ಮಂಗಳವಾರ, ಆಗಸ್ಟ್ 20, 2019
22 °C
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವಾ ಹೇಳಿಕೆ

ಮಂಗಳೂರು: ಜೈಲಿನಲ್ಲಿರುವ ಅಸಹಾಯಕರ ಬಿಡುಗಡೆಗೆ ನೆರವು

Published:
Updated:
Prajavani

ಮಂಗಳೂರು: ಸಣ್ಣ ಆರೋಪಗಳಿಂದ ಜೈಲು ಸೇರಿ, ಆರ್ಥಿಕ ಸಂಕಷ್ಟದಿಂದ ಬಿಡುಗಡೆಯಾಗದೇ ಇರುವ ಅಸಹಾಯಕ ವ್ಯಕ್ತಿಗಳಿಗೆ ನೆರವು ನೀಡಲು ರಾಜ್ಯ ಅಲ್ಪಸಂಖ್ಯಾತರ ಆಯೋಗ ಮುಂದಾಗಿದೆ ಎಂದು ಆಯೋಗದ ನೂತನ ಅಧ್ಯಕ್ಷ ಜಿ.ಎ.ಬಾವಾ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಅಧಿಕಾರ ಸ್ವೀಕರಿಸಿದ ಬಳಿಕ ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಸಣ್ಣ ಆರೋಪಗಳ ಮೇಲೆ ಜೈಲು ಸೇರಿದ್ದು, ಬಿಡುಗಡೆಗೆ ಆದೇಶವಾಗಿದ್ದರೂ ನಿಗದಿತ ಮೊತ್ತ ಪಾವತಿಸಲಾಗದೇ ಹಲವು ಕೈದಿಗಳು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವುದು ಗಮನಕ್ಕೆ ಬಂತು. ಅಂತಹವರು ಬಿಡುಗಡೆಯಾಗಿ ಕುಟುಂಬ ಸೇರಲು ಅಗತ್ಯ ನೆರವು ದೊರಕಿಸಲು ನಿರ್ಧರಿಸಿದ್ದೇನೆ’ ಎಂದರು.

ಗರಿಷ್ಠ ಮೂರು ವರ್ಷಗಳ ಶಿಕ್ಷೆ ಪ್ರಮಾಣ ಹೊಂದಿರುವ ಆರೋಪ ಎದುರಿಸುತ್ತಿರುವವರು ವಿಚಾರಣಾಧೀನ ಕೈದಿಗಳಾಗಿ ಅದಕ್ಕಿಂತಲೂ ಹೆಚ್ಚು ವರ್ಷದಿಂದ ಜೈಲಿನಲ್ಲಿದ್ದಾರೆ. ಸಾಂದರ್ಭಿಕ ಸ್ಥಿತಿಯಿಂದ ಅಪರಾಧ ಎಸಗಿದವರು, ಸಂಶಯದ ಆಧಾರದ ಮೇಲೆ ಬಂಧಿತರಾದವರಿಗೆ ಮಾತ್ರ ನೆರವಾಗಲು ಆಯೋಗ ಬಯಸಿದೆ. ವಕೀಲರುವ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಾಯದಿಂದ ಈ ಕೆಲಸ ಮಾಡುವ ಯೋಚನೆ ಇದೆ ಎಂದು ಹೇಳಿದರು.

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಈ ರೀತಿ ದೀರ್ಘ ಕಾಲದಿಂದ ಬಂಧನದಲ್ಲಿರುವ ಅಸಹಾಯಕ ಕೈದಿಗಳ ವಿವರ ಒದಗಿಸುವಂತೆ ಬಂದಿಖಾನೆ ಇಲಾಖೆಗೆ ಸೂಚಿಸಲಾಗಿದೆ. ಎಲ್ಲ ಸಮುದಾಯಗಳ ವ್ಯಕ್ತಿಗಳ ವಿವರವನ್ನೂ ಸಂಗ್ರಹಿಸಲಾಗುವುದು. ಅಲ್ಪಸಂಖ್ಯಾತ ಸಮುದಾಯಗಳ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಆಯೋಗ ಕ್ರಮ ಕೈಗೊಳ್ಳಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ, ಹಿಂದುಳಿದ ವರ್ಗಗಳ ಆಯೋಗದ ಜೊತೆಗೂ ಈ ಮಾಹಿತಿ ಹಂಚಿಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರ ಒಟ್ಟು ಜನಸಂಖ್ಯೆ ಶೇಕಡ 15ರಷ್ಟಿದೆ. ಆದರೆ, ಕಾರಾಗೃಹಗಳಲ್ಲಿ ಒಟ್ಟು ಕೈದಿಗಳಲ್ಲಿ ಶೇ 30ರಿಂದ 35ರಷ್ಟು ಮಂದಿ ಅಲ್ಪಸಂಖ್ಯಾತ ಸಮುದಾಯದವರು. ಈ ಕುರಿತು ಆಯೋಗ ಅಧ್ಯಯನ ನಡೆಸಲಿದೆ. ಸೌಹಾರ್ದಯುತ ಸಮಾಜ ಕಟ್ಟಲು ಶ್ರಮಿಸಲಾಗುವುದು ಎಂದು ಹೇಳಿದರು.

Post Comments (+)