನ್ನು ಭರಿಸುತ್ತದೆ. 2022–23ನೇ ಸಾಲಿನ ಸೌಲಭ್ಯ ವಿತರಿಸಲಾಗುತ್ತಿದ್ದು, ಈಗಾಗಲೇ 193 ಮಕ್ಕಳಿಗೆ ಗಾಲಿಕುರ್ಚಿ, ಕನ್ನಡಕ, ಹಿಯರಿಂಗ್ ಎಡ್ಸ್‌, ಟ್ರೈ ಸೈಕಲ್, ಎಂಎಸ್‌ಐಡಿ ಕಿಟ್ ವಿತರಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಆಟೊಲೆಕ್, ಕ್ಯಾಲಿಪರ್ಸ್, ಆಟೊ ಶೂ ಮೊದಲಾದ ಸ್ಥಳದಲ್ಲಿಯೇ ಹೊಂದಾಣಿಕೆ ಮಾಡಿಕೊಡಬೇಕಾದ ಸಲಕರಣೆಗಳ ವಿತರಣೆ ಬಾಕಿ ಇದೆ. ಜ.28ರಿಂದ 30ರವರೆಗೆ ನಡೆಯುವ ಕ್ಯಾಂಪ್‌ನಲ್ಲಿ 54 ಮಕ್ಕಳಿಗೆ ಈ ಸಾಧನಗಳನ್ನು ನೀಡಲಾಗುತ್ತದೆ’ ಎಂದು ಡಿಡಿಪಿಐ ದಯಾನಂದ ನಾಯಕ್ ತಿಳಿಸಿದರು. 

ಏನೇನು ಸಮಸ್ಯೆ:

ಇಲಾಖೆಯ ಸಮೀಕ್ಷೆಯಲ್ಲಿ 21 ಬಗೆಯ ಸಮಸ್ಯೆಯನ್ನು ಗುರುತಿಸಲಾಗುತ್ತದೆ. ಸಮೀಕ್ಷೆ ವೇಳೆ ಬೌದ್ಧಿಕ ನ್ಯೂನತೆ ಇರುವ ಮಕ್ಕಳು ಗರಿಷ್ಠ ಸಂಖ್ಯೆಯಲ್ಲಿದ್ದಾರೆ. 459 ಬಾಲಕರು ಮತ್ತು 313 ಬಾಲಕಿಯರಲ್ಲಿ ಈ ಸಮಸ್ಯೆ ಗುರುತಿಸಲಾಗಿದೆ. ಚಲನವಲನ ದೌರ್ಬಲ್ಯ ಹೊಂದಿರುವ 393 ಮಕ್ಕಳಲ್ಲಿ 234 ಬಾಲಕಿಯರು ಇದ್ದರೆ, 159 ಬಾಲಕರು ಇದ್ದಾರೆ. ಕಿವುಡುತನ, ದೃಷ್ಟಿದೋಷ ಸೇರಿದಂತೆ ಬಹುವಿಧದ ನ್ಯೂನತೆ ಇರುವ 201 ಮಕ್ಕಳು, ದೃಷ್ಟಿ ಸಮಸ್ಯೆ ಇರುವ 106 ಮಕ್ಕಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT