ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ದರ ಹೆಚ್ಚಳ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ, ನೇಣು ಪ್ರದರ್ಶನ

Last Updated 5 ಡಿಸೆಂಬರ್ 2019, 12:28 IST
ಅಕ್ಷರ ಗಾತ್ರ

ಮಂಗಳೂರು: ಈರುಳ್ಳಿ ದರ ನಿಯಂತ್ರಿಸಲಾಗದ ಕೇಂದ್ರ ಸರ್ಕಾರದ ನೀತಿ ಹಾಗೂ ಸಂಕಷ್ಟಕ್ಕೀಡಾದ ಗ್ರಾಹಕರು ಮತ್ತು ಕಾರ್ಮಿಕರ ರಕ್ಷಣೆಗೆ ಆಗ್ರಹಿಸಿ ಬಂದರು ಶ್ರಮಿಕರ ಸಂಘದಿಂದ ನಗರದ ಬಂದರಿನ ಕಾರ್ಮಿಕರ ಕಟ್ಟೆ ಬಳಿ ಗುರುವಾರ ‘ನೇಣು ಹಗ್ಗ’ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಯಿತು.

ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಜ್‌ ಮಾತನಾಡಿ, ‘ಐದಾರು ತಿಂಗಳ ಹಿಂದೆ ಕೆಲವು ರಾಜ್ಯಗಳಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಈರುಳ್ಳಿ ದರ ಏರಿಕೆಯಾಗಿದೆ. ಇದರಿಂದಾಗಿ ಮಂಗಳೂರಿಗೆ ಈರುಳ್ಳಿ ಸರಬರಾಜು ಆಗುತ್ತಿಲ್ಲ. ದರ ಏರಿಕೆಯು ಮಧ್ಯವರ್ತಿಗಳ ಕೈಯಲ್ಲಿ ಸಿಲುಕಿದೆ. ಏರಿಕೆ ದರ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದರು.

‘ಈರುಳ್ಳಿ ಅಭಾವ, ದರ ಏರಿಕೆ ಬಗ್ಗೆ ಸಂಸತ್‌ನಲ್ಲಿ ಇತ್ತೀಚೆಗೆ ಚರ್ಚೆ ನಡೆಯಿತು. ಈರುಳ್ಳಿ ಅಭಾವ ಕಾರಣ ಟರ್ಕಿ, ಈಜಿಪ್ಟ್ ನಿಂದ 11 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಿಕೊಳ್ಳುತ್ತೇವೆ. ಬಳಿಕ ದರ ಇಳಿಕೆ ಕಾಣಲಿದೆ’ ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದರು. ಆದರೆ ಈ ನಿರೀಕ್ಷೆ ಸುಳ್ಳಾಗಿದೆ. ಈರುಳ್ಳಿ ದರ ಮತ್ತಷ್ಟು ಏರಿಕೆಯಾಗಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಆಮದು ಮತ್ತು ರಫ್ತು ಮೇಲೆ ನಿಯಂತ್ರಣ ಇದ್ದಿದ್ದರೆ, ಇಂತಹ ಕೆಟ್ಟ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಂಗಳೂರು ಬಂದರಿನಲ್ಲಿ ಪ್ರತಿನಿತ್ಯ 8ರಿಂದ 10 ಲೋಡ್ ಈರುಳ್ಳಿಯನ್ನು ಕಾರ್ಮಿಕರು ಅನ್‌ಲೋಡ್ ಮಾಡುತ್ತಿದ್ದರು. ಅಂದರೆ 20ರಿಂದ 25 ಟನ್ ಈರುಳ್ಳಿ ಮಂಗಳೂರಿಗೆ ಬರುತ್ತಿತ್ತು. ಆದರೆ, ಈಗ 5 ಟನ್ ಈರುಳ್ಳಿ ಕೂಡ ಬರುತ್ತಿಲ್ಲ. ಇದರಿಂದ ಒಂದು ತಿಂಗಳಿಂದ ಕಾರ್ಮಿಕರಿಗೂ ಕೆಲಸ ಇಲ್ಲದಾಗಿದೆ. ಕೆಲವು ದಿನ ಕಾರ್ಮಿಕರು ಬರಿಗೈಯಲ್ಲಿ ಮನೆಗೆ ವಾಪಸಾಗುತ್ತಿರುವ ಪರಿಸ್ಥಿತಿ ಇದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರದ ಅಧೀನ ಇಲಾಖೆಗಳು ಈರುಳ್ಳಿ ದರ ಇಳಿಕೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ತೊಂದರೆಗೊಳಗಾಗಿರುವ ಕಾರ್ಮಿಕರ ರಕ್ಷಣೆ ಆಗುತ್ತಿಲ್ಲ. ನಷ್ಟ ಹೊಂದಿ ತತ್ತರಿಸಿರುವ ರೈತರು ಆತ್ಮಹತ್ಯೆಯ ದಾರಿ ಹಿಡಿಯುವ ದುಃಸ್ಥಿತಿ ನಿರ್ಮಾಣವಾಗಿದೆ. ರೈತರ ಬೆಳೆಗಳನ್ನೇ ನಂಬಿಕೊಂಡಿರುವ ಕಾರ್ಮಿರ ಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ’ ಎಂದು ನೋವು ತೋಡಿಕೊಂಡರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮತದಾರರಿಗೆ ಕೊಟ್ಟ ಭರವಸೆಗಳೆಲ್ಲ ಹುಸಿಯಾಗಿವೆ. ಮೋದಿಯ ಆರು ವರ್ಷದ ಆಡಳಿತ ಕಳಪೆಯಾಗಿದೆ. ಈರುಳ್ಳಿ ದರ ₹200ರತ್ತ ಜಿಗಿಯುತ್ತಿದೆ. ಇದೇ, ‘ಅಚ್ಚೇ ದಿನ್’... ದೇಶ ಆರ್ಥಿಕ ಹಿಂಜರಿತಕ್ಕೊಳಗಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಉತ್ಪಾದನಾ ಕ್ಷೇತ್ರಗಳು ಮುಚ್ಚಿ ಹೋಗುತ್ತಿವೆ. ನಿರುದ್ಯೋಗ ಸಮಸ್ಯೆ ವಿಪರೀತವಾಗುತ್ತಿದೆ. ಯುವಕರು ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಅವರು ಎಚ್ಚರಿಸಿದರು.

ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಉಪಾಧ್ಯಕ್ಷ ಹಸನ್ ಮೋನು, ಖಜಾಂಚಿ ಹರೀಶ್ ದೇರೆಬೈಲ್, ಕಾರ್ಮಿಕರಾದ ಯಲ್ಲಪ್ಪ ಉಮರ್ ಫಾರೂಕ್, ಹಂಝ, ಬಶೀರ್, ಸಿದ್ದೀಕ್, ಶರೀಫ್, ಸಮೀರ್ ಮತ್ತಿತರರು ಇದ್ದರು.

‘ಅನಿಯಂತ್ರಿತ ಈರುಳ್ಳಿ’
‘ಸಾಮಾನ್ಯ ಈರುಳ್ಳಿ ₹100 ರೂಪಾಯಿ ಆಸುಪಾಸಿನಲ್ಲಿದ್ದರೆ, ಟರ್ಕಿ ಈರುಳ್ಳಿ ₹150 ದಾಟಿದ್ದು, ₹200ರ ಗಡಿ ದಾಟುವ ಅಪಾಯವಿದೆ. ಬಂದರಿನಲ್ಲಿ ಒಂದು ಬೆಲೆ ಇದ್ದರೆ, ಕೇಂದ್ರ ಮಾರುಕಟ್ಟೆಯಲ್ಲಿ ಮತ್ತೊಂದು ಬೆಲೆ ಇದೆ. ಬೆಳಿಗ್ಗೆ ಒಂದು ದರವಿದ್ದರೆ ಮಧ್ಯಾಹ್ನ, ಸಂಜೆ ಮತ್ತೆ ದರ ಹೆಚ್ಚಳವಾಗುತ್ತಿದೆ. ಇದರಿಂದ ಗ್ರಾಹಕರು, ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ’ ಎಂದು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಜ್‌ ಖಂಡಿಸಿದರು.

‘ಮಂಗಳೂರಿಗೆ ₹100ಕ್ಕೆ ಬಂದಿದ್ದ ಈರುಳ್ಳಿಯ ದರವು ಗ್ರಾಹಕರಿಗೆ ತಲುಪುವಾಗ ಏಕಾಏಕಿ ₹160ರಿಂದ ₹180ರಷ್ಟು ಏರಿಕೆ ಏಕಾಯಿತು? ಮಹಾನಗರಗಳಿಂದ ನಮ್ಮಲ್ಲಿಗೆ ಸಮರ್ಪಕವಾಗಿ ಈರುಳ್ಳಿ ಪೂರೈಕೆ ಏಕೆ ಆಗುತ್ತಿಲ್ಲ? ಇದರ ಹಿಂದಿರುವವರು ಯಾರು? ಈ ಬಗ್ಗೆ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ’ ಎಂದು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಜ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT