ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ: ಕುಖ್ಯಾತ ರೌಡಿಯ ಅಪಹರಿಸಿ ಕೊಲೆ

ಕಾರಿನಲ್ಲೇ ಶವ ಬಿಟ್ಟು ಪರಾರಿಯಾದ ಆರೋಪಿಗಳು
Last Updated 3 ಫೆಬ್ರುವರಿ 2020, 9:56 IST
ಅಕ್ಷರ ಗಾತ್ರ

ಬಂಟ್ವಾಳ: ದಕ್ಷಿಣ ಕನ್ನಡ ಹಾಗೂ ಕೇರಳದ ವಿವಿಧೆಡೆ ಕೊಲೆ, ಕೊಲೆಯತ್ನ, ದರೋಡೆ, ಕಳವು ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಕಾಸರಗೋಡು ಜಿಲ್ಲೆಯ ಚೆಮ್ನಾಡ್ ನಿವಾಸಿ ತಸ್ಲೀಮ್‌ ಅಲಿಯಾಸ್‌ ಮುತಾಸಿಮ್‌ (39) ಎಂಬಾತನನ್ನು ಅಪಹರಿಸಿ ತಂದ ತಂಡವೊಂದು ಕೊಲೆ ಮಾಡಿ, ಶವವನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿದೆ.

ರೌಡಿ ಕಾಲಿಯಾ ರಫೀಕ್‌ ಸೇರಿದಂತೆ ಹಲವು ಕೊಲೆ ಪ್ರಕರಣಗಳಲ್ಲಿ ತಸ್ಲೀಮ್‌ ಭಾಗಿಯಾಗಿದ್ದ. 2019ರಲ್ಲಿ ನಡೆದಿದ್ದ ಮಂಗಳೂರಿನ ಭವಂತಿ ಸ್ಟ್ರೀಟ್‌ನ ಅರುಣ್‌ ಜ್ಯುವೆಲ್ಲರಿ ಕಳವು ಪ್ರಕರಣದಲ್ಲಿ ಬಂಧಿತನಾಗಿ ಗುಲ್ಬರ್ಗ ಕಾರಾಗೃಹದಲ್ಲಿದ್ದ. ಜನವರಿ 31ರಂದು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ.

ಶುಕ್ರವಾರ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬರುತ್ತಿದ್ದಂತೆಯೇ ತಂಡವೊಂದು ಈತನನ್ನು ಅಪಹರಿಸಿತ್ತು. ಭಾನುವಾರ ಮಧ್ಯಾಹ್ನ ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದ ಬೊಳ್ಳಾಯಿ ಸಮೀಪದ ನಗ್ರಿ ಶಾಂತಿನಗರದಲ್ಲಿ ಇನ್ನೊವಾ ಕಾರಿನಲ್ಲಿ ಕುಳಿತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿ ರೌಡಿ ತಸ್ಲೀಮ್‌ ಎಂಬುದು ಪತ್ತೆಯಾಯಿತು.

ಬೆಂಗಳೂರಿನ ಕೆ.ಆರ್‌.ಪುರ ನೋಂದಣಿ ಸಂಖ್ಯೆಯ ಕಾರಿನಲ್ಲಿ ತಸ್ಲೀಮ್‌ನನ್ನು ಕರೆತಂದು ಕೊಲೆ ಮಾಡಿರುವ ಆರೋಪಿಗಳು, ವಾಹನದಲ್ಲೇ ಶವ ಬಿಟ್ಟು ಪರಾರಿಯಾಗಿದ್ದಾರೆ. ದೇಹದ ಮೇಲೆ ಇರಿತದ ಗುರುತುಗಳು ಪತ್ತೆಯಾಗಿವೆ. ಈ ಸಂಬಂಧ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಎಸ್‌ಪಿ ಡಾ.ವಿಕ್ರಂ ಅಮ್ಟೆ, ಬಂಟ್ವಾಳ ಉಪ ವಿಭಾಗದ ಡಿವೈಎಸ್‌ಪಿ ವೆಲೆಂಟೈನ್‌ ಡಿಸೋಜ, ಇನ್‌ಸ್ಪೆಕ್ಟರ್‌ ಟಿ.ಡಿ.ನಾಗರಾಜ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿನೀಡಿದ್ದು, ತನಿಖೆ ಆರಂಭಿಸಿದ್ದಾರೆ.

ಮೃತನ ವಿರುದ್ಧ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT