ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳ ಸ್ವಾಭಿಮಾನದ ಸಂಸ್ಕೃತಿ ಸಂಕೇತ: ವಿನಯ್‌ ಗುರೂಜಿ

ಮಂಗಳೂರು ಕಂಬಳೋತ್ಸವದಲ್ಲಿ ವಿನಯ್‌ ಗುರೂಜಿ
Last Updated 7 ಮಾರ್ಚ್ 2021, 2:59 IST
ಅಕ್ಷರ ಗಾತ್ರ

ಮಂಗಳೂರು: ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ್ದು ದಕ್ಷಿಣ ದಿಕ್ಕು. ಸಂಸ್ಕೃತಿ, ಪರಂಪರೆ, ಶೌರ್ಯಗಳ ಅಪ್ರತಿಮ ನಿದರ್ಶನಗಳನ್ನು ಕೊಟ್ಟಿದ್ದು ಕರಾವಳಿ. ಸ್ವಾಭಿಮಾನದಿಂದ ಸಂಸ್ಕೃತಿ, ಸಂಸ್ಕಾರಗಳನ್ನು ಕೊಂಡೊಯ್ಯುವ ಶಕ್ತಿ ಕಂಬಳಕ್ಕಿದೆ ಎಂದು ಮಹಾತ್ಮ ಗಾಂಧಿ ಪ್ರತಿಷ್ಠಾನದ ವಿನಯ್‌ ಗುರೂಜಿ ಹೇಳಿದರು.

ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಶನಿವಾರ ನಡೆದ ರಾಮ-ಲಕ್ಷ್ಮಣ ಜೋಡುಕರೆ ಕಂಬಳೋತ್ಸವದಲ್ಲಿ ಅವರು ಮಾತನಾಡಿದರು.

ಕಂಬಳದಲ್ಲಿ ಹಿಂಸೆ ಕಾಣುತ್ತಿಲ್ಲ. ಬುದ್ಧಿಜೀವಿಗಳಿಗೆ ಬುದ್ಧಿ ಹೆಚ್ಚಿರುವುದರಿಂದ ಹಿಂಸೆ ಎಂದು ಹೇಳಿರಬಹುದು. ತಾಯಿ, ಮಗುವಿಗೆ ಚಿವುಟಿದರೆ, ಅದು ಹಿಂಸೆಯಲ್ಲ. ಅಂತೆಯೇ ಕಂಬಳದ ಯಜಮಾನರು ಕೋಣಗಳನ್ನು ತಮ್ಮ ಮಕ್ಕಳಂತೆ ಪಾಲನೆ, ಪೋಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಯಕ್ಷಗಾನ, ಬ್ರಹ್ಮಕಲಶ, ಕಂಬಳದಂತಹ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಬರುವಲ್ಲಿ ಇಂತಹ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದರು.

ಧಾರವಾಡ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸವಾಲುಗಳ ಮಧ್ಯೆ ಕಂಬಳಕ್ಕೆ ಹೊಸ ರೂಪ ನೀಡಲಾಗಿದೆ. ನಮ್ಮ ಭಾಗದ ಚಕ್ಕಡಿ ಓಟಕ್ಕೂ ಹೊಸತನ ನೀಡುವ ನಿಟ್ಟಿನಲ್ಲಿ ಇದು ಮಾದರಿಯಾಗಿದೆ ಎಂದರು.

ಸ್ಪೇನ್‌ನಲ್ಲಿ ಗೂಳಿಕಾಳಗ ನಡೆಯುತ್ತದೆ. ಅಲ್ಲಿ ಗೂಳಿಗೆ ಚೂರಿಯಿಂದ ಚುಚ್ಚಲಾಗುತ್ತದೆ. ಇಂತಹ ಕ್ರೀಡೆಯನ್ನು ನೋಡಲು ಜಗತ್ತಿನಾದ್ಯಂತ ಜನರು ಬರುತ್ತಾರೆ. ಕಂಬಳದಲ್ಲಿ ಯಜಮಾನರಷ್ಟೇ ಸಂಭ್ರಮ ಕೋಣಗಳಲ್ಲೂ ಕಾಣುತ್ತದೆ. ಇಂತಹ ರೋಮಾಂಚನಕಾರಿ ಕ್ರೀಡೆಗೆ ರಾಷ್ಟ್ರ, ಅಂತರರಾಷ್ಟ್ರೀಯ ಮಾನ್ಯತೆ ಸಿಗಬೇಕಾಗಿದೆ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಗೋಲ್ಡ್‌ಫಿಂಚ್‌ ಸಿಟಿಯ ಕೆ. ಪ್ರಕಾಶ್‌ ಶೆಟ್ಟಿ ಮಾತನಾಡಿ, ಬಂಗ್ರಕೂಳೂರಿನಲ್ಲಿ ಸಿಟಿ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಕ್ರೀಡಾ ಸಂಕೀರ್ಣವನ್ನೂ ನಿರ್ಮಿಸಲಾಗುವುದು. ಅದರಲ್ಲಿ ಅತ್ಯಾಧುನಿಕ ಕಂಬಳ ಕರೆಯನ್ನು ನಿರ್ಮಿಸಲು ಈಗಾಗಲೇ ವಿನ್ಯಾಸಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಕಾಳಿಚರಣ ಸ್ವಾಮೀಜಿ, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್‌ ರೈ, ಪ್ರೊ.ಎಂ.ಬಿ. ಪುರಾಣಿಕ್‌, ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್‌ ಚೌಟ ವೇದಿಕೆಯಲ್ಲಿದ್ದರು.

ಕಂಬಳೋತ್ಸವಕ್ಕೆ ಚಾಲನೆ

ಇದಕ್ಕೂ ಮೊದಲ ಶನಿವಾರ ಬೆಳಿಗ್ಗೆ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಕೆ.ಚಿತ್ತರಂಜನ್ ಕಂಬಳ ಕರೆಗೆ ಗೌರವ ಸಲ್ಲಿಸಿ, ದೀಪ ಬೆಳಗಿಸಿ ಕಂಬಳವನ್ನು ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಗ್ರಾಮೀಣ ಬದುಕಿನಲ್ಲಿ ಭತ್ತದ ಕೃಷಿ ಕಣ್ಮರೆಯಾಗುತ್ತಿರುವ ದಿನಗಳಲ್ಲಿ ಕೃಷಿ ಸಂಸ್ಕೃತಿಯನ್ನು ನೆನಪಿಸುವ ಕಂಬಳ ಕ್ರೀಡೆ ಇಂದು ಸುದ್ದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಕಂಬಳ ಪೂರಕವಾಗಿದೆ ಎಂದರು.

ಕದ್ರಿ ಮಠದ ರಾಜಯೋಗಿ ನಿರ್ಮಲಾನಾಥ್ ಮಹಾರಾಜ್, ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ವಜ್ರ ಕರ್ಣಾಂತಾಯ ಬಲ್ಲಾಳ್, ಜಯರಾಮ ಶೆಟ್ಟಿ ಕುಡುಂಬೂರು, ಮಾಜಿ ಶಾಸಕ ಮೋನಪ್ಪ ಭಂಡಾರಿ, ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪಾಲಿಕೆ ಸದಸ್ಯ ಅನಿಲ್ ಕುಮಾರ್, ಅರಸು ಕುಂಜಜರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮುಕ್ಕಾಲ್ದಿ ಜಯರಾಮ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಕಂಬಳ ಸಮಿತಿಯ ಸಂಚಾಲಕ ಕಿಶೋರ್ ಕುಮಾರ್ ಪುತ್ತೂರು, ಸಲಹೆಗಾರರಾದ ಪ್ರೊ.ಗುಣಪಾಲ ಕಡಂಬ, ಪಿ.ಆರ್.ಶೆಟ್ಟಿ, ವಿಜಯಕುಮಾರ್ ಕಂಗಿನ ಮನೆ ಉಪಸ್ಥಿತರಿದ್ದರು. ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ.ಬ್ರಿಜೇಶ್ ಚೌಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT