ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಹೊಸ ಅಭ್ಯರ್ಥಿ: ಬಿಜೆಪಿಯಲ್ಲಿ ನವೋತ್ಸಾಹ

ಚಾರ್ಮಾಡಿ ಘಾಟಿಯ ಬಾಂಜಾರುಮಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ; ಬೂತ್‌ ಮಟ್ಟದಿಂದ ಪ್ರಚಾರ ಕಾರ್ಯ ಆರಂಭ
Published 18 ಮಾರ್ಚ್ 2024, 2:26 IST
Last Updated 18 ಮಾರ್ಚ್ 2024, 2:26 IST
ಅಕ್ಷರ ಗಾತ್ರ

ಮಂಗಳೂರು: ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಘೋಷಣೆ ಆದ ಬೆನ್ನಲ್ಲೇ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಗರಿಗೆದರಿದ್ದು ಹಳ್ಳಿಯ ಹಾಡಿಗಳಿಂದ ಹಿಡಿದು ನಗರದ ಗಲ್ಲಿಗಲ್ಲಿಗಳ ವರೆಗೂ ಪ್ರಚಾರ ಆರಂಭಗೊಂಡಿದೆ.

ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರು ಕೊಲೆಯಾದ ಹಿನ್ನೆಲೆಯಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ ಅವರ ವಿರುದ್ಧ ಕಾರ್ಯಕರ್ತರು ತಿರುಗಿ ಬಿದ್ದಿದ್ದರು. ಈ ಘಟನೆಯ ನಂತರ ನಳಿನ್ ಬಗ್ಗೆ ಅಸಮಾಧಾನದ ಹೊಗೆ ಹೆಚ್ಚಾಗುತ್ತಲೇ ಸಾಗಿತ್ತು. ಈಗ, ಯುವ ನಾಯಕ ಕ್ಯಾಪ್ಟನ್‌ ಬೃಜೇಶ್ ಚೌಟ ಅವರಿಗೆ ಟಿಕೆಟ್ ಘೋಷಿಸಿರುವುದರಿಂದ ಪಕ್ಷದಲ್ಲಿ ಹೊಸ ಉತ್ಸಾಹ ತುಂಬಿದೆ. ಹೀಗಾಗಿ ಸ್ವಲ್ಪ ಮುಂಚಿತವಾಗಿಯೇ ಪ್ರಚಾರದ ಕಣಕ್ಕೆ ಇಳಿದಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಬಾಂಜಾರುಮಲೆಯಲ್ಲಿ ಮಹಿಳಾ ಮೋರ್ಚಾದ ವತಿಯಿಂದ ವಿಶೇಷ ಕಾರ್ಯಕ್ರಮ ನೆಡಯಿತು
ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಬಾಂಜಾರುಮಲೆಯಲ್ಲಿ ಮಹಿಳಾ ಮೋರ್ಚಾದ ವತಿಯಿಂದ ವಿಶೇಷ ಕಾರ್ಯಕ್ರಮ ನೆಡಯಿತು

ಕೇಂದ್ರ ಚುನಾವಣಾ ಆಯುಕ್ತರು ಚುನಾವಣೆಯ ದಿನಾಂಕವನ್ನು ಶನಿವಾರ ಘೋಷಿಸಿದ್ದಾರೆ. ಕಾಂಗ್ರೆಸ್‌ ಇನ್ನೂ ಅಭ್ಯರ್ಥಿಯ ಹೆಸರನ್ನೇ ಘೋಷಿಸಿಲ್ಲ. ಆದರೆ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಯಾರೆಂದು ಗೊತ್ತಾದ ಕೂಡಲೇ ತಂಡಗಳನ್ನು ಕಟ್ಟಿಕೊಂಡು ‘ವ್ಯವಸ್ಥಿತ’ ಪ್ರಚಾರಕ್ಕೆ ಮುಂದಾಗಿದ್ದಾರೆ. ಪ್ರತಿ ಮೋರ್ಚಾಗೂ ವಿಶೇಷ ಜವಾಬ್ದಾರಿಗಳನ್ನು ಪಕ್ಷದ ನಾಯಕರು ಹಂಚಿದ್ದಾರೆ. ಮಹಿಳಾ ಮೋರ್ಚಾ ಮತ್ತು ಯುವಮೋರ್ಚಾಗೆ ವಿಶೇಷ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ. 

ಬೆಳ್ತಂಗಡಿ ತಾಲ್ಲೂಕಿನ ಬಾಂಜಾರುಮಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮನರಂಜನಾ ಅಟಗಳು ನಡೆದವು
ಬೆಳ್ತಂಗಡಿ ತಾಲ್ಲೂಕಿನ ಬಾಂಜಾರುಮಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮನರಂಜನಾ ಅಟಗಳು ನಡೆದವು

ರಾಷ್ಟ್ರೀಯ ಮಹಿಳಾ ಮೋರ್ಚಾದ ‘ನಾರಿಶಕ್ತಿ ವಂದನ’ ಕಾರ್ಯಕ್ರಮದಡಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕರ್ತರು ಮಹಿಳಾ ಮತದಾರರನ್ನು ಸೆಳೆಯಲು ವಿಶಿಷ್ಟ ಕಾರ್ಯ ಯೋಜನೆ ಸಿದ್ಧಗೊಳಿಸಿದ್ದಾರೆ. ಇದರ ಭಾಗವಾಗಿ ಶನಿವಾರ ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಬಾಂಜಾರುಮಲೆಯಲ್ಲಿ ಮನರಂಜನಾ ಆಟಗಳು ಒಳಗೊಂಡ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. 

ಅಯೋಧ್ಯೆಗೆ ತೆರಳಿದ್ದ ಕಾರ್ಯಕರ್ತರು ವಾಪಸಾದ ಕೂಡಲೇ ಚುನಾವಣೆಯ ಜವಾಬ್ದಾರಿ ವಹಿಸಲಾಗಿದೆ. ಜಿಲ್ಲೆಯಲ್ಲಿ 61 ಮಹಾಶಕ್ತಿಕೇಂದ್ರ, 496 ಶಕ್ತಿ ಕೇಂದ್ರ ಮತ್ತು 1876 ಬೂತ್‌ಗಳನ್ನು ರಚಿಸಲಾಗಿದ್ದು ಎಲ್ಲ ಬೂತ್ ಮಟ್ಟದಲ್ಲಿ ತಲಾ 10 ಮಂದಿ ಕಾರ್ಯಕರ್ತರ ತಂಡವನ್ನು ರಚಿಸಲು ಮಹಿಳಾ ಮೋರ್ಚಾ ಮತ್ತು ಯುವಮೋರ್ಚಾಗೆ ಜವಾಬ್ದಾರಿ ನೀಡಲಾಗಿದೆ.

‘ಚುನಾವಣೆ ಪ್ರಚಾರಕ್ಕಾಗಿ ರಾಜ್ಯದಾದ್ಯಂತ ನಿರ್ದಿಷ್ಟ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೆಚ್ಚು ಶ್ರಮ ಹಾಕುತ್ತಿದ್ದೇವೆ. ಪ್ರತಿ ಬೂತ್‌ನಲ್ಲಿ 150 ಅನುಭವಿ ಕಾರ್ಯಕರ್ತರಿಗೆ ವಿಶಿಷ್ಟ ಜವಾಬ್ದಾರಿ ವಹಿಸಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ‘ಪ್ರಜಾವಾಣಿ’ಗೆ ತಿಳಿಸಿದರು.

ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

‘ಒಂದು ವಾರದಿಂದ ಬೂತ್ ಮಟ್ಟದಲ್ಲಿ ಪ್ರಚಾರ ಕಾರ್ಯಗಳನ್ನು ಆಯೋಜಿಸುತ್ತಿದ್ದೇವೆ. ಶಕ್ತಿಕೇಂದ್ರ, ಮಂಡಲ, ಬೂತ್‌ ಹಂತಗಳಲ್ಲಿ ಪ್ರಮುಖರಿಗೆ ಜವಾಬ್ದಾರಿ ವಹಿಸಲಾಗಿದೆ. ಮತದಾರರ ಹೊಸ ಪಟ್ಟಿ ಕೈಗೆ ಸಿಕ್ಕಿದ ನಂತರ ಚಟುವಟಿಕೆಗಳು ಇನ್ನಷ್ಟು ಚುರುಕು ಪಡೆದುಕೊಳ್ಳಲಿವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಪೂಜಾ ಪೈ ತಿಳಿಸಿದರು.

ಬಿಜೆಪಿ ಈಗಾಗಲೇ ಪ್ರಚಾರ ಕಾರ್ಯ ಆರಂಭಗೊಳಿಸಿದೆ. ಹೊಸ ಅಭ್ಯರ್ಥಿ ಕಣದಲ್ಲಿ ಇರುವುದರಿಂದ ಕಾರ್ಯಕರ್ತರ ಹುರುಪು ಹೆಚ್ಚಾಗಿದೆ. ಮತದಾರರು ಕೂಡ ನವೋತ್ಸಾಹದಲ್ಲಿ ಇದ್ದಾರೆ. ಕಾಂಗ್ರೆಸ್‌ಗೆ ಇನ್ನು ಅಭ್ಯರ್ಥಿಯೇ ಸಿಗಲಿಲ್ಲ. –ಪೂಜಾ ಪೈ ಜಿಲ್ಲಾ ಬಿಜೆಪಿ ಕಾರ್ಯದರ್ಶಿ

ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಾನತಿ ಶ್ರೀನಿವಾಸನ್ ಅವರು ಚುನಾವಣೆಗಾಗಿ ಮಹಿಳಾ ಮೋರ್ಚಾಗೆ 10ರಿಂದ 15 ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅದನ್ನು ಕಾರ್ಯಗತಗೊಳಿಸಲು ಪ್ರಯತ್ನ ನಡೆಯುತ್ತಿದೆ.
–ಧನಲಕ್ಷ್ಮಿ ಗಟ್ಟಿ ಮಹಿಳಾ ಮೋರ್ಚಾ ನಾಯಕಿ

ಮತಗಳಿಕೆಯಲ್ಲಿ ದಾಖಲೆ ಉದ್ದೇಶ

ಹಿಂದಿನ ಚುನಾವಣೆಗಳಿಗಿಂತ ಹೆಚ್ಚು ಮತಗಳನ್ನು ಪಡೆಯುವುದು ಪಕ್ಷದ ಉದ್ದೇಶವಾಗಿದ್ದು ಚುನಾವಣೆಗೆ ತಯಾರಿ ಈಗಾಗಲೇ ಪೂರ್ಣಗೊಂಡಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಒಂದು ಸುತ್ತಿನ ಪ್ರವಾಸ ಮಾಡಿದ್ದಾರೆ. ಮುಂದಿನ 40 ದಿನಗಳ ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಬಿಜೆಪಿ ಚುನಾವಣಾ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯ ನಂತರ ಮಾತನಾಡಿದ ಅವರು ‘ನರೇಂದ್ರ ಮೋದಿ ಅವರಿಗೆ ಮತಗಳ ಅಂತರದಲ್ಲಿ ವಿಶಿಷ್ಟ ಕೊಡುಗೆ ನೀಡಲು ಬಿಜೆಪಿ ಜಿಲ್ಲಾ ಘಟಕದ ನಿರ್ಧರಿಸಿದೆ. ಕಾರ್ಯಕರ್ತರಲ್ಲಿ ನಾಯಕತ್ವಕ್ಕಾಗಿ ಆರೋಗ್ಯಕರ ಪೈಪೋಟಿ ಇದೆಯೇ ಹೊರತು ಗೊಂದಲ ಇಲ್ಲ. ವೈಯಕ್ತಿಕವಾಗಿ ನಾನು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT