ಭಾನುವಾರ, ಫೆಬ್ರವರಿ 23, 2020
19 °C
ಒಂಬತ್ತು ಕೆರೆ ಯೋಜನೆ; ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ

ಆರ್ಥಿಕ ಶಿಸ್ತಿಲ್ಲದ ಬಜೆಟ್‌: ಖಾದರ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಬೃಹತ್‌ ಯೋಜನೆಗಳನ್ನು ಘೋಷಿಸಿಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಸದರೂ ಆಗಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಪ್ರಯತ್ನಿಸಬೇಕು ಎಂದು ಶಾಸಕ ಯು.ಟಿ. ಖಾದರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಬಿಜೆಪಿ ಸಂಸದರು ರಾಜ್ಯಕ್ಕೆ ಹೆಚ್ಚಿನ ಯೋಜನೆಗಳು ಮತ್ತು ಅನುದಾನ ಹಂಚಿಕೆಯನ್ನು ಹೆಚ್ಚಿಸಲು ಒತ್ತಾಯಿಸಬೇಕು’ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯವರೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಜಿಲ್ಲೆಗೆ ಹಲವಾರು ಯೋಜನೆಗಳು ಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದೆಲ್ಲವೂ ಹುಸಿಯಾಗಿದೆ ಎಂದ ಅವರು, ಈ ಬಜೆಟ್‌ನಲ್ಲಿ ಆರ್ಥಿಕ ಶಿಸ್ತು ಇಲ್ಲ. ಜನಸಾಮಾನ್ಯರ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ಕುರಿತೂ ಯಾವುದೇ ಕ್ರಮ ಇಲ್ಲ ಎಂದರು.

ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದ್ದು, ಇಂತಹ ಸಂದರ್ಭದಲ್ಲಿ ಆರ್ಥಿಕತೆಯ ಪುನರುಜ್ಜೀವನಕ್ಕೆ ಬಜೆಟ್‌ನಲ್ಲಿ ಉತ್ತೇಜನ ನೀಡಬೇಕಾಗಿತ್ತು. ಆದರೆ, ಸರ್ಕಾರಿ ಸ್ವಾಮ್ಯದ ಜೀವ ವಿಮಾ ಕಂಪನಿ ಎಲ್‌ಐಸಿ ಮತ್ತು ಐಡಿಬಿಐ ಬ್ಯಾಂಕ್‌ನಲ್ಲಿ ಷೇರುಗಳನ್ನು ಮಾರಾಟ ಮಾಡುವುದಾಗಿ ಕೇಂದ್ರ ಘೋಷಿಸಿದೆ. ಮೂಲಸೌಕರ್ಯಗಳಿಗೆ ಅನುದಾನ ಒದಗಿಸಲು ಕೇಂದ್ರ ಸರ್ಕಾರವು ಬಾಹ್ಯ ವಾಣಿಜ್ಯ ಸಾಲ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಉತ್ತೇಜನ ನೀಡಿದೆ ಎಂದು ಹೇಳಿದರು.

ಭಾವನಾತ್ಮಕ ಸಮಸ್ಯೆಗಳನ್ನು ಹೆಚ್ಚಿಸುವುದರಿಂದ ದೇಶದ ಅಭಿವೃದ್ಧಿಗೆ ಸಹಾಯವಾಗುವುದಿಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಬಜೆಟ್ ಏನನ್ನೂ ಘೋಷಿಸಿಲ್ಲ ಎಂದರು.

ವಸತಿ ಸಚಿವರು ಕ್ರಮ ಕೈಗೊಳ್ಳಲಿ: ಒಂಬತ್ತುಕೆರೆ ಪ್ರದೇಶದಲ್ಲಿ ನನೆಗುದಿಗೆ ಬಿದ್ದಿರುವ ಮನೆಗಳ ನಿರ್ಮಾಣದ ಕುರಿತು ವಸತಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಯು.ಟಿ. ಖಾದರ್ ಆಗ್ರಹಿಸಿದರು.

ಈ ಪ್ರದೇಶದಲ್ಲಿ ಇರುವ ಮನೆಗಳನ್ನು ನೆಲಸಮಗೊಳಿಸಿ, ಅಲ್ಲಿ ಅಪಾರ್ಟಮೆಂಟ್ ನಿರ್ಮಿಸುವ ಯೋಜನೆ ಸಿದ್ಧವಾಗಿದೆ. ವಸತಿ ಸಚಿವರು ಈ ಬಗ್ಗೆ ಕ್ರಮ ಕೈಗೊಂಡು, ಶಿಲಾನ್ಯಾಸ ನೆರವೇರಿಸಬೇಕು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಈ ಯೋಜನೆಯ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

390 ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು 2000 ರಲ್ಲಿ ಪ್ರಾರಂಭಿಸಲಾಯಿತು. ವಸತಿ ಯೋಜನೆಯು ಒಂಬತ್ತುಕೆರೆ ಕಲುಷಿತಗೊಳಿಸುತ್ತದೆ ಎಂಬ ಆತಂಕದಲ್ಲಿದ್ದ ಸ್ಥಳೀಯರು, ಕೋರ್ಟ್‌ ಮೊರೆ ಹೋಗಿದ್ದರು. ಈ ಸಂಬಂಧ ತಡೆಯಾಜ್ಞೆ ನೀಡಿದ್ದ ಕೋರ್ಟ್‌, ಕೆರೆ ಮಾಲಿನ್ಯವನ್ನು ತಡೆಗಟ್ಟಲು ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಒಂಬತ್ತುಕೆರೆ ಪ್ರದೇಶದ ಮನೆಗಳ ಸಮಸ್ಯೆಯನ್ನು ಟ್ರೋಲ್ ಮಾಡಿದರೆ ಅಲ್ಲಿ ಮನೆಗಳ ನಿರ್ಮಾಣ ಮಾಡಲು ಸಾಧ್ಯವೇ? ಅದರ ಬದಲು ಯೋಜನೆಯನ್ನು ಪೂರ್ಣಗೊಳಿಸುವಂತೆ ಈ ಭಾಗದ ಬಿಜೆಪಿ ಮುಖಂಡರು ವಸತಿ ಸಚಿವರ ಮೇಲೆ ಒತ್ತಡ ತರಬೇಕು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು