ಭಾನುವಾರ, ಮಾರ್ಚ್ 7, 2021
22 °C
ಸಾಮಾಜಿಕ ಮಾಧ್ಯಮದಲ್ಲಿನ ಮಾಹಿತಿಯಿಂದ ಸಕಾಲಕ್ಕೆ ಸಿಕ್ಕ ಚಿಕಿತ್ಸೆ

ಹೃದ್ರೋಗ ಸಹಾಯವಾಣಿಯಿಂದ ಉಳಿದ ಜೀವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಾಮಾಜಿಕ ಮಾಧ್ಯಮ ‘ಇನ್‌ಸ್ಟಾಗ್ರಾಂ’ನಲ್ಲಿ ಸಿಕ್ಕ ಹೃದ್ರೋಗ ಸಹಾಯವಾಣಿ ಮಾಹಿತಿಯ ನೆರವಿನಿಂದ ಸಕಾಲಕ್ಕೆ ಚಿಕಿತ್ಸೆ ಲಭ್ಯವಾದ ಕಾರಣದಿಂದ ನಗರದ ಹೃದ್ರೋಗಿಯೊಬ್ಬರ ಜೀವ ಉಳಿದಿದೆ.

ನಗರದ ನಿವಾಸಿಯಾಗಿರುವ ಲಕ್ಷ್ಮಣ ಶೆಟ್ಟಿ (ಹೆಸರು ಬದಲಿಸಲಾಗಿದೆ) ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದು, ಮೂರು ತಿಂಗಳ ಹಿಂದೆ ಆ್ಯಂಜಿಯೋಗ್ರಾಂ ಪರೀಕ್ಷೆ ಮಾಡಿಸಿಕೊಂಡಿದ್ದರು. ತಕ್ಷಣದಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ, ಆರ್ಥಿಕ ಮುಗ್ಗಟ್ಟು ಮತ್ತು ಮಗಳ ಮದುವೆಗೆ ಸಂಬಂಧಿಸಿದ ಒತ್ತಡಗಳ ಕಾರಣದಿಂದ ಚಿಕಿತ್ಸೆಯನ್ನು ವಿಳಂಬ ಮಾಡಿದ್ದರು. ಮಗಳ ಮದುವೆ ಸಿದ್ಧತೆಗೇ ಹೆಚ್ಚಿನ ಆದ್ಯತೆ ನೀಡಿದ್ದರು.

ಒಂದು ವಾರದಿಂದ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಹೃದಯದ ಬಡಿತ ಮತ್ತು ಶಬ್ಧದಲ್ಲಿ ಬದಲಾವಣೆ (ಕ್ರೆಸೆಂಡೋ) ಆಗಿತ್ತು. ಪದೇ ಪದೇ ‘ಸಾರ್ಬಿಟ್ರೇಟ್‌’ ಎಂಬ ಮಾತ್ರೆಯನ್ನು ತೆಗೆದುಕೊಳ್ಳಬೇಕಾದ ಸ್ಥಿತಿ ತಲುಪಿದ್ದರು. ಭಾನುವಾರ ರಾತ್ರಿ ಅತಿಯಾದ ಎದೆ ನೋವು ಕಾಣಿಸಿಕೊಂಡಿತ್ತು. ಇದನ್ನು ಅವರು ಮಗಳ ಬಳಿ ಹೇಳಿಕೊಂಡಿದ್ದರು.

ರಾತ್ರಿ 11.15ರ ಸುಮಾರಿಗೆ ವಿಷಯ ಮಗಳ ಗಮನಕ್ಕೆ ಬಂದಿತ್ತು. ಆ ವೇಳೆಗೆ ಅವರು ವಾಸಿಸುವ ಪ್ರದೇಶದಲ್ಲಿ ಯಾವುದೇ ವೈದ್ಯರು ಲಭ್ಯರಿರಲಿಲ್ಲ. ತಕ್ಷಣವೇ ಸಾಮಾಜಿಕ ಮಾಧ್ಯಮ ‘ಇನ್‌ಸ್ಟಾಗ್ರಾಂ’ ಮೂಲಕ ಹೃದ್ರೋಗ ಸಹಾಯವಾಣಿಗಳ ಮಾಹಿತಿಗಾಗಿ ಹುಡುಕಾಟ ನಡೆಸಿದ್ದರು. ಮಂಗಳೂರಿನ ಡಾ.ಪದ್ಮನಾಭ ಕಾಮತ್‌ ಅವರು ಆರಂಭಿಸಿರುವ 24X7 ಗಂಟೆ ನಿರಂತರ ಸೇವೆ ಒದಗಿಸುವ ‘ಕಾರ್ಡಿಯೋ ಹೆಲ್ಪ್‌ಲೈನ್‌’ ಮಾಹಿತಿ (ದೂರವಾಣಿ ಸಂಖ್ಯೆ 9743287599) ಲಕ್ಷ್ಮಣ ಶೆಟ್ಟಿ ಅವರ ಮಗಳಿಗೆ ಲಭಿಸಿತು. ಈ ಸಹಾಯವಾಣಿ ದೇಶದಾದ್ಯಂತ ಇರುವ ರೋಗಿಗಳಿಗೆ ನೆರವು ಒದಗಿಸುತ್ತಿದೆ.

ತಕ್ಷಣವೇ ವಾಟ್ಸ್‌ ಆ್ಯಪ್‌ ಸಂಖ್ಯೆಯ ಮೂಲಕ ಸಹಾಯವಾಣಿಯನ್ನು ಸಂಪರ್ಕಿಸಿದ್ದ ರೋಗಿಯ ಮಗಳು ನೆರವು ಕೋರಿದ್ದರು. ತುರ್ತಾಗಿ ಕೆಎಂಸಿ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗಕ್ಕೆ ಕರೆತರುವಂತೆ ವೈದ್ಯರು ಸಲಹೆ ನೀಡಿದ್ದರು. ಮೊದಲೇ ಮಾಹಿತಿ ಇದ್ದುದ್ದರಿಂದ ರೋಗಿ ತಲುಪುವ ಮುನ್ನವೇ ವೈದ್ಯರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಪುನಃ ಆ್ಯಂಜಿಯೋಗ್ರಾಂ ನಡೆಸಿದಾಗ ಹೃದಯದ ಮುಖ್ಯ ಕೊಳವೆಯಲ್ಲಿ ದೊಡ್ಡ ಪ್ರಮಾಣದ ತಡೆ (ಬ್ಲಾಕ್‌) ಇರುವುದು ಪತ್ತೆಯಾಯಿತು.

‘ರೋಗಿಗೆ ಯಶಸ್ವಿಯಾಗಿ ಆ್ಯಂಜಿಯೋಪ್ಲಾಸ್ಟಿ ನಡೆಸಲಾಗಿದೆ. ಹೃದಯದ ಎಡಭಾಗದ ಮುಖ್ಯ ಕೊಳವೆಗೆ ಸ್ಟೆಂಟ್‌ ಅಳವಡಿಸಲಾಗಿದೆ. ಈಗ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಿದ್ದೇವೆ. ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ತುರ್ತಾಗಿ ವೈದ್ಯಕೀಯ ಸೇವೆ ಒದಗಿಸಿ ಜನರ ಜೀವ ಉಳಿಸುವ ಗುರಿಯೊಂದಿಗೆ ಈ ಸಹಾಯವಾಣಿ ಮತ್ತು ಮೊಬೈಲ್‌ ಅಪ್ಲಿಕೇಷನ್‌ ಸಿದ್ಧಪಡಿಸಿದ್ದೇವೆ. ಸರಿಯಾದ ಸೌಲಭ್ಯಗಳಿಲ್ಲದ ಪ್ರದೇಶದ ಜನರಿಗೂ ನೆರವಾಗುವುದು ನಮ್ಮ ಉದ್ದೇಶ’ ಎಂದು ‘ಕಾರ್ಡಿಯೋ ಹೆಲ್ಪ್‌ಲೈನ್‌’ ಸಂಸ್ಥಾಪಕ ಡಾ.ಪದ್ಮನಾಭ ಕಾಮತ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು