ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಉಳಿಸಲು ಸಮುದ್ರತೀರಕ್ಕೆ ಮರಳು

ಸೋಮೇಶ್ವರ, ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಅಂಗಾರ ಭೇಟಿ– ಅಧಿಕಾರಿಗಳಿಗೆ ತರಾಟೆ
Last Updated 13 ಮಾರ್ಚ್ 2021, 4:33 IST
ಅಕ್ಷರ ಗಾತ್ರ

ಉಳ್ಳಾಲ: ‘ರಸ್ತೆ ಉಳಿಸಲು ಸಮುದ್ರ ತೀರದಲ್ಲಿ ಮರಳು ಹಾಕಿ, ಮಳೆಗಾಲದಲ್ಲಿ ಅದು ಕೊಚ್ಚಿಕೊಂಡು ಹೋಗುತ್ತಿದೆ. ಇಂಥಹ ಕಾಮಗಾರಿಯನ್ನು ಮಾಡ ಬೇಡಿ’ ಎಂದು ಬಂದರು ಮತ್ತು ಒಳ ನಾಡು ಸಾರಿಗೆ ಸಚಿವ ಎಸ್. ಅಂಗಾರ ಅಧಿಕಾರಿಗೆ ತಾಕೀತು ಮಾಡಿದರು.

ಸೋಮೇಶ್ವರ ಉಚ್ಚಿಲ ಮತ್ತು ಮೊಗವೀರಪಟ್ನ ತೀರದಲ್ಲಿ ನಡೆಯು ತ್ತಿರುವ ಕಡಲ್ಕೊರೆತ ಶಾಶ್ವತ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಬಂದರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

‘ಉಚ್ಚಿಲ– ಬೆಟ್ಟಂಪಾಡಿ ರಸ್ತೆ ಉಳಿಸುವ ಸಲುವಾಗಿ ಕೋಟ್ಯಂತರ ಅನುದಾನ ವಿನಿಯೋಗಿಸಲಾಗಿದೆ. ಆದರೆ, ಅದಕ್ಕಾಗಿ ಮರಳಿನ ರಾಶಿಯನ್ನು ಹಾಕಿರುವುದು ಕಂಡುಬಂದಿದೆ. ಇದರಿಂದ ರಸ್ತೆಯನ್ನು ಶಾಶ್ವತವಾಗಿ ಉಳಿಸಲು ಸಾಧ್ಯವಿಲ್ಲ. ಗಾಳಿ ಬರುವ ಕಡೆಯತ್ತ ಅಲೆಗಳಿರುತ್ತದೆ. ಯಾವ ಭಾಗದಿಂದಲೂ ಅಲೆಗಳು ಬಂದು ಸಂಗ್ರಹಿಸಲಾದ ಮರಳು ಮತ್ತೆ ಸಮುದ್ರ ಪಾಲಾಗಬಹುದು. ಅದಕ್ಕಾಗಿ ಶೀಘ್ರವೇ ಕ್ರಮಕೈಗೊಳ್ಳಿ’ ಎಂದು ಸೂಚಿಸಿದರು.

‘ಮಾರ್ಚ್‌ 30ರಂದು ಕಾಮಗಾರಿ ಮುಗಿಸಿ ಬಂದರು ಇಲಾಖೆಗೆ ವಹಿಸುವ ಕುರಿತು ಕಚೇರಿಯಲ್ಲಿ ಮಾತನಾಡುತ್ತೇನೆ. ರಾಜ್ಯಾಂಗ- ಕಾರ್ಯಾಂಗದ ಜೊತೆಗೆ ಪರಸ್ಪರ ವಿಶ್ವಾಸದಲ್ಲಿ ಕೆಲಸ ಮಾಡಬೇಕಿದೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯಲೆಂದು ಬಂದಿರುವೆ. ಕಣ್ಣಾರೆ ಕಂಡ ಸಮಸ್ಯೆಗಳಿಗೆ ಚುನಾಯಿತ ಪ್ರತಿನಿಧಿಯಾಗಿ ನನ್ನ ಕಡೆಯಿಂದ ಸಾಧ್ಯವಾಗುವಷ್ಟು ಗಮನ ಕೊಟ್ಟು ಸ್ಪಂದಿಸುತ್ತೇನೆ’ ಎಂದರು.

ಶಾಸಕ ಯು.ಟಿ ಖಾದರ್ ಮಾತನಾಡಿ, ‘ರಸ್ತೆ ತುಂಡಾಗುವ ಪ್ರದೇಶಕ್ಕೆ ಅನುದಾನವಿಲ್ಲ. ಎಡಿಬಿ ಅಥವಾ ಪೋರ್ಟ್ ಕಾಮಗಾರಿ ಜವಾಬ್ದಾರಿ ನಡೆಸುತ್ತದೆಯೋ ಅನ್ನುವುದು ಸ್ಪಷ್ಟವಿಲ್ಲ. ಈ ನಡುವೆ ಮಾರ್ಚ್‌ 31 ಕ್ಕೆ ಕಾಮಗಾರಿ ಮುಗಿಸಿ ಬಂದರು ಇಲಾಖೆಗೆ ಹಸ್ತಾಂತರ ಮಾಡಲು ಮುಂದಾಗಿದ್ದಾರೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಹೆಚ್ಚು ಬರುತ್ತದೆ. ಅದಕ್ಕಿಂತ ಮುನ್ನವೇ ಕಾಮಗಾರಿ ನಡೆಸಿದ ಕಂಪನಿಯವರು ಹಸ್ತಾಂತರಕ್ಕೆ ಮುಂದಾಗಿದ್ದಾರೆ. ಮತ್ತೆ ಸ್ಥಳೀಯರು ತೊಂದರೆಗೀಡಾದಲ್ಲಿ ಪೋರ್ಟ್‍ನವರೇ ಜವಾಬ್ದಾರಿಯಾಗುತ್ತಾರೆ. ಉಚ್ಚಿಲ ಭಾಗದಲ್ಲಿ ಈಗಾಗಲೇ ಎರಡು ರೀಫ್‍ಗಳನ್ನು ಅಳವಡಿಸಲಾಗಿದೆ. ಇದೇ ರೀಫ್ ವಾಲನ್ನು ‘ಎಲ್’ ಆಕಾರದಲ್ಲಿ ಹಾಕಿದಲ್ಲಿ ಮೀನುಗಾರಿಕಾ ಬಂದರನ್ನು ಕೂಡಾ ನಿರ್ಮಿಸಬಹುದು. ಈ ಕುರಿತು ಸಚಿವರು ಗಮನಹರಿಸಬೇಕು’ ಎಂದರು.

ಇನ್ನೊಂದು ರೀಫ್ ಅಗತ್ಯತೆ: ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಮಾತನಾಡಿ, ‘ಮೊಗವೀರಪಟ್ನ ಭಾಗದಲ್ಲಿ ಎರಡು ಬ್ರೇಕ್ ವಾಟರನ್ನು ಅಳವಡಿಸಲಾಗಿದೆ. 525 ಮೀ. ವ್ಯಾಪ್ತಿಯಲ್ಲಿ ಎರಡು ಭಾಗದಲ್ಲಿ ಬ್ರೇಕ್ ವಾಟರ್ ಹಾಕಲಾಗಿದೆ. 2010ರಲ್ಲಿ ₹ 230 ಕೋಟಿ ಅನುದಾನದಡಿ 4 ಬರ್ಮ್ ಬದಲು 8 ಬರ್ಮ್‌ಗಳನ್ನು ಸ್ಥಳೀಯರ ಒತ್ತಾಯದ ಮೇರೆಗೆ ಅಳವಡಿಸಲಾಗಿದೆ. ಆದರೆ, ನಾಲ್ಕನೇ ಹಂತದ ಕಾಮಗಾರಿಗಳು ನಡೆದಿಲ್ಲ. ಬರ್ಮ್ ಅಳವಡಿಸಿದ ಬಳಿಕ ದಾಸ್ತಾನಾಗಿರುವ ಹೊಯ್ಗೆಯನ್ನು ತಂದು ಉಳ್ಳಾಲದ ಸಮುದ್ರ ತೀರಕ್ಕೆ ಹಾಕಬೇಕಿತ್ತು. ಅದನ್ನು ಹಾಕಲಾಗಿಲ್ಲ. ಅದರಷ್ಟಕ್ಕೆ ಹೊಯ್ಗೆ ಬಿದ್ದಿದ್ದರೂ, ಸ್ಯಾಂಡ್ ಮಾಫಿಯಾದವರು ಜೆಸಿಬಿ ಮೂಲಕವೇ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಎರಡು ರೀಫ್‌ಗಳ ನಡುವೆ ಗ್ಯಾಪ್ ಆಗಿ ಮೊಗವೀರಪಟ್ನದ ಜನಸಾಂದ್ರತೆ ಇರುವ ಪ್ರದೇಶಕ್ಕೆ ಸಮುದ್ರ ಹೊಡೆಯುತ್ತಿದೆ. ಮೊಗವೀರಪಟ್ನದ ಮೀನುಗಾರರಿಗೆ ಬೇರೆ ಜಾಗವಿಲ್ಲ. ಗ್ಯಾಪ್ ಇರುವ ಪ್ರದೇಶಕ್ಕೆ ರೀಫ್ ಅಳವಡಿಸುವಂತೆ ಮಾಡಬೇಕು. ಈ ನಡುವೆ ಕಾಮಗಾರಿಗೆ ಬಂದಿರುವ ₹ 19 ಕೋಟಿ ಅನುದಾನ ಎಲ್ಲಿ ಹೋಗಿದೆ ಅನ್ನುವುದು ಗೊತ್ತಿಲ್ಲ’ ಎಂದು ದೂರಿದರು.

ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತ್‍ಹೌಸ್, ಬಂದರು ಇಲಾಖೆಯ ಕಾರ್ಯಕಾರಿ ಎಂಜಿನಿಯರ್ ಗೋಪಾಲ್ ನಾಯ್ಕ್, ಸೋಮೇಶ್ವರ ಪುರಸಭೆ ಪೌರಾಯುಕ್ತೆ ವಾಣಿ ಆಳ್ವ, ಕಂದಾಯ ನಿರೀಕ್ಷಕ ಸ್ಟೀಫನ್, ಜಿತೇಂದ್ರ ಶೆಟ್ಟಿ ತಲಪಾಡಿ, ದೀಪಕ್ ಪಿಲಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಮಂಡಲ ಉಪಾಧ್ಯಕ್ಷ ಯಶವಂತ ಅಮೀನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಹೇಮಂತ್ ಶೆಟ್ಟಿ, ನವೀನ್ ಪಾದಲ್ಪಾಡಿ, ಮಂಡಲ ಮಾದ್ಯಮ ಪ್ರಮುಖ್ ಪುರುಷೋತ್ತಮ ಕಲ್ಲಾಪು ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT