ಗುರುವಾರ , ಅಕ್ಟೋಬರ್ 29, 2020
26 °C

ಮಂಗಳೂರು: ಮೀನುಗಾರಿಕಾ ಬೋಟ್‌ಗಳಿಗೆ ಎನ್‌ಎಂಪಿಟಿಯಲ್ಲಿ ಆಶ್ರಯ, ಮುಂದುವರಿದ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Fishing boats

ಮಂಗಳೂರು: ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಮೀನುಗಾರರ ರಕ್ಷಣೆಗಾಗಿ ಬೋಟ್‌ಗಳನ್ನು ತುರ್ತಾಗಿ ಲಂಗರು ಹಾಕುವ ವಿಚಾರದಲ್ಲಿ ಈ ಬಾರಿಯೂ ಮೀನುಗಾರರು ಮತ್ತು ನವ ಮಂಗಳೂರು ಬಂದರು ಮಂಡಳಿ (ಎನ್ಎಂಪಿಟಿ) ಮಧ್ಯೆ ಗೊಂದಲ ಏರ್ಪಟ್ಟಿದೆ.

'ಕರಾವಳಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳು ಎನ್ಎಂಪಿಟಿಯಲ್ಲಿ ಆಶ್ರಯ ಪಡೆದಿದ್ದು, ಇದೀಗ ಒತ್ತಾಯಪೂರ್ವಕವಾಗಿ ತೆರಳುವಂತೆ ಮಾಡಲಾಗುತ್ತಿದೆ ಎಂದು ಮೀನುಗಾರ ಮುಂಖಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಸುರಕ್ಷತೆಯ ದೃಷ್ಟಿಯಿಂದ ಸದ್ಯ ಎನ್ಎಂಪಿಟಿಯಲ್ಲಿಯೇ ತಂಗಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ರೆಡ್ ಅಲರ್ಟ್ ಮೊದಲೇ ಮಂಗಳೂರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳು ದೂರದ ಮಲ್ಪೆ, ಕಾರವಾರ, ಗೋವಾ ಗಡಿ ಭಾಗದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದವು. ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಸೆ.24ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಿ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಸುರಕ್ಷತೆ ದೃಷ್ಟಿಯಿಂದಲೇ ಬೋಟ್‌ಗಳು ಎನ್ಎಂಪಿಟಿಯ ಒಳಗೆ ಆಶ್ರಯ ಕೋರಿವೆ. ಆದರೆ ಇದೀಗ ದಿಢೀರ್ ಆಗಿ ಯಾವುದೇ ಕಾರಣ ನೀಡದೆಯೇ ಹೊರ ಹೋಗುವಂತೆ ಹೇಳಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಅಳಿವೆ ಬಾಗಿಲಿನಲ್ಲಿ ಸಮುದ್ರ ಬಿರುಸಾಗಿರುವುದರಿಂದ ಮೀನುಗಾರಿಕಾ ಬಂದರಿಗೆ ಮರಳುವುದು ಅಸಾಧ್ಯವಾಗಿದೆ. ಸುಮಾರು 175ಕ್ಕೂ ಮಿಕ್ಕಿ ಅಳಸಮುದ್ರ ದೋಣಿಗಳು ಆಶ್ರಯ ಪಡೆದಿದ್ದು 1500ಕ್ಕೂ ಮಿಕ್ಕಿ ಮೀನುಗಾರರು ಇದ್ದಾರೆ. ಸೆ.24ರವರೆಗೆ ರೆಡ್ ಅಲರ್ಟ್ ಘೋಷಣೆ ಇರುವುದರಿಂದ ಸುರಕ್ಷತೆ ಅಗತ್ಯವಾಗಿದ್ದು ಜೀವ ಹಾನಿ,ಲ ಕ್ಷಾಂತರ ಮೌಲ್ಯದ ಬೋಟಿಗೆ ಹಾನಿಯಾಗದಂತೆ ಇಲ್ಲೇ ಇರುವುದು ಅನಿವಾರ್ಯ ಎಂದು ಮೀನುಗಾರಿಕಾ ಮುಖಂಡ ಮೋಹನ್ ಬೆಂಗ್ರೆ  ತಿಳಿಸಿದ್ದಾರೆ.

ಈಗಾಗಲೇ ಎರಡು ಟ್ರಾಲ್ ಬೋಟ್ ಕಾರವಾರ ಬಳಿ ತೊಂದರೆಗೆ ಈಡಾಗಿದ್ದು, ಮರಳಿನಲ್ಲಿ ಸಿಲುಕಿಕೊಂಡಿವೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಎನ್ಎಂಪಿಟಿ ಒತ್ತಡ ಹೇರಬಾರದು ಎಂದು ಮೀನುಗಾರ ಮುಖಂಡ ರಾಜರತ್ನ ಸನಿಲ್ ಮನವಿ ಮಾಡಿದ್ದಾರೆ.

ಆಶ್ರಯ ನೀಡಲಾಗಿದೆ ಎಂದ ಎನ್ಎಂಪಿಟಿ

ಹವಾಮಾನ ವೈಪರೀತ್ಯದಿಂದ ತೊಂದರೆಗೆ ಒಳಗಾದ ಮೀನುಗಾರಿಕಾ ಟ್ರಾಲ್ ಬೋಟ್‌ಗಳಿಗೆ ಈಗಾಗಲೇ ಎನ್ಎಂಪಿಟಿ ಬಂದರಿನಲ್ಲಿ ಆಶ್ರಯ ನೀಡಲಾಗಿದೆ. ಆದರೆ, ಎನ್ಎಂಪಿಟಿಯು ಭಾರತ ಸರ್ಕಾರ ಅನುಮೋದಿಸಿದ ISPS (ಅಂತರರಾಷ್ಟ್ರೀಯ ಹಡಗು ಮತ್ತು ಬಂದರು ಸುರಕ್ಷತಾ ನಿಯಮಾವಳಿ) ಗೆ ಒಳಪಟ್ಟಿದ್ದು, ಸೂಕ್ತ ದಾಖಲೆ ಹಾಗೂ ಭದ್ರತಾ ಮಾಹಿತಿಗಳಿಲ್ಲದ ಯಾವುದೇ ಟ್ರಾಲ್ ಅಥವಾ ಇತರ ಬೋಟ್, ಹಡಗುಗಳನ್ನು ಒಳ ಬಿಡುವಂತಿಲ್ಲ. ಈ ನಿಟ್ಟಿನಲ್ಲಿ ಮೀನುಗಾರಿಕಾ ಬೋಟ್ ಮತ್ತು ಮೀನುಗಾರರಿಗೆ ಡಿಜಿಟಲ್ ದಾಖಲೆಗಳನ್ನು ಸೃಜಿಸಿ, ಸುರಕ್ಷತಾ ಕ್ರಮಗಳನ್ನು ನಿರ್ವಹಿಸುವಂತೆ ಮೀನುಗಾರಿಕಾ ಇಲಾಖೆಗೆ ಎನ್ಎಂಪಿಟಿಯು ಸತತ ಮನವಿ ಮಾಡುತ್ತಲೇ ಬಂದಿದೆ. ಆದರೆ, ಇನ್ನೂ ಯಾವುದೇ ಅಧಿಕೃತ ವ್ಯವಸ್ಥೆಯನ್ನು ಮಾಡದ ಕಾರಣ ತುರ್ತು ಸಂದರ್ಭಗಳಲ್ಲಿ ಸುರಕ್ಷತಾ ನಿಯಮಗಳ ಅಡಚಣೆ ಆಗುತ್ತಿದೆ. ಆದರೂ, ಎನ್ಎಂಪಿಟಿಯು ಮಾನವೀಯತೆ ಹಾಗೂ ಸ್ಥಳೀಯ ಆದ್ಯತೆಯನ್ನು ಪರಿಗಣಿಸಿಕೊಂಡು ತುರ್ತು ಸಂದರ್ಭದಲ್ಲಿ ಬೋಟುಗಳಿಗೆ ಲಂಗರು ಹಾಕಲು ಅವಕಾಶ ಕಲ್ಪಿಸುತ್ತಿದೆ. ಆದರೆ, ದೇಶದ ಭದ್ರತೆ ಹಾಗೂ ಮೀನುಗಾರರ ಹಿತದೃಷ್ಟಿಯಿಂದ ಮೀನುಗಾರಿಕಾ ಇಲಾಖೆಯು ಡಿಜಿಟಲೈಸ್ಡ್ ಸುರಕ್ಷತಾ ವ್ಯವಸ್ಥೆಯನ್ನು ಅನುಸರಿಸಿಕೊಂಡು ಗೊಂದಲ ಏರ್ಪಡದಂತೆ ಮಾಡಬೇಕಾಗಿ ವಿನಂತಿಸುತ್ತೇವೆ ಎಂದು ಎನ್ಎಂಪಿಟಿ ಪ್ರಕಟಣೆ ತಿಳಿಸಿದೆ.

ಮಂಗಳೂರಿನ ಮೀನುಗಾರಿಕಾ ಧಕ್ಕೆ ಪ್ರವೇಶಿಸುವ ಅಳಿವೆ ಬಾಗಿಲಿನಲ್ಲಿ ಸಮುದ್ರ ಬಿರುಸಾಗಿರುವುದರಿಂದ ಮೀನುಗಾರಿಕಾ ಬೋಟ್‌ಗಳು ಮರಳುವುದು ಅಸಾಧ್ಯವಾಗಿದೆ. ಹೀಗಾಗಿ ಎನ್ಎಂಪಿಟಿಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮೀನುಗಾರಿಕಾ ಇಲಾಖಾ ಉಪನಿರ್ದೇಶಕ ಪಾರ್ಶ್ವನಾಥ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು