ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಕೆ.ಹರಿಪ್ರಸಾದ್‌ ಬಂಧನವಾಗಲಿ: ನಳಿನ್‌ ಕುಮಾರ್‌ ಕಟೀಲ್

Published 4 ಜನವರಿ 2024, 8:32 IST
Last Updated 4 ಜನವರಿ 2024, 8:32 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದಲ್ಲಿ ಗೋಧ್ರಾ ಮಾದರಿಯ ಹತ್ಯಾಕಾಂಡಕ್ಕೆ ಸಂಚು ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವ ಬಿ.ಕೆ.ಹರಿಪ್ರಸಾದ್‌ ಅವರನ್ನು ಬಂಧಿಸಬೇಕು’ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್ ಒತ್ತಾಯಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಗೃಹಸಚಿವ ಜಿ.ಪರಮೇಶ್ವರ ಅವರು ಇದು ಚರ್ಚೆಗೆ ಬಂದಿಲ್ಲ ಎಂದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. ಬಿ.ಕೆ.ಹರಿಪ್ರಸಾದ್ ಅವರ ಬಳಿ ಈ ಕುರಿತ ಮಾಹಿತಿ ಇದ್ದರೆ ಗೃಹ ಇಲಾಖೆಗೆ ನೀಡಬೇಕು. ಇಲ್ಲದಿದ್ದರೆ ತಕ್ಷಣ ಅವರನ್ನು ಬಂಧಿಸಬೇಕು’ ಎಂದರು.

‘ಗೋದ್ರಾ ಘಟನೆಯ ಹಿಂದೆ ಇದ್ದದ್ದು ಕಾಂಗ್ರೆಸ್. ಗುಜರಾತ್‌ನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಬೀಳಿಸಬೇಕೆಂಬ ಕುತಂತ್ರವನ್ನು ಆಗ ಕಾಂಗ್ರೆಸ್ ನಡೆಸಿತ್ತು. ಈಗ ಮತ್ತೆ ಕಾಂಗ್ರೆಸ್‌ನ ಹಿರಿಯ ನಾಯಕ ಹರಿಪ್ರಸಾದ್‌ ಈ ರೀತಿ ಹೇಳಿಕೆ ನೀಡಿದ್ದಾರೆ. ಅಂದರೆ ಕಾಂಗ್ರೆಸ್ ಈ ಷಡ್ಯಂತ್ರವನ್ನು ಮಾಡಿದೆ ಎಂದರ್ಥ’ ಎಂದು ಅವರು ಆರೋಪಿಸಿದರು.

‘ಭಾರತ ಹಿಂದೂ ರಾಷ್ಟ್ರವಾಗುವುದು ಅಪಾಯಕಾರಿ’ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ನಳಿನ್, ‘ಭಾರತ ಹಿಂದೂರಾಷ್ಟ್ರವೇ. ಹಿಂದೂ ಎಂಬ ಶಬ್ದವೇ ಜಾತ್ಯಾತೀತವಾದುದು. ರಾಮರಾಜ್ಯದ ಪರಿಕಲ್ಪನೆಯನ್ನು ಕಂಡಿದ್ದು ಮಹಾತ್ಮ ಗಾಂಧಿಯವರು. ಅವರು ಈ ದೇಶವನ್ನು ಜಾತ್ಯತೀತ ರಾಷ್ಟ್ರ ಮಾಡಿ ಎಂದು ಹೇಳಿಲ್ಲ‌. ಅವರು ಹೇಳಿದ್ದು ರಾಮರಾಜ್ಯವನ್ನಾಗಿ ರೂಪಿಸಲು. ರಾಮರಾಜ್ಯದ ಪರಿಕಲ್ಪನೆಯೇ ಹಿಂದೂ ರಾಷ್ಟ್ರದ ಪರಿಕಲ್ಪನೆ. ಯತೀಂದ್ರ ಅವರು ಗಾಂಧೀಜಿಯನ್ನು ಒಪ್ಪುತ್ತಾರರೋ ಇಲ್ಲವೋ ಎಂದು ಸ್ಪಷ್ಟಪಡಿಸಬೇಕು’ ಎಂದರು.

‘ಹಿಂದೂ ರಾಷ್ಟ್ರ ಆದ ಕಾರಣಕ್ಕೆ ಈ ದೇಶದಲ್ಲಿ ಜಾತ್ಯತೀತ ತತ್ವಗಳು ಉಳಿದಿವೆ. ಹಿಂದೂ ರಾಷ್ಟ್ರವಾಗಿರುವುದರಿಂದಲೇ ಈ ದೇಶದ ಆಡಳಿತ ಇಷ್ಟು ಚೆನ್ನಾಗಿ ನಡೆಯುತ್ತಿದೆ. ಕಾಂಗ್ರೆಸ್ ಆಡಳಿತ ಕಾಲದಲ್ಲಿ ಈ ದೇಶದಲ್ಲಿ ಪಾಕಿಸ್ತಾನದ ತರಹದ ಆಡಳಿತವಿತ್ತು. ಆಗ ಭಯೋತ್ಪಾದನೆ ತಾಂಡವವಾಡುತ್ತಿತ್ತು. ನಕ್ಸಲ್ ಚಟುವಟಿಕೆ ಇತ್ತು. ಈಗ ಹಿಂದೂರಾಷ್ಟ್ರದ ಪರಿಕಲ್ಪನೆಯಡಿ ದೇಶ ಶಾಂತಿಯುತವಾಗಿ ನಡೆಯುತ್ತಿದೆ’ ಎಂದರು.

’ಸಿದ್ದರಾಮಯ್ಯ ಅವರೇ ನನಗೆ ರಾಮ’ ಎಂಬ ಕಾಂಗ್ರೆಸ್‌ ಮುಖಂಡ ಎಚ್‌.ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಳಿನ್‌, ‘ರಾಮನಿಗೆ ರಾಮನೇ ಹೋಲಿಕೆಯೇ ಹೊರತು, ಇನ್ನೊಂದು ಹೋಲಿಕೆಯಿಲ್ಲ. ಹೆಸರಿಟ್ಟುಕೊಂಡವರೆಲ್ಲ ರಾಮ ಆಗಲು ಸಾಧ್ಯವಿಲ್ಲ. ರಾಮ ಎಂಬುದು ಭಾವನಾತ್ಮಕ ನಂಬಿಕೆಗಳ ಸಂಕೇತ. ಮರ್ಯಾದಾ ಪುರುಷ ರಾಮನನ್ನು ಆದರ್ಶಪುರುಷನಾಗಿ ಸ್ವೀಕರಿಸಲಾಗಿದೆ. ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮ ಇದೆ. ಆದರೆ, ರಾವಣನ ಗುಣವಿದೆ’ ಎಂದರು.

‘ರಾಜ್ಯದಲ್ಲಿ ರಾಮ ಜನ್ಮಭೂಮಿಯ ಹೋರಾಟದ ಕರಸೇವಕರನ್ನು ಬಂಧಿಸಲಾಗುತ್ತಿದೆ. ನಾನೂ ಕರಸೇವಕ, ರಾಮಭಕ್ತ. ಸರ್ಕಾರಕ್ಕೆ ಶಕ್ತಿಯಿದ್ದರೆ ನನ್ನನ್ನೂ ಬಂಧಿಸಲಿ. ಎಲ್ಲಾ ಕರಸೇವಕರನ್ನು ಬಂಧಿಸಲಿ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT