ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೋಕಟ್ಟೆ: ಉಸಿರುಗಟ್ಟಿಸಿ ಬಾಲಕಿಯ ಕೊಲೆ

Published : 7 ಆಗಸ್ಟ್ 2024, 7:29 IST
Last Updated : 7 ಆಗಸ್ಟ್ 2024, 7:29 IST
ಫಾಲೋ ಮಾಡಿ
Comments

ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಮನೆಯೊಂದರಲ್ಲಿ 13 ವರ್ಷದ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಮಂಗಳವಾರ ಹಾಡ ಹಗಲೇ ಕೊಲೆ ಮಾಡಲಾಗಿದೆ.

ಬಾಲಕಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನವಳು. ಆಕೆ ಕೈ ನೋವಿನ ಚಿಕಿತ್ಸೆ ಸಲುವಾಗಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದು, ಈ ವೇಳೆ  ಕೃತ್ಯ ನಡೆಸಲಾಗಿದೆ.

‘ಬೆಳಗಾವಿ ಜಿಲ್ಲೆಯ ಕಾರ್ಮಿಕರೊಬ್ಬರು ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರ ತಮ್ಮನ ಮಗಳಾದ ಬಾಲಕಿಯು ಕೈ ನೋವಿಗೆ ಚಿಕಿತ್ಸೆ ಪಡೆಯಲು ಬೆಳಗಾವಿಯಿಂದ ಬಂದಿದ್ದಳು. ಆಕೆ ಅವರ ಮನೆಯಲ್ಲೇ ಉಳಿದುಕೊಂಡಿದ್ದಳು. ಮನೆ ಮಂದಿ ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ಬಾಲಕಿಯ ತಾಯಿ ಬೆಳಿಗ್ಗೆ 10.30ರ ಸುಮಾರಿಗೆ ಪಕ್ಕದ ಮನೆಯವರಿಗೆ ಕರೆ ಮಾಡಿ, ಬಾಲಕಿಗೆ ಪೋನ್ ಕೊಡಲು ತಿಳಿಸಿದ್ದರು. ಪಕ್ಕದ ಮನೆಯವರು ಪೋನ್ ಕೊಡಲು ತೆರಳಿದಾಗ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿಯಲಾಗಿತ್ತು. ಆಕೆ ಕೊಲೆಯಾದ ಸ್ಥಿತಿಯಲ್ಲಿರುವುದು ಕಂಡುಬಂದಿತ್ತು’ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ.

‘ಪಕ್ಕದ ಮನೆಯವರು ತಾಯಿಗೆ ಪೋನಿನಲ್ಲಿ ವಿಚಾರ ತಿಳಿದ್ದರು.  ಬಾಲಕಿಯ ತಾಯಿಯು ಮನೆಯ ಯಜಮಾನಗೆ  ಪೋನ್ ಮಾಡಿ ಮನೆಗೆ ತಕ್ಷಣವೇ ತೆರಳುವಂತೆ ತಿಳಿಸಿದ್ದರು. ಯಜಮಾನ ಮನೆಗೆ ಧಾವಿಸಿ ನೋಡಿದಾಗ ಬಾಲಕಿ ಮೃತಪಟ್ಟಿದ್ದು ದೃಢಪಟ್ಟಿತ್ತು. ಬಳಿಕ ಅವರು ದೂರು ನೀಡಿದ್ದಾರೆ’ ಎಂದರು.

ಮನೆಯ ಯಜಮಾನ ನೀಡಿದ ದೂರಿನ ಅನ್ವಯ ಪಣಂಬೂರು ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 103ರ ಅಡಿ (ಕೊಲೆ) ಪ್ರಕರಣ ದಾಖಲಾಗಿದೆ. 

‘ಆರೋಪಿ ಬಗ್ಗೆ ಮಹತ್ತರ ಸುಳಿವು ಸಿಕ್ಕಿದೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳದಲ್ಲಿ ಕೆಲವೊಂದು ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಅವರ ವರದಿ ಕೈ ಸೇರಿದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪೊಲೀಸ್‌ ಕಮಿಷನರ್‌ ಅನುಪಮ್ ಅಗರವಾಲ್, ಡಿಸಿಪಿ (ಅಪರಾಧ ಮತ್ತು ಸಂಚಾರ)  ದಿನೇಶ್ ಕುಮಾರ್, ಉತ್ತರ ಉಪವಿಭಾಗದ ಪ್ರಭಾರ ಎಸಿಪಿ ರವೀಶ್‌ ನಾಯ್ಕ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಣಂಬೂರು ಠಾಣಾಧಿಕಾರಿ ಸಲೀಂ ಅಬ್ಬಾಸ್‌ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT