ಗುರುವಾರ , ಮೇ 6, 2021
32 °C
‘ತ್ಯಾಜ್ಯ ನಿರ್ವಹಣೆ, ಸವಾಲು ಮತ್ತು ಪರಿಹಾರ’ ಸಂವಾದದಲ್ಲಿ ಏಕಗಮ್ಯಾನಂದಜಿ

ಅನುದಾನ ಬಯಸದೆ ತ್ಯಾಜ್ಯ ನಿರ್ವಹಣೆ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ತಾಜ್ಯ ನಿರ್ವಹಣೆ ಎಂಬುದು ಸಣ್ಣ ಸಮಸ್ಯೆ. ಮಂಗಳೂರು ನಗರದಲ್ಲಿ ಅದನ್ನು ಎಲ್ಲರೂ ತಾತ್ಸಾರ ಮಾಡಿದ ಪರಿಣಾಮವಾಗಿ ಇಂದು ದೈತ್ಯಾಕಾರದಲ್ಲಿ ಬೆಳೆದಿದೆ. ಇದಕ್ಕೆ ಹೊಸ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ರಾಮಕೃಷ್ಣ ಮಠದ ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಸಿದ್ಧವಿದೆ’ ಎಂದು ಏಕಗಮ್ಯಾನಂದಜಿ ಹೇಳಿದರು.

ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ವತಿಯಿಂದ ನಗರದ ಓಷಿಯನ್‌ ಪರ್ಲ್‌ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ತ್ಯಾಜ್ಯ ನಿರ್ವಹಣೆ, ಸವಾಲು ಮತ್ತು ಪರಿಹಾರ’ ಕುರಿತ ಸಂವಾದದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

‘ತ್ಯಾಜ್ಯ ಎಂಬುದು ಸಮಸ್ಯೆಯೇ ಅಲ್ಲ. ಅದರ ಪರಿಣಾಮಕಾರಿ ನಿರ್ವಹಣೆಯಿಂದ ಆದಾಯ ಗಳಿಸಬಹುದು ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ. ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ‘ಸ್ಚಚ್ಛ ಉಬಾರ್‌’ ಎಂಬ ಕಲ್ಪನೆಯಲ್ಲಿ ಸಮರ್ಪಕ ಕಸ ನಿರ್ವಹಣೆ ಮಾಡಿ, ವರ್ಷದಲ್ಲಿ ಸುಮಾರು ₹ 4 ಲಕ್ಷ ಆದಾಯ ಗಳಿಸಿದ್ದೇವೆ. ಅಲ್ಲಿ ದಿನಕ್ಕೆ 1 ಟನ್‌ ಹಸಿ ಕಸ, ಅರ್ಧ ಟನ್‌ ಒಣ ಕಸ ಸಂಗ್ರಹವಾಗುತ್ತಿದ್ದು, ಒಣ ಕಸವನ್ನು ಮರುಬಳಕೆಗೆ ಕಳುಹಿಸಿದ್ದೇವೆ. ಹಸಿ ಕಸವನ್ನು ಉತ್ತಮ ಸಾವಯವ ಗೊಬ್ಬರವಾಗಿ ಪರಿವರ್ತಿಸಿದ್ದು, ಅದರಲ್ಲಿ ಉತ್ಕೃಷ್ಟ ಪೋಷಕಾಂಶವಿರುವುದು ಪರೀಕ್ಷೆಯಿಂದ ರುಜುವಾತಾಗಿದೆ’ ಎಂದು ಹೇಳಿದರು.

‘ಉಪ್ಪಿನಂಗಡಿಯಂತೆ ಮಂಗಳೂರು ನಗರದಲ್ಲೂ ಸಮರ್ಪಕ ಕಸ ನಿರ್ವಹಣೆ ಮಾಡಲು ಸಾಧ್ಯವಿದೆ. ಪಾಲಿಕೆ ಅವಕಾಶ ನೀಡಿದರೆ ಒಂದೆರಡು ವಾರ್ಡ್‌ಗಳಲ್ಲಿ ಮಾಡಿ ತೋರಿಸುತ್ತೇವೆ. ಮನೆಗಳಿಂದ ಕಸಕ್ಕೆ ಸಂಗ್ರಹಿಸುವ ಸೆಸ್‌ ಪಡೆಯದೆ, ಪಾಲಿಕೆಯ ಅನುದಾನ ಬಯಸದೆ ತ್ಯಾಜ್ಯದಿಂದಲೇ ಬರುವ ಆದಾಯದಲ್ಲೇ ಪರಿಸರ ಸ್ನೇಹಿಯಾಗಿ ಅದರ ನಿರ್ವಹಣೆ ಮಾಡುವ ಗುರಿ ನಮ್ಮದು’ ಎಂದು ತಿಳಿಸಿದರು.

ಮಂಗಳೂರು ಮೇಯರ್‌ ಪ್ರೇಮಾನಂದ ಶೆಟ್ಟಿ ಸಂವಾದವನ್ನು ಉದ್ಘಾಟಿಸಿ, ‘ಪಾಲಿಕೆಯು ಮನೆ ಮನೆಯಿಂದ ಕಸ ಸಂಗ್ರಹಿಸುವ ಮೊದಲು ಬಹುತೇಕ ಮಂದಿ ಕಸವನ್ನು ತಾವೇ ಸಂಸ್ಕೃರಣೆ ಮಾಡುತ್ತಿದ್ದರು. ಕಸಕ್ಕೆ ಸೆಸ್‌ ಹಾಕಿದ ಬಳಿಕವಂತೂ ‘ಕಸ ನೀಡುವುದು ತಮ್ಮ ಹಕ್ಕು’ ಎಂಬ ಕಲ್ಪನೆ ಜನರಲ್ಲಿ ಮೂಡಿದೆ’ ಎಂದು ಹೇಳಿದರು.

ದಾವಣಗೆರೆ ಮೇಯರ್‌ ಎಸ್‌.ಟಿ.ವೀರೇಶ್‌ ಮಾತನಾಡಿ, ‘ಕಸ ನಿರ್ವಹಣೆ ಎಂಬುದು ಜಾಗತಿಕ ಸಮಸ್ಯೆ. ಜನರು ಜಾಗೃತರಾಗದಿದ್ದರೆ ಈ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟ. ನನ್ನ ಕಸ ನನ್ನ ಜವಾಬ್ದಾರಿ ಎಂಬ ಜಾಗೃತಿ ಮೂಡಬೇಕು’ ಎಂದರು.

ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಗಣೇಶ್‌ ಕಾರ್ಣಿಕ್‌ ಮಾತನಾಡಿ, ‘ಪಾಲಿಕೆಗೆ ಸಂಪನ್ಮೂಲವಾಗಬೇಕಿದ್ದ ಕಸವು ಇಂದು ದೊಡ್ಡ ಹೊರೆಯಾಗಿದೆ. ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯು ಕಡಿಮೆ ಖರ್ಚಿನಲ್ಲಿ ಆಧುನಿಕ ಯಂತ್ರೋಪರಣಗಳನ್ನು ಬಳಸದೆ ಪರಿಸರಪ್ರೇಮಿಯಾಗಿ ಕಸ ನಿರ್ವಹಣೆಗೆ ಹೊಸ ದಿಕ್ಕು ತೋರಿಸುತ್ತಿದೆ’ ಎಂದರು.

ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ, ಪಾಲಿಕೆಯ ಆರೋಗ್ಯ ಸಮಿತಿ ಅಧ್ಯಕ್ಷ ಸಂದೀಪ್‌ ಗರೋಡಿ ಮಾತನಾಡಿದರು.

ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ದಿಲ್‌ರಾಜ್‌ ಆಳ್ವ ಸ್ವಾಗತಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಎಸ್‌.ಟಿ.ವೀರೇಶ್‌, ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು