ಮಂಗಳೂರು ಗಾಂಜಾ ಪ್ರಕರಣ: ವೈದ್ಯ ವಿದ್ಯಾರ್ಥಿ ಸೇರಿ ಮತ್ತೆ ಮೂವರ ಬಂಧನ

ಮಂಗಳೂರು: ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೈದ್ಯ ವಿದ್ಯಾರ್ಥಿ ಸೇರಿದಂತೆ ಮತ್ತೆ ಮೂವರನ್ನು ಬಂಧಿಸಿದ್ದಾರೆ.
ನಗರದ ವೈದ್ಯಕೀಯ ಕಾಲೇಜೊಂದರಲ್ಲಿ ಎಂಡಿ ಓದುತ್ತಿರುವ ತುಮಕೂರಿನ ಡಾ.ಹರ್ಷ ಕುಮಾರ್, ಡಿ ಫಾರ್ಮಾ ವಿದ್ಯಾರ್ಥಿಯಾಗಿರುವ ಕೇರಳದ ಕೊಚ್ಚಿಯ ಅಡಾನ್ ದೇವ್, ಮಂಗಳೂರು ಕಸಬ ಬೆಂಗ್ರೆಯ ಮಹಮ್ಮದ್ ಅಫ್ರಾರ್ ಬಂಧಿತರು.
ಮಹಮ್ಮದ್ ಅಫ್ರಾರ್ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಬಂಟ್ಸ್ ಹಾಸ್ಟೆಲ್ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಮನೆಯಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಮಾಹಿತಿ ಮೇರೆಗೆ ಜನವರಿ 7ರಂದು ದಾಳಿ ನಡೆಸಿದ್ದ ಪೊಲೀಸರು, ಬಿಡಿಎಸ್ ವಿದ್ಯಾರ್ಥಿ ನೀಲ್‌ಕಿಶೋರ್ ರಾಮ್‌ಜಿ ಷಾ ಎಂಬಾತನನ್ನು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು.
ಇಂಗ್ಲೆಂಡ್ ನಿವಾಸಿಯಾಗಿದ್ದ ಆತ ಅನಿವಾಸಿ ಭಾರತೀಯ ಕೋಟಾ ಅಡಿ 15 ವರ್ಷಗಳಿಂದ ನಗರದಲ್ಲಿ ವಾಸವಾಗಿರುವುದು ಹಾಗೂ ನಗರದ ಪ್ರತಿಷ್ಠಿತ ದಂತ ವೈದ್ಯ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಬಿಡಿಎಸ್ ವಿದ್ಯಾರ್ಥಿಯಾಗಿರುವುದು ಕಂಡು ಬಂದಿತ್ತು. ಆತ ನೀಡಿದ ಮಾಹಿತಿ ಆಧಾರದ ಮೇಲೆ ಇಬ್ಬರು ವೈದ್ಯರು, ಏಳು ಜನ ವೈದ್ಯಕೀಯ ವಿದ್ಯಾರ್ಥಿಗಳ ಸಹಿತ ಪೊಲೀಸರು 10 ಜನರನ್ನು ಬಂಧಿಸಿದ್ದರು. ಈಗ ಮತ್ತೆ ಮೂವರನ್ನು ಬಂಧಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.