ಭಾನುವಾರ, ಫೆಬ್ರವರಿ 23, 2020
19 °C
ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆ ಅಸ್ತು

ಮಂಗಳೂರು: ಘಟಿಕೋತ್ಸವಕ್ಕೆ ಕೈಮಗ್ಗದ ಖಾದಿ ರೇಷ್ಮೆ ಉಡುಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಘಟಿಕೋತ್ಸವದಲ್ಲಿ ಕೈಮಗ್ಗದ ಖಾದಿ ರೇಷ್ಮೆಯ ಉಡುಪುಗಳನ್ನು ಬಳಸುವ ಪ್ರಸ್ತಾವಕ್ಕೆ ಸೋಮವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯು ಅನುಮೋದನೆ ನೀಡಿದ್ದು, ರಾಜ್ಯಪಾಲರ ಅಂಕಿತ ಬಿದ್ದರೆ ಈ ಬಾರಿಯೇ ಜಾರಿಗೆ ಬರಲಿದೆ.

ಈ ಬಗ್ಗೆ ನಿರ್ದೇಶನ ನೀಡಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ವು ನೂತನ ಉಡುಪುಗಳನ್ನು ನವದೆಹಲಿಯ ಖಾದಿ ಗ್ರಾಮೋದ್ಯೋಗ್‌ ಭವನ್‌ನಿಂದ ಖರೀದಿಸುವಂತೆಯೂ ಸೂಚಿಸಿದೆ. ಈ ಹಿಂದೆ ವೆಲ್‌ವೆಟ್‌ ರೇಷ್ಮೆಯ ನಿಲುವಂಗಿಗಳನ್ನು ಬಳಸಲಾಗುತ್ತಿತ್ತು.

ಈ ಕುರಿತು ಮಾಹಿತಿ ನೀಡಿದ ಕುಲಸಚಿವ ಪ್ರೊ.ಎ.ಎಂ. ಖಾನ್, ‘ಕುಲಾಧಿಪತಿಗಳಿಗೆ ಕಡುಗೆಂಪು ನಿಲುವಂಗಿ ಹಾಗೂ ಹೆಗಲ ಮೇಲೆ ನೀಲಿ ಅಂಚಿನ ಶಾಲು (ಅಂಗವಸ್ತ್ರ), ಸಹ ಕುಲಾಧಿಪತಿಗಳಿಗೆ ನೌಕಾನೀಲಿ ನಿಲುವಂಗಿ ಹಾಗೂ ನೀಲಿ ಅಂಚಿನ ಪೀತವರ್ಣದ ಶಾಲು, ಕುಲಪತಿಗಳಿಗೆ ಆಕಾಶ ನೀಲಿ ನಿಲುವಂಗಿ ಹಾಗೂ ಕೆಂಪು ಅಂಚಿನ ಚಿನ್ನದ ಬಣ್ಣದ ಶಾಲುಗಳನ್ನು ವಿನ್ಯಾಸ ಮಾಡಲಾಗಿದೆ. ಇದೇ ರೀತಿ ಕುಲಸಚಿವರು, ಡೀನ್, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸೇರಿದಂತೆ ಗೌರವ ಹಾಗೂ ಡಾಕ್ಟರೇಟ್ ಸ್ವೀಕೃತರಿಗೂ ವಿವಿಧ ವಿನ್ಯಾಸಗಳನ್ನು ರೂಪಿಸಲಾಗಿದೆ’ ಎಂದು ವಿವರಿಸಿದರು.

‘ಈ ಹಿಂದಿನ ಉಡುಪಿನಲ್ಲಿ ಸಿಕ್ಕಾಪಟ್ಟೆ ಸೆಕೆಯಾಗುತ್ತಿದ್ದು, ಖಾದಿಯು ಆರೋಗ್ಯಕರ ಧಿರಿಸಾಗಲಿದೆ’ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು