ಮಂಗಳೂರು: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಅವರ ಸುರಕ್ಷತೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಇಲ್ಲಿ ಸೋಮವಾರ ಮಾನವ ಸರಪಳಿ ರಚಿಸಲಾಯಿತು.
ಬಾಂಗ್ಲಾ ದೇಶದ ಹಿಂದೂಗಳ ಪರ ದನಗೂಡಿಸಲು ಪರಸ್ಪರ ಕೈ ಜೋಡಿಸಿದವರು, ‘ಬಾಂಗ್ಲಾ ದೇಶದ ಹಿಂದೂಗಳೇ, ನೀವು ಅಸಹಾಯಕರಲ್ಲ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಹಿಂದೂಗಳು ನಿಮ್ಮೊಂದಿಗೆ ಇದ್ದಾರೆ. ಮತಾಂಧರ ಅಟ್ಟಹಾಸದ ಕೃತ್ಯಗಳಿಂದ ಧೃತಿಗೆಡದಿರಿ’ ಎಂದು ಘೋಷಣೆ ಕೂಗಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವಕ್ತಾರ ಸತೀಶ ಪ್ರಭು ಮಾತನಾಡಿ, ‘ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಅವ್ಯಾಹತವಾಗಿದೆ. ಅಲ್ಲಿನ ಹಿಂದೂ ಮಹಿಳೆಯರ ಮಾನಭಂಗ ಮಾಡಲಾಗುತ್ತಿದೆ. ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಅವರ ಉದ್ಯಮಗಳನ್ನು ನಾಶಪಡಿಸಲಾಗಿತ್ತಿದೆ. ಮತಾಂಧ ಶಕ್ತಿಗಳ ಕ್ರೌರ್ಯವನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂಗಳನ್ನು ಕೆಣಕಬೇಡಿ. ಇಡೀ ಹಿಂದೂಸ್ತಾನವು ಬಾಂಗ್ಲಾದ ಹಿಂದೂಗಳ ಪರ ನಿಲ್ಲಲಿದೆ’ ಎಂದು ಎಚ್ಚರಿಸಿದರು.
‘ಬಾಂಗ್ಲಾದ ಹಿಂದೂಗಳಿಗೆ ಮಾನವ ಹಕ್ಕುಗಳು ಇಲ್ಲವೇ. ವಿಶ್ವ ಮಾನವ ಹಕ್ಕುಗಳ ಆಯೋಗ ಈಗೇನು ಮಾಡುತ್ತಿದೆ. ಮಾನವ ಹಕ್ಕು ಹೋರಾಟಗಾರರು ಈ ದೌರ್ಜನ್ಯದ ವಿರುದ್ಧ ಮೌನ ವಹಿಸಿರುವುದು ಏಕೆ’ ಎಂದು ಅವರು ಪ್ರಶ್ನಿಸಿದರು.
‘ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಉದ್ದೇಶಪೂರ್ವಕ ಕೃತ್ಯ. ಹಿಂದೂಗಳನ್ನು ಹತ್ತಿಕ್ಕುವ ಹುನ್ನಾರವನ್ನು ಸಹಿಸಲಾಗದು. ಹಿಂದೂ ಜಗತ್ತಿನ ಯಾವುದೇ ಮೂಲೆಯಲ್ಲಿರಲಿ. ಅವರಿಗೆ ಆಪತ್ತು ಬಂದಾಗ ಸಮಸ್ತ ಹಿಂದೂಗಳು ಸುಮ್ಮನಿರುವುದಿಲ್ಲ’ ಎಂದರು.
‘ನಾವು ಯಾರಿಗೂ ಅನ್ಯಾಯ ಮಾಡುವವರಲ್ಲ. ಆದರೆ ನಮಗೇ ಅನ್ಯಾಯ ಆದಾಗ ಅದನ್ನು ಹತ್ತಿಕ್ಕಲು ಯಾವ ಬೆಲೆಯನ್ನು ಬೇಕಾದರೂ ತೆರಲು ಸಿದ್ದ. ಬಾಂಗ್ಲಾದಲ್ಲಿ ಮಾರಣ ಹೋಮ ನಿಲ್ಲಿಸುವಂತೆ ವಿಶ್ವ ಸಮುದಾಯ ಒತ್ತಡ ಹೇರಬೇಕು. ಅಲ್ಲಿ ಆದಷ್ಟು ಬೇಗ ಶಾಂತಿ ಮರುಸ್ಥಾಪನೆ ಆಗುವಂತೆ ನೋಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಪಮೇಯರ್ ಸುನೀತಾ, ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರು, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡರಾದ ಜಗದೀಶ ಶೇಣವ, ಪ್ರಮುಖರಾದ ಮೋನಪ್ಪ ಭಂಡಾರಿ, ನಿತಿನ್ ಕುಮಾರ್, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಹಿಂದೂ ಹಿತರಕ್ಷಣಾ ಸಮಿತಿಯ ಸಮಿತಿಯ ಪ್ರಮುಖರಾದ ಭುಜಂಗ ಕುಲಾಲ್, ದೇವಿಪ್ರಸಾದ್, ಶ್ರೇಯಸ್ ಇಡ್ಯಡ್ಕ, ಹರೀಶ್ ಶಕ್ತಿನಗರ ಮೊದಲಾದವರು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.