ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರನೇ ತರಗತಿ: ತೃತೀಯ ಭಾಷೆಯಾಗಿ ಬ್ಯಾರಿ ಕಲಿಕೆ

ಆಸಕ್ತ ಶಾಲೆಗಳಿಂದ ಮಾಹಿತಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮನವಿ
Last Updated 10 ಮಾರ್ಚ್ 2020, 11:58 IST
ಅಕ್ಷರ ಗಾತ್ರ

ಮಂಗಳೂರು: ಆರನೇ ತರಗತಿಯಿಂದ ಬ್ಯಾರಿ ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಸಲು ಇಚ್ಛಿಸುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಲೆಗಳು ಇದೇ 14ರೊಳಗಾಗಿ ಮಾಹಿತಿ ನೀಡುವಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮನವಿ ಮಾಡಿದೆ.

ಅಕಾಡೆಮಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ರಹೀಂ ಉಚ್ಚಿಲ್, ‘ಐಚ್ಛಿಕ ಭಾಷೆಯಾಗಿ ಬ್ಯಾರಿ ಕಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮ್ಮತಿ ನೀಡಿದೆ. ಮೊದಲ ಹಂತವಾಗಿ ಎರಡು ಜಿಲ್ಲೆಗಳಲ್ಲಿ ನಾವು ಆರಂಭಿಸುವ ಚಿಂತನೆ ನಡೆಸಿದ್ದೇವೆ’ ಎಂದರು.

‘ಬ್ಯಾರಿ ದ್ರಾವಿಡ ಭಾಷೆಯಾಗಿದ್ದು, ತುಳುವಿನ ಬಳಿಕ ಅತಿ ಹೆಚ್ಚು ಜನರು ಮಾತನಾಡುತ್ತಿದ್ದಾರೆ. ಕನ್ನಡ ಲಿಪಿಯನ್ನು ಆಧರಿಸಿ ಪಠ್ಯಕ್ರಮ ರೂಪಿಸಲಾಗುತ್ತಿದ್ದು, ಸುಲಭ ಹಾಗೂ ಸುಲಲಿತವಾಗಿ ಕಲಿಯಬಹುದಾಗಿದೆ. ಕನ್ನಡ ಶಿಕ್ಷಕರೂ ಬ್ಯಾರಿ ಕಲಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬಹುದಾಗಿದೆ. ಬ್ಯಾರಿ ಕಲಿಕೆಗೆ ಸಂಬಂಧಿಸಿದಂತೆ ವಿಫುಲ ಸಾಹಿತ್ಯ, ನಿಘಂಟು, ವ್ಯಾಕರಣಗಳು ಇವೆ’ ಎಂದು ವಿವರಿಸಿದರು.

‘ಈಗಾಗಲೇ ಸುಮಾರು 30ರಿಂದ 40 ಶಾಲೆಗಳು ಬ್ಯಾರಿ ಕಲಿಕೆಯ ಬಗ್ಗೆ ಅಕಾಡೆಮಿಯನ್ನು ಸಂಪರ್ಕಿಸಿವೆ. ನಾವೂ ಬ್ಯಾರಿ ಭಾಷಿಕ ಜಮಾತ್, ಸಂಘಟನೆಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ್ದೇವೆ. ಅಲ್ಲದೇ 13 ಮಂದಿಯ ಬ್ಯಾರಿ ಭಾಷಾ ಪಠ್ಯ ಪುಸ್ತಕ ರಚನಾ ಸಮಿತಿಯನ್ನು ರಚಿಸಲಾಗಿದೆ’ ಎಂದರು.

‘ಅಕಾಡೆಮಿಯ ನಿರಂತರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರವು ಶಾಲೆಯಲ್ಲಿ ಬ್ಯಾರಿ ಭಾಷೆ ಕಲಿಸಲು ಅನುಮತಿ ನೀಡಿದ್ದು, ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿಎಸ್‌ಇಆರ್‌ಟಿ)ಯು ಅಕಾಡೆಮಿ ಜೊತೆ ಸಭೆ ನಡೆಸಿ ರಚನಾ ಸಮಿತಿ, ತಜ್ಞರ ಸಮಿತಿಗೆ ಶಿಫಾರಸು ಮಾಡುವಂತೆ ಕೋರಿತ್ತು. ಅಲ್ಲದೇ, ಭಾಷೆ ಕಲಿಸುವ ಕುರಿತು ವಿವಿಧ ಅಂಕಿ ಅಂಶಗಳನ್ನು ಕೇಳಿತ್ತು’ ಎಂದು ಮಾಹಿತಿ ನೀಡಿದರು.

ಭವನಕ್ಕೆ ಬೇರೆ ಜಾಗ

ಬ್ಯಾರಿ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ₹6 ಕೋಟಿ ಮಂಜೂರು ಮಾಡಿದ್ದು, ನೀರುಮಾರ್ಗದ ಬದಲಾಗಿ ನಗರ ಸಮೀಪದ ಹೊಸ ನಿವೇಶನದ ಪ್ರಸ್ತಾವವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಅಲ್ಲಿ ತನಕ ಅಕಾಡೆಮಿಯು ಮಂಗಳೂರು ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಕಚೇರಿಗೆ ಇದೇ 21ಕ್ಕೆ ಸ್ಥಳಾಂತರಗೊಳ್ಳಲಾಗುವುದು. ಇದೇ 20ರಂದು ಮಂಗಳೂರು ವಿಶ್ವವಿದ್ಯಾಲಯದ ರವೀಂದ್ರ ಕಲಾ ಮಂಟಪದಲ್ಲಿ ಆರು ಹೊಸ ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ. ಬ್ಯಾರಿ ಕಲೆ, ಭಾಷೆ, ಸಾಹಿತ್ಯಕ್ಕೆ ಕೊಡುಗೆ ನೀಡಿದ ನೂರು ಮಹನೀಯರ ‘ಮರಕೊಗಾವತೊ ನೂರ್ ಬ್ಯಾರಿಙ’ ಎಂಬ ಕೃತಿಯನ್ನು ಅಕಾಡೆಮಿಯು ಹೊರತರಲಿದೆ ಸದ್ಯದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT