ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹7.64 ಕೋಟಿ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಆದೇಶ

ಮಂಗಳೂರು ವಿಮಾನ ದುರಂತದಲ್ಲಿ ಮಡಿದಿದ್ದ ವ್ಯಕ್ತಿ ಕುಟುಂಬಕ್ಕೆ ಪರಿಹಾರ
Last Updated 21 ಮೇ 2020, 16:23 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22 ರಂದು ಸಂಭವಿಸಿದ್ದ ವಿಮಾನ ದುರಂತದಲ್ಲಿ ಮಡಿದಿದ್ದ ವ್ಯಕ್ತಿ ಕುಟುಂಬಕ್ಕೆ ₹7.64 ಕೋಟಿ ಪರಿಹಾರವನ್ನು ವಾರ್ಷಿಕ ಶೆ 9ರ ಬಡ್ಡಿದರದಲ್ಲಿ ಪಾವತಿಸಲು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ದುಬೈನ ಜಿಟಿಎಲ್‌ ಕಂಪನಿ ಪ್ರಾದೇಶಿಕ ನಿರ್ದೇಶಕರಾಗಿದ್ದ ಮಹೇಂದ್ರ ಕೊಡ್ಕಣಿ ಅಪಘಾತದಲ್ಲಿ ಮೃತಪಟ್ಟಿದ್ದರು. 2012ರ ಮಾರ್ಚ್‌ 20 ರಂದು ಏರ್‌ ಇಂಡಿಯಾ ಮಹೇಂದ್ರ ಕೊಡ್ಕಣಿ ಅವರ ಪತ್ನಿ ತ್ರಿವೇಣಿ ಅವರಿಗೆ ₹4 ಕೋಟಿ, ಮಹೇಂದ್ರ ಅವರ ತಂದೆ–ತಾಯಿಗೆ ₹ 40 ಲಕ್ಷ ಪರಿಹಾರ ಒದಗಿಸಿತ್ತು.

ಒಟ್ಟು ₹13.42 ಕೋಟಿ ಪರಿಹಾರವನ್ನು ವಾರ್ಷಿಕ ಶೇ 18ರ ಬಡ್ಡಿದರದಲ್ಲಿ ನೀಡಲು ಏರ್‌ ಇಂಡಿಯಾಗೆ ಸೂಚಿಸಲು ಕೋರಿ ತ್ರಿವೇಣಿ ಅದೇ ವರ್ಷ ಮೇ 18ರಂದು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆಯೋಗವು ವಾರ್ಷಿಕ ಶೇ 9ರ ಬಡ್ಡಿ ದರದಲ್ಲಿ ₹ 7,35,14,187 ಪರಿಹಾರ ಪಾವತಿಗೆ ಆದೇಶಿಸಿತ್ತು.

ಆಗ ಮಹೇಂದ್ರ ಕೊಡ್ಕಣಿ ಅವರ ಟೆಲಿಫೋನ್‌ ಭತ್ಯೆಯನ್ನು ಪರಿಗಣಿಸಿರಲಿಲ್ಲ. ತ್ರಿವೇಣಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವಕೀಲ ಯಶವಂತ ಶೆಣೈ, ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿದ್ದರು. ನ್ಯಾಯಮೂರ್ತಿಗಳಾದ ಡಾ. ಧನಂಜಯ ವೈ ಚಂದ್ರಚೂಡ ಹಾಗೂ ಅಜಯ್‌ ರಸ್ತೋಗಿ ಅವರಿದ್ದ ಪೀಠವು, ಆಯೋಗವು ಪರಿಗಣಿಸಿದ ಅಂಶಗಳ ಆಧಾರದಲ್ಲಿ ಮಹೇಂದ್ರ ಅವರ ಕುಟುಂಬಕ್ಕೆ ಒಟ್ಟು ₹7,64,29,437 ಪರಿಹಾರವನ್ನು ವಾರ್ಷಿಕ ಶೇ 9 ರ ಬಡ್ಡಿದರದಲ್ಲಿ ನೀಡಲು ಆದೇಶಿಸಿತು.

ಮಹೇಂದ್ರ ಕೊಡ್ಕಣಿ ಅವರ ಟೆಲಿಫೋನ್‌ ಭತ್ಯೆಯನ್ನು ಪರಿಗಣಿಸದಿರುವುದು ಸರಿಯಲ್ಲ. ಪರಿಹಾರ ನೀಡುವಾಗ ವ್ಯಕ್ತಿಯ ಒಟ್ಟು ಆದಾಯ ಪರಿಗಣಿಸಬೇಕು. ಪರಿಹಾರದ ಬಾಕಿ ಮೊತ್ತವನ್ನು ಆದೇಶದ ಪ್ರಮಾಣಿಕೃತ ಪ್ರತಿ ಲಭಿಸಿದ ಎರಡು ತಿಂಗಳಲ್ಲಿ ಒದಗಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಮಹತ್ವದ ತೀರ್ಪು
‘ಇದೊಂದು ಮಹತ್ವದ ತೀರ್ಪು. ಕಾಯಂ ಹಾಗೂ ನಿಗದಿತ ವೇತನದ ಉದ್ಯೋಗಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸಿದೆ’ ಎಂದು ಅರ್ಜಿದಾರರ ಪರ ವಾದಿಸಿದ್ದ ವಕೀಲ ಯಶವಂತ ಶೆಣೈ ಹೇಳಿದ್ದಾರೆ.

‘ಅಪಘಾತ ಪ್ರಕರಣಗಳಲ್ಲಿ ವಿದೇಶಿ ವಿನಿಮಯದ ಪರಿವರ್ತನೆಗೂ ಈ ತೀರ್ಪಿನಿಂದ ಸ್ಪಷ್ಟ ನಿರ್ದೇಶನ ಸಿಕ್ಕಂತಾಗಿದೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವಾಗ ವ್ಯಕ್ತಿಯ ಸಂಪೂರ್ಣ ಆದಾಯವನ್ನು ಪರಿಗಣಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT